Ranbir Kapoor: ರಣಬೀರ್ ಕಪೂರ್ ಜೀವನದ ಮೇಲೆ ಪ್ರಭಾವ ಬೀರಿದ ಎರಡು ಸಿನಿಮಾಗಳಿವು
ತಮ್ಮ ಜೀವನದ ಮೇಲೆ ಬಹಳ ಪ್ರಭಾವ ಬೀರಿದ ಎರಡು ಸಿನಿಮಾಗಳನ್ನು ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಹೆಸರಿಸಿದ್ದಾರೆ. ಆ ಎರಡು ಸಿನಿಮಾಗಳನ್ನು ನೀವು ನೋಡಿದ್ದೀರಾ?
ರಣಬೀರ್ ಕಪೂರ್ (Ranbir Kapoor) ಬಾಲಿವುಡ್ನ ಸ್ಟಾರ್ ನಟರಲ್ಲೊಬ್ಬರಾಗಿರುವ ಜೊತೆಗೆ ಬಾಲಿವುಡ್ ಅನ್ನು ಕಟ್ಟಿದ ಕಪೂರ್ ಕುಟುಂಬಕ್ಕೆ ಸೇರಿದವರು. ಸಿನಿಮಾ ಸೆಟ್ಗಳಲ್ಲಿ, ಸ್ಟುಡಿಯೋಗಳಲ್ಲೇ ಬಾಲ್ಯ ಕಳೆದ ರಣಬೀರ್ ಕಪೂರ್ ಸಿನಿಮಾಗಳನ್ನು ನೋಡುತ್ತಲೇ ಬೆಳೆದವರು. ಆದರೆ ಅವರ ಜೀವನದ ಮೇಲೆ ಬಹಳ ಪ್ರಭಾವ ಬೀರಿದ ಸಿನಿಮಾಗಳು, ರಣಬೀರ್, ಅತ್ಯುತ್ತಮ ಎಂದು ಭಾವಿಸುವುದು ಎರಡು ಸಿನಿಮಾಗಳನ್ನಷ್ಟೆ. ಇತ್ತೀಚೆಗೆ ಬಿಡುಗಡೆ ಆದ ರಣಬೀರ್ ಕಪೂರ್ ನಟನೆಯ ತು ಜೂಟಿ ಮೇ ಮಕ್ಕಾರ್ ಸಿನಿಮಾದ ಪ್ರಮೋಷನ್ ಸಂದರ್ಭದಲ್ಲಿ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ರಣಬೀರ್ ಕಪೂರ್, ತಮ್ಮ ಮೇಲೆ ಪ್ರಭಾವ ಬೀರಿದ, ತಾವು ಅತ್ಯುತ್ತಮ ಎಂದು ಭಾವಿಸುವ ಎರಡು ಸಿನಿಮಾಗಳನ್ನು ಹೆಸರಿಸಿದ್ದಾರೆ.
ರಣಬೀರ್ ಕಪೂರ್ ಅವರ ತಾತ ರಾಜ್ ಕಪೂರ್ ನಿರ್ದೇಶನ ಮಾಡಿ ನಟಿಸಿದ್ದ ಐಕಾನಿಕ್ ಸಿನಿಮಾ ಶ್ರೀ 420 ರಣಬೀರ್ ಕಪೂರ್ ಮೇಲೆ ಬಹಳ ಪ್ರಭಾವ ಬೀರಿದ ಸಿನಿಮಾ. ಸಾಮಾನ್ಯ ಬಡ ಯುವಕನೊಬ್ಬನನ್ನು ಶ್ರೀಮಂತರು ಅವಮಾನ ಮಾಡಿದಾಗ ಹಣ ಮಾಡಲು ಅಡ್ಡ ದಾರಿ ಹಿಡಿಯುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಎವರ್ ಗ್ರೀನ್ ಹಾಡಾಗಿರುವ ‘ಪ್ಯಾರ್ ಹುವಾ ಎಕರಾರ್ ಹುವಾ’ ಹಾಡು ಇದೇ ಸಿನಿಮಾದ್ದು.
ರಣಬೀರ್ ಕಪೂರ್ ಮೇಲೆ ಬೀರಿದ ಎರಡನೇ ಸಿನಿಮಾ ಇಟಲಿಯ ಲಾ ವೆಟ್ಟ ಇ ಬೆಲ್ಲ ಇಂಗ್ಲೀಷ್ನಲ್ಲಿ ಈ ಸಿನಿಮಾದ ಹೆಸರು ಲೈಫ್ ಈಸ್ ಬ್ಯೂಟಿಫುಲ್. ಆಸ್ಕರ್ ವಿಜೇತ ಈ ಸಿನಿಮಾ ಸಹ ರಣಬೀರ್ ಕಪೂರ್ ಮೇಲೆ ಬಹಳ ಪ್ರಭಾವ ಬೀರಿದೆಯಂತೆ. ಈ ಎರಡೂ ಸಿನಿಮಾಗಳ ಜಾನರ್ ಒಂದೇ, ಮುಗ್ಧತೆ ಹಾಗೂ ಪ್ರೀತಿಯೇ ಈ ಸಿನಿಮಾಗಳ ಪ್ರಧಾನ ಅಂಶ ಎಂದಿದ್ದಾರೆ ರಣಬೀರ್ ಕಪೂರ್. ನನಗೆ ಸಿನಿಮಾ ನಿರ್ದೇಶಿಸಬೇಕು ಎಂಬ ಆಸೆಯಿದೆ. ಒಂದೊಮ್ಮೆ ನಾನು ಸಿನಿಮಾ ನಿರ್ದೇಶನ ಮಾಡಿದರೆ ನನ್ನ ಗುರಿ ಈ ಎರಡು ಸಿನಿಮಾಗಳ ಮಾದರಿಯ ಸಿನಿಮಾ ಮಾಡುವುದೇ ಆಗಿರುತ್ತದೆ ಎಂದಿದ್ದಾರೆ ರಣಬೀರ್ ಕಪೂರ್.
ಇದನ್ನೂ ಓದಿ: ಸೈಲೆಂಟ್ ಆಗಿ 100 ಕೋಟಿ ರೂ. ಗಳಿಸಿದ ರಣಬೀರ್ ಕಪೂರ್ ಸಿನಿಮಾ ‘ತು ಜೂಟಿ ಮೈ ಮಕ್ಕಾರ್’
ಕೆಲವು ದಿನಗಳ ಹಿಂದೆ ಮತ್ತೊಂದು ಸಂದರ್ಶನದಲ್ಲಿ ಮಾತನಾಡಿದ್ದ ನಟ ರಣಬೀರ್ ಕಪೂರ್, ಇತ್ತೀಚಿನ ದಿನಗಳಲ್ಲಿ ತಮ್ಮ ಮೇಲೆ ಹಾಗೂ ತಮ್ಮ ಸಿನಿಮಾ ಆಯ್ಕೆ ವಿಧಾನದ ಮೇಲೆ ಬಹಳ ಪ್ರಭಾವ ಬೀರಿದ ಸಿನಿಮಾಗಳನ್ನು ಹೆಸರಿಸಿದ್ದರು. ಕನ್ನಡದ ಕೆಜಿಎಫ್, ತೆಲುಗಿನ ಪುಷ್ಫ ಹಾಗೂ ಆರ್ಆರ್ಆರ್ ಸಿನಿಮಾಗಳು ಅವರ ಸಿನಿಮಾ ಆಯ್ಕೆಯ ವಿಧಾನದ ಮೇಲೆ ಬಹಳ ಪ್ರಭಾವ ಬೀರಿದವಂತೆ. ಅದರಲ್ಲಿಯೂ ಆರ್ಆರ್ಆರ್ ಸಿನಿಮಾ ನೋಡಿದಾಗ ಇದೇ ರೀತಿಯ ಸಿನಿಮಾದಲ್ಲಿ ನಾನೂ ನಟಿಸಬೇಕು ಎಂದುಕೊಂಡರಂತೆ ರಣಬೀರ್.
ಸಾಲು-ಸಾಲು ಹಿಂದಿ ಸಿನಿಮಾಗಳು ಸೋಲುತ್ತಿದ್ದ ಸಮಯದಲ್ಲಿ ಬಿಡುಗಡೆ ಆದ ರಣಬೀರ್ ಕಪೂರ್ರ ಬ್ರಹ್ಮಾಸ್ತ್ರ ಸಿನಿಮಾ ಸೂಪರ್ ಹಿಟ್ ಆಯಿತು. ಕಳೆದ ವಾರವಷ್ಟೆ ಬಿಡುಗಡೆ ಆದ ತು ಜೂಟಿ ಮೇ ಮಕ್ಕಾರ್ ಸಿನಿಮಾ ಸಹ ಹಿಟ್ ಆಗಿದ್ದು ನೂರು ಕೋಟಿಗೂ ಹೆಚ್ಚು ಹಣ ಕಲೆಕ್ಷನ್ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:27 pm, Mon, 20 March 23