11 ವರ್ಷಗಳ ಬಳಿಕ ಹಾಡು ಹಾಡಿದ ಸಲ್ಮಾನ್ ಖಾನ್: ‘ಮಾತೃಭೂಮಿ’ ಚಿತ್ರದ ಹೊಸ ಸಾಂಗ್ ರಿಲೀಸ್
ಬಾಲಿವುಡ್ ನಟ ಸಲ್ಮಾನ್ ಖಾನ್ ಬರೋಬ್ಬರಿ 11 ವರ್ಷಗಳ ಬಳಿಕ 'ಮಾತೃಭೂಮಿ' ಸಿನಿಮಾದ ಮೂಲಕ ಹಿನ್ನೆಲೆ ಗಾಯನಕ್ಕೆ ವಾಪಸಾಗಿದ್ದಾರೆ. ಸಲ್ಮಾನ್ ಹಾಗೂ ಚಿತ್ರಾಂಗದಾ ಸಿಂಗ್ ಜೋಡಿಯಾಗಿ ನಟಿಸಿರುವ ಈ ಚಿತ್ರದ ಹೊಸ ಹಾಡು ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಮುಖ್ಯಾಂಶಗಳು
- ಹಾಡು ಹಾಡಿ ಅಚ್ಚರಿ ಮೂಡಿಸಿದ ಸಲ್ಮಾನ್ ಖಾನ್
- 11 ವರ್ಷಗಳ ಬಳಿಕ ವಾಪಸಾತಿ
- ಚಿತ್ರಾಂಗದಾ ಸಿಂಗ್ ಜೊತೆ ರೋಮ್ಯಾನ್ಸ್
ಸಲ್ಮಾನ್ ಖಾನ್ ಅವರು ಕೇವಲ ನಟ ಮಾತ್ರ ಅಲ್ಲ, ಉತ್ತಮ ಗಾಯಕರೂ ಹೌದು. ಅವರು ‘ಮಾತೃಭೂಮಿ’ ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರದ ಹೊಸ ಹಾಡು ಬಿಡುಗಡೆಯಾಗಿದೆ. ವಿಶೇಷವೆಂದರೆ ಈ ಹಾಡನ್ನು ಸಲ್ಮಾನ್ ಖಾನ್ ಅವರೇ ಹಾಡಿದ್ದಾರೆ ಅನ್ನೋದು ವಿಶೇಷ. 11 ವರ್ಷಗಳ ಬಳಿಕ ಹಿನ್ನೆಲೆ ಗಾಯನಕ್ಕೆ ವಾಪಸಾಗಿದ್ದಾರೆ. ಈ ಹಾಡನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ.
ಸಲ್ಮಾನ್ ಖಾನ್ ಫಿಲ್ಮ್ಸ್ ಮ್ಯೂಸಿಕ್ ಯೂಟ್ಯೂಬ್ ಚಾನಲ್‌ನಲ್ಲಿ ಈ ಹಾಡು ಬಿಡುಗಡೆಯಾಗಿದೆ. ‘ತೇರಿ ಸೆಕ್ಸಿ ಬ್ಯೂಟಿ’ ಎಂಬುದು ಹಾಡಿನ ಹೆಸರು ಸ್ಟುಡಿಯೋದಲ್ಲಿ ಸಲ್ಮಾನ್ ಖಾನ್ ಹೆಡ್‌ಫೋನ್ ಧರಿಸಿ ಹಾಡು ಹೇಳುವ ದೃಶ್ಯಗಳೊಂದಿಗೆ ಸಾಂಗ್ ಆರಂಭವಾಗುತ್ತದೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಜೋಡಿಯಾಗಿ ನಟಿಸಿರುವ ಚಿತ್ರಾಂಗದಾ ಸಿಂಗ್ ಅವರು ಕೆಂಪು ಸೀರೆ ಧರಿಸಿ ಗಿಟಾರ್ ನುಡಿಸುತ್ತಾ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ಅವರ ಈ ಹೊಸ ಹಾಡು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
‘ತೇರಿ ಸೆಕ್ಸಿ ಬ್ಯೂಟಿ’ ಹಾಡು ವಿಮಾನ ನಿಲ್ದಾಣದ ಸೆಟ್‌ನಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರಾಂಗದಾ ಸಿಂಗ್ ಹಾಗೂ ಇತರ ಡ್ಯಾನ್ಸರ್ಸ್ ಏರ್ ಹೋಸ್ಟೆಸ್ ಉಡುಪಿನಲ್ಲಿ ಮಿಂಚಿದ್ದಾರೆ. ಸಲ್ಮಾನ್ ಖಾನ್ ತಮ್ಮ ಸಹೋದ್ಯೋಗಿ ಸೈನಿಕರೊಂದಿಗೆ ಹೆಜ್ಜೆ ಹಾಕಿದ್ದಾರೆ. ಸಾಜಿದ್ ಖಾನ್ ಈ ಹಾಡಿಗೆ ಸಾಹಿತ್ಯ ಬರೆದು ಸಂಗೀತ ಸಂಯೋಜನೆ ಮಾಡಿದ್ದಾರೆ. ಸಲ್ಲು ಜೊತೆ ಮುಸ್ಕಾನ್ ಕೂಡ ಈ ಹಾಡಿಗೆ ಧ್ವನಿಯಾಗಿದ್ದಾರೆ. ಸಲ್ಮಾನ್ ಖಾನ್ ಈ ಹಿಂದೆ ‘ಕಿಕ್’ ಹಾಗೂ ‘ಹೀರೋ’ ಸಿನಿಮಾಗಳಿಗೂ ಹಾಡಿದ್ದರು.
ಅಪೂರ್ವ ಲಖಿಯಾ ನಿರ್ದೇಶನದ ‘ಮಾತೃಭೂಮಿ’ ಸಿನಿಮಾ ಭಾರತ ಹಾಗೂ ಚೀನಾ ನಡುವಿನ ಗಡಿ ಸಂಘರ್ಷದ ಕಥೆಯನ್ನು ಆಧರಿಸಿದೆ. ಈ ಹಿಂದೆ ಈ ಚಿತ್ರಕ್ಕೆ ‘ಬ್ಯಾಟಲ್ ಆಫ್ ಗಲ್ವಾನ್’ ಎಂದು ಹೆಸರಿಡಲಾಗಿತ್ತು. ಆದರೆ ಕೆಲವು ವಿವಾದ ಹಾಗೂ ಸೆನ್ಸಾರ್ ತೊಂದರೆಗಳಿಂದಾಗಿ ಸಿನಿಮಾದ ಬಿಡುಗಡೆ ದಿನಾಂಕ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಚಿತ್ರತಂಡ ಈಗಾಗಲೇ ಐದು ಹಾಡುಗಳನ್ನು ರಿಲೀಸ್ ಮಾಡಿದ್ದು, ಪ್ರೇಕ್ಷಕರಲ್ಲಿ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.
ಇದನ್ನೂ ಓದಿ: ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಬಳಿಕ ಭಾರೀ ಭದ್ರತೆಯಲ್ಲಿ ಮನೆಯಿಂದ ಹೊರಬಂದ ಸಲ್ಮಾನ್ ಖಾನ್
ದೇಶಭಕ್ತಿ ಸಾರುವ ಗೀತೆಗಳು ಹಾಗೂ ರೊಮ್ಯಾಂಟಿಕ್ ಹಾಡುಗಳು ಈ ಚಿತ್ರದಲ್ಲಿವೆ. ಹಿಮೇಶ್ ರೇಷಮಿಯಾ ಹಾಗೂ ಅಯಾನ್ ಲಾಲ್ ಸಂಗೀತ ನಿರ್ದೇಶನದಲ್ಲಿ ಈ ಹಾಡುಗಳು ಮೂಡಿಬಂದಿವೆ. ಸಲ್ಮಾನ್ ಖಾನ್ ನಟನೆಯ ಈ ಸಿನಿಮಾದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಲ್ಮಾನ್ ಅವರ ಗಾಯನವಿರುವ ಈ ಹೊಸ ಹಾಡು ಚಿತ್ರದ ಹೈಲೈಟ್ ಆಗಿ ಮೂಡಿಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




