ಆರ್. ಮಾಧವನ್ ಖರೀದಿಸಿದ ಹೊಸ ಬಂಗಲೆ ಬೆಲೆ ಬರೋಬ್ಬರಿ 17.5 ಕೋಟಿ ರೂಪಾಯಿ
ಮುಂಬೈನಲ್ಲಿ ನಟ ಆರ್. ಮಾಧವನ್ ಅವರು ಹೊಸ ಮನೆ ಕೊಂಡುಕೊಂಡಿದ್ದಾರೆ. 4,182 ಚದರ ಅಡಿ ವಿಸ್ತೀರ್ಣವಿರುವ ಈ ಮನೆಯ ಫೋಟೋಗಳು ಕಣ್ಣು ಕುಕ್ಕುತ್ತಿವೆ. ‘ಶೈತಾನ್’ ಸಿನಿಮಾದ ಭಾರಿ ಗೆಲುವಿನ ಬಳಿಕ ಮಾಧವನ್ ಅವರಿಗೆ ಅವಕಾಶಗಳು ಹೇರಳವಾಗಿವೆ. ಅದಕ್ಕೆ ತಕ್ಕಂತೆ ಅವರಿಗೆ ಸಂಭಾವನೆ ಸಿಗುತ್ತಿದೆ. ಹಾಗಾಗಿ ಅವರು ಪ್ರಾಪರ್ಟಿ ಖರೀದಿಸಿದ್ದಾರೆ.
ನಟ ಆರ್. ಮಾಧವನ್ ಅವರು ಹೊಸದೊಂದು ಬಂಗಲೆ ಖರೀದಿಸುವ ಮೂಲಕ ಸುದ್ದಿ ಆಗಿದ್ದಾರೆ. ಚಿತ್ರರಂಗದಲ್ಲಿ ಬಹುಬೇಡಿಕೆಯ ಕಲಾವಿದನಾಗಿರುವ ಅವರು ಈಗಾಗಲೇ ಅನೇಕ ಕಡೆಗಳಲ್ಲಿ ಆಸ್ತಿ ಹೊಂದಿದ್ದಾರೆ. ಈಗ ಮುಂಬೈನಲ್ಲಿ ಅವರು ದೊಡ್ಡ ಬಂಗಲೆಗೆ ಒಡೆಯನಾಗಿದ್ದಾರೆ. ಇದರ ಬೆಲೆ ಬರೋಬ್ಬರಿ 17.5 ಕೋಟಿ ರೂಪಾಯಿ. ಇನ್ಮುಂದೆ ಈ ಮನೆಯೇ ಅವರ ಹೊಸ ವಿಳಾಸವಾಗಿರುತ್ತದೆ ಎನ್ನಲಾಗಿದೆ. ಆರ್. ಮಾಧವನ್ ಅವರ ಯಶಸ್ಸನ್ನು ಕಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ. ದಕ್ಷಿಣ ಭಾರತದಲ್ಲಿ ಹಾಗೂ ಬಾಲಿವುಡ್ನಲ್ಲಿ ಆರ್. ಮಾಧವನ್ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ.
ಆರ್. ಮಾಧವನ್ ಅವರ ಪಾಲಿಗೆ 2024ರ ವರ್ಷ ಲಾಭದಾಯಕವಾಗಿದೆ. ಅವರು ನಟಿಸಿದ ‘ಶೈತಾನ್’ ಸಿನಿಮಾ ಮಾರ್ಚ್ 8ರಂದು ಬಿಡುಗಡೆ ಆಯಿತು. ಹಾರರ್ ಕಥಾಹಂದರ ಇರುವ ಆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಖತ್ ಸದ್ದು ಮಾಡಿತು. ಆ ಚಿತ್ರದಲ್ಲಿ ಆರ್. ಮಾಧವನ್ ಅವರು ನೆಗೆಟಿವ್ ಪಾತ್ರ ಮಾಡಿದ್ದಾರೆ. ಜನರನ್ನು ಅವರು ಬೆಚ್ಚಿ ಬೀಳಿಸಿದ್ದಾರೆ. ‘ಶೈತಾನ್’ ಸಕ್ಸಸ್ ನಂತರ ಮಾಧವನ್ ಅವರಿಗೆ ಇದ್ದ ಬೇಡಿಕೆ ಡಬಲ್ ಆಗಿದೆ.
ಕೈ ತುಂಬ ಸಂಭಾವನೆ ಪಡೆಯುವ ಆರ್. ಮಾಧವನ್ ಅವರು ಮುಂಬೈನಲ್ಲಿ ಖರೀದಿಸಿರುವ ಹೊಸ ಮನೆ ಬರೋಬ್ಬರಿ 4,182 ಚದರ ಅಡಿ ವಿಸ್ತೀರ್ಣ ಹೊಂದಿದೆ. ವಿಶಾಲವಾದ ಎರಡು ಪಾರ್ಕಿಂಗ್ ಸ್ಪೇಸ್ ಇದರಲ್ಲಿದೆ. ಕೂಡಲೇ ಶಿಫ್ಟ್ ಆಗಿ ವಾಸಿಸಲು ಬೇಕಾದ ಎಲ್ಲ ಸೌಲಭ್ಯಗಳು ಇದರಲ್ಲಿವೆ. ಯಾವ ಸ್ಟಾರ್ ಹೋಟೆಲ್ಗೂ ಕಡಿಮೆ ಇಲ್ಲದಷ್ಟು ಐಷಾರಾಮಿಯಾಗಿದೆ ಆರ್. ಮಾಧವನ್ ಅವರ ಹೊಸ ಮನೆ. ಇಂಥ ಬಂಗಲೆ ಖರೀದಿಸಿರುವ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.
ಇದನ್ನೂ ಓದಿ: ಮತ್ತೆ ಒಂದಾದ ಕಂಗನಾ ರಣಾವತ್-ಆರ್. ಮಾಧವನ್; ಫೋಟೋ ವೈರಲ್
‘ಶೈತಾನ್’ ಸಿನಿಮಾದಲ್ಲಿ ಅಜಯ್ ದೇವಗನ್, ಜ್ಯೋತಿಕಾ, ಜಾನಕಿ ಬೋಡಿವಾಲಾ ಜೊತೆ ಆರ್. ಮಾಧವನ್ ತೆರೆಹಂಚಿಕೊಂಡರು. ಬಾಕ್ಸ್ ಆಫೀಸ್ನಲ್ಲಿ ಆ ಸಿನಿಮಾ 149 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಹಾರರ್ ಪ್ರಿಯರನ್ನು ರಂಜಿಸಿದ ‘ಶೈತಾನ್’ ಗೆಲುವಿನಿಂದ ಮಾಧವನ್ ವೃತ್ತಿಜೀವನಕ್ಕೆ ಹೊಸ ಮೆರುಗು ಬಂದಿದೆ. ಅವರ ಕೈಯಲ್ಲಿ 5ಕ್ಕೂ ಅಧಿಕ ಸಿನಿಮಾಗಳು ಇವೆ. ನಟನಾಗಿ ಮಾತ್ರವಲ್ಲದೇ ನಿರ್ದೇಶಕನಾಗಿ ಹಾಗೂ ನಿರ್ಮಾಪಕನಾಗಿಯೂ ಮಾಧವನ್ ಗುರುತಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:24 pm, Thu, 25 July 24