Sameer Wankhede: ಸಮೀರ್ ವಾಂಖೆಡೆ-ಶಾರುಖ್ ಖಾನ್ ನಡುವಿನ ವಾಟ್ಸಪ್ ಮೆಸೇಜ್ ಬಹಿರಂಗ; ಡ್ರಗ್ಸ್ ಪ್ರಕರಣಕ್ಕೆ ಟ್ವಿಸ್ಟ್
Shah Rukh Khan: ಮಗನನ್ನು ಜೈಲಿನಿಂದ ಹೊರಗೆ ಕರೆತರಲು ಶಾರುಖ್ ಖಾನ್ ಅವರು ಸಾಕಷ್ಟು ಕಷ್ಟಪಟ್ಟಿದ್ದರು. ಜಾಮೀನು ಪಡೆಯಲು ಅವರು ಹರಸಾಹಸ ಮಾಡಬೇಕಾಗಿತ್ತು.
ಖ್ಯಾತ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ (Aryan Khan) ಮೇಲೆ ಡ್ರಗ್ಸ್ ಸೇವನೆಯ ಆರೋಪ ಹೊರಿಸಲಾಗಿತ್ತು. ಆಗ ಪ್ರಕರಣದ ತನಿಖೆ ಮಾಡಿದ್ದ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಾರುಖ್ ಖಾನ್ (Shah Rukh Khan) ಅವರಿಂದ 25 ಕೋಟಿ ರೂಪಾಯಿ ವಸೂಲಿ ಮಾಡಲು ಸಮೀರ್ ವಾಂಖೆಡೆ ಪ್ರಯತ್ನಿಸಿದ್ದರು ಎಂಬ ಆರೋಪ ಇದೆ. ಈ ವಿಚಾರ ಈಗ ಕೋರ್ಟ್ ಮೆಟ್ಟಿಲೇರಿದ್ದು, ತಾವು ನಿರಪರಾಧಿ ಎಂದು ಸಾಬೀತು ಮಾಡಲು ಸಮೀರ್ ವಾಂಖೆಡೆ ಒಂದಷ್ಟು ಸಾಕ್ಷ್ಯಗಳನ್ನು ಒದಗಿಸುತ್ತಿದ್ದಾರೆ. ನ್ಯಾಯಾಲಯಕ್ಕೆ ಅವರು ಸಲ್ಲಿಸಿರುವ ಮನವಿಯಲ್ಲಿ ಕೆಲವು ವಾಟ್ಸಪ್ ಮೆಸೇಜ್ಗಳ ಸ್ಕ್ರೀನ್ ಶಾಟ್ ಇದೆ. ಶಾರುಖ್ ಖಾನ್ ಜೊತೆ ಸಮೀರ್ ವಾಂಖೆಡೆ (Sameer Wankhede) ನಡೆಸಿದ್ದರು ಎನ್ನಲಾದ ವಾಟ್ಸಪ್ ಸಂದೇಶಗಳ ಸ್ಕ್ರೀನ್ ಶಾಟ್ ಕೂಡ ಇದರಲ್ಲಿ ಸೇರಿಸಲಾಗಿದೆ.
ಮಗನನ್ನು ಜೈಲಿನಿಂದ ಹೊರಗೆ ಕರೆತರಲು ಶಾರುಖ್ ಖಾನ್ ಅವರು ಸಾಕಷ್ಟು ಕಷ್ಟಪಟ್ಟಿದ್ದರು. ಜಾಮೀನು ಪಡೆಯಲು ಅವರು ಹರಸಾಹಸ ಮಾಡಬೇಕಾಗಿತ್ತು. ಆ ಸಂದರ್ಭದಲ್ಲಿ ಅವರು ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆಗೆ ಮೆಸೇಜ್ ಮಾಡಿದ್ದರು ಎನ್ನಲಾಗಿದೆ. ‘ಆರ್ಯನ್ ಖಾನ್ ಜೈಲಿನಲ್ಲಿ ಇರುವುದು ಬೇಡ. ಅದರಿಂದ ಅವನು ಕುಗ್ಗಿ ಹೋಗುತ್ತಾನೆ’ ಎಂದು ಶಾರುಖ್ ಖಾನ್ ಮನವಿ ಮಾಡಿಕೊಂಡಿದ್ದರು ಎನ್ನಲಾಗಿದೆ.
ಇದನ್ನೂಓದಿ: ನವಾಬ್ ಮಲ್ಲಿಕ್ ಬೆನ್ನು ಬಿದ್ದ ಸಮೀರ್ ವಾಂಖೆಡೆ ತಂದೆ; ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲು
‘ನಿಮ್ಮವರು ಮೃದುವಾಗಿ ನಡೆದುಕೊಳ್ಳಲಿ. ನೀವು ಒಳ್ಳೆಯದನ್ನು ಸಾಧಿಸಲು ಪ್ರಯತ್ನಿಸುತ್ತಿರುವುದಕ್ಕೆ ನಾನು ನಿಮಗೆ ಸಹಾಯ ಮಾಡುತ್ತೇನೆ. ಎಲ್ಲಾ ಸಮಯದಲ್ಲೂ ನಿಮ್ಮೊಂದಿಗೆ ನಿಲ್ಲುತ್ತೇನೆ. ಅದಕ್ಕಾಗಿ ನಾನು ಆಣೆ ಮಾಡುತ್ತೇನೆ. ದಯವಿಟ್ಟು ನನ್ನ ಮತ್ತು ನನ್ನ ಕುಟುಂಬದ ಮೇಲೆ ಕರುಣೆ ತೋರಿಸಿ ಎಂದು ನಾನು ಬೇಡಿಕೊಳ್ಳುತ್ತೇನೆ. ನಮ್ಮದು ಸಿಂಪಲ್ ಜೀವನ. ನನ್ನ ಮಗ ಸ್ವಲ್ಪ ದಾರಿ ತಪ್ಪಿದ್ದಾನೆ. ಆದರೆ ಅವನು ಕಠಿಣ ಅಪರಾಧಿಯಂತೆ ಜೈಲಿನಲ್ಲಿರಲು ಅರ್ಹನಲ್ಲ. ಅದು ನಿಮಗೂ ಗೊತ್ತು. ದಯವಿಟ್ಟು ಸಹಾಯ ಮಾಡಿ’ ಎಂದು ಶಾರುಖ್ ಖಾನ್ ಮೆಸೇಜ್ ಮಾಡಿದ್ದರು ಎನ್ನಲಾಗಿದೆ.
ಇದನ್ನೂಓದಿ: ಶಾರುಖ್ ಮಗನನ್ನು ಬಂಧಿಸಿದ್ದ ಸಮೀರ್ ವಾಂಖೆಡೆಗೆ ಶಾಕ್; ಪ್ರಕರಣದ ತನಿಖೆಯಿಂದಲೇ ಕೊಕ್
‘ದಯವಿಟ್ಟು ಈ ವಿನಂತಿಯನ್ನು ಪರಿಗಣಿಸಿದರೆ ದೊಡ್ಡ ಉಪಕಾರವಾಗುತ್ತದೆ. ಏಕೆಂದರೆ ಮಗ ಮನೆಗೆ ಬರಬೇಕು ಎಂದು ನಾವು ಬಯಸಿದ್ದೇವೆ. ಅವನನ್ನು ಅಪರಾಧಿಯಂತೆ ಜೈಲಿನಲ್ಲಿ ನೋಡಲು ಇಷ್ಟವಿಲ್ಲ. ತಂದೆಯಾಗಿ ಸೂಕ್ತ ರೀತಿಯಲ್ಲಿ ವಿನಂತಿಸುತ್ತಿದ್ದೇನೆ. ಅವನ ಸಲುವಾಗಿ ದಯವಿಟ್ಟು ನೀವು ನನ್ನ ಮನವಿಯನ್ನು ಪರಿಗಣಿಸುತ್ತೀರಿ ಅಂತ ನಾನು ಭಾವಿಸುತ್ತೇನೆ’ ಎಂದು ಶಾರುಖ್ ಖಾನ್ ಮೆಸೇಜ್ ಮಾಡಿರುವ ಸ್ಕ್ರೀನ್ ಶಾಟ್ಗಳನ್ನು ಕೋರ್ಟ್ಗೆ ಸಲ್ಲಿಸಲಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.