ಮಧ್ಯ ರಾತ್ರಿ ಕ್ಯಾಬ್ ಚಾಲಕನ ವರ್ತನೆಗೆ ಶಾಕ್ ಆದ 21 ವರ್ಷದ ಯುವತಿ; ಇದು ಭಯಾನಕ ಎಂದ ನಟಿ
‘21ರ ಪ್ರಾಯದ ನನ್ನ ಸಂಬಂಧಿಗೆ ಆದ ಈ ಘಟನೆ ನಿಜಕ್ಕೂ ಭಯಾನಕ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಶಬಾನಾ ಆಜ್ಮಿ ಅವರು ಟ್ವೀಟ್ ಮಾಡಿದ್ದಾರೆ.
ಮಧ್ಯ ರಾತ್ರಿ ಪ್ರಯಾಣ ಮಾಡುವುದು ಕಷ್ಟಕರ. ಸದಾ ಜಾಗೃತವಾಗಿರುವ ಮಹಾನಗರಗಳಲ್ಲಿ ಕೂಡ ರಾತ್ರಿ ಸಮಯ ಭಯ ಹುಟ್ಟಿಸುತ್ತದೆ. ಒಂದು ಏರಿಯಾದಿಂದ ಇನ್ನೊಂದು ಏರಿಯಾಗೆ ತೆರಳಲು ಸರಿಯಾಗಿ ವಾಹನಗಳು ಸಿಗುವುದಿಲ್ಲ. ಕೆಲವು ರಸ್ತೆಗಳಲ್ಲಿ ಜನರೇ ಇರುವುದಿಲ್ಲ. ಅಂಥ ಕಡೆಗಳಲ್ಲಿ ಬೀದಿ ದೀಪಗಳು ಕೆಟ್ಟು ಹೋಗಿದ್ದರೆ ಅಲ್ಲಿ ಸಂಚರಿಸುವಾಗ ಎದೆಯಲ್ಲಿ ಢವ ಢವ ಎನ್ನುತ್ತದೆ. ಇಂಥ ಪರಿಸ್ಥಿತಿಯಲ್ಲಿ ಜನರು ಹೆಚ್ಚಾಗಿ ಅವಲಂಬಿಸುವುದು ಕ್ಯಾಬ್ಗಳನ್ನು. ಕ್ಯಾಬ್ ಚಾಲಕರು (Cab Driver) ಪ್ರಯಾಣಿಕರನ್ನು ಸೇಫ್ ಮನೆ ಬಾಗಿಲಿನವರೆಗೆ ತಲುಪಿಸುತ್ತಾರೆ ಎಂಬ ಧೈರ್ಯ ಇರುತ್ತದೆ. ಆದರೆ ಕ್ಯಾಬ್ ಚಾಲಕರೇ ನಡುರಸ್ತೆಯಲ್ಲಿ ಕೈ ಕೊಟ್ಟರೆ? ಅಂಥ ಒಂದು ಘಟನೆ ಮುಂಬೈನಲ್ಲಿ (Mumbai) ನಡೆದಿದೆ. ಆ ಬಗ್ಗೆ ಬಾಲಿವುಡ್ನ ಹಿರಿಯ ನಟಿ ಶಬಾನಾ ಆಜ್ಮಿ (Shabana Azmi) ಅವರು ಟ್ವೀಟ್ ಮಾಡಿದ್ದಾರೆ. ಶಬಾನಾ ಅವರ ಸಂಬಂಧಿಯೊಬ್ಬರಿಗೆ ಇಂಥ ಕೆಟ್ಟ ಅನುಭವ ಆಗಿದೆ. 21ರ ಪ್ರಾಯದ ಯುವತಿಗೆ ಕ್ಯಾಬ್ ಚಾಲಕನಿಂದ ಎದುರಾದ ಕಷ್ಟದ ಪರಿಸ್ಥಿತಿಯನ್ನು ‘ಭಯಾನಕ’ ಎಂದು ಶಬಾನಾ ಹೇಳಿದ್ದಾರೆ. ಆ ರೀತಿ ನಡೆದುಕೊಂಡ ಕ್ಯಾಬ್ ಕಂಪನಿಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಶಬಾನಾ ಆಜ್ಮಿ ಅವರ ಸಂಬಂಧಿ ಮೇಘನಾ ವಿಶ್ವಕರ್ಮ ಅವರು ಇತ್ತೀಚೆಗೆ ಮುಂಬೈನಲ್ಲಿ ಮಧ್ಯರಾತ್ರಿ ಪ್ರಯಾಣ ಮಾಡುತ್ತಿದ್ದರು. ಅದಕ್ಕಾಗಿ ಅವರು ಕ್ಯಾಬ್ ಬುಕ್ ಮಾಡಿದ್ದರು. ರೈಡ್ ಅಕ್ಸೆಪ್ಟ್ ಮಾಡಿದ ಆ ಕ್ಯಾಬ್ ಚಾಲಕ 5 ನಿಮಿಷದ ಬಳಿಕ ಮನಸ್ಸು ಬದಲಾಯಿಸಿದ. ಮುಂದಿನ ದಾರಿಯಲ್ಲಿ ಟ್ರಾಫಿಕ್ ಇರೋದರಿಂದ ತಾನು ಮನೆ ಸೇರುವುದು ಲೇಟ್ ಆಗಬಹುದು ಅಂತ ಆತನಿಗೆ ಅನಿಸಿತು. ಕೂಡಲೇ ಮೇಘನಾ ಅವರನ್ನು ಕ್ಯಾಬ್ನಿಂದ ಕೆಳಗೆ ಇಳಿಯುವಂತೆ ಆತ ಸೂಚಿಸಿದ. ಆ ಘಟನೆಯನ್ನು ಮೇಘನಾ ವಿವರಿಸಿದ್ದಾರೆ.
‘ದಾದರ್ ಬ್ರಿಡ್ಜ್ ಸಮೀಪ ಆತ ನನ್ನನ್ನು ಕೆಳಗೆ ಇಳಿಸಿದ. ಆಗ ಮಧ್ಯ ರಾತ್ರಿ ಆಗಿತ್ತು. ಆ ಸಮಯದಲ್ಲಿ ಇನ್ನೊಂದು ಕ್ಯಾಬ್ ಸಿಗುವುದು ಕೂಡ ಕಷ್ಟ. ನಂತರ ಬ್ರಿಡ್ಜ್ ಮೇಲಿಂದ ನಾನು ದಾದರ್ ಮಾರ್ಕೆಟ್ ತನಕ ನಡೆದುಕೊಂಡು ಹೋದೆ. ನಾನು ತಲುಪಬೇಕಾಗಿದ್ದ ಸ್ಥಳಕ್ಕೆ ರೀಚ್ ಆಗಲು 2 ಗಂಟೆ ಬೇಕಾಯಿತು’ ಎಂದು ವಿವರಿಸಿರುವ ಮೇಘನಾ ಅವರು ಚಾಲಕನ ವಿವರವನ್ನೂ ಪೋಸ್ಟ್ ಮಾಡಿದ್ದಾರೆ.
ಮೇಘನಾ ಎದುರಾದ ಪರಿಸ್ಥಿತಿಯನ್ನು ‘ಭಯಾನಕ’ ಎಂದು ಶಬಾನಾ ಆಜ್ಮಿ ಹೇಳಿದ್ದಾರೆ. ‘21ರ ಪ್ರಾಯದ ನನ್ನ ಸಂಬಂಧಿಗೆ ಆದ ಈ ಘಟನೆ ನಿಜಕ್ಕೂ ಭಯಾನಕ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಈ ವಿಷಯದ ಕುರಿತು ನೆಟ್ಟಿಗರು ಪರ-ವಿರೋಧ ಅಭಿಪ್ರಾಯ ತಿಳಿಸುತ್ತಿದ್ದಾರೆ. ಕಮೆಂಟ್ಗಳ ಮೂಲಕ ಚರ್ಚೆ ಮಾಡುತ್ತಿದ್ದಾರೆ.
My 21 yr old niece had a horrific experience with @Olacabs.https://t.co/37D8WIuWXr totally unacceptable @ola_supports
— Azmi Shabana (@AzmiShabana) February 26, 2022
ಶಬಾನಾ ಆಜ್ಮಿ ಮನೆಯಲ್ಲಿ ಮದುವೆ ಸಡಗರ:
ಜಾವೇದ್ ಅಖ್ತರ್ ಮತ್ತು ಶಬಾನಾ ಆಜ್ಮಿ ದಂಪತಿಯ ಪುತ್ರ ಫರ್ಹಾನ್ ಅಖ್ತರ್ ಅವರು ಬಹುಕಾಲದ ಗೆಳತಿ ಶಿಬಾನಿ ದಂಡೇಕರ್ ಜೊತೆಗೆ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಶಬಾನಾ ಆಜ್ಮಿ-ಜಾವೇದ್ ಅಖ್ತರ್ ಅವರ ಖಂಡಾಲದ ಮನೆಯಲ್ಲಿ ಮದುವೆ ನೆರವೇರಿತು. ಈ ಸಮಾರಂಭಕ್ಕೆ ಕೆಲವೇ ಮಂದಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಬಳಿಕ ಮುಂಬೈನಲ್ಲಿ ಅದ್ದೂರಿಯಾಗಿ ಪಾರ್ಟಿ ನೀಡಲಾಗಿದ್ದು, ಅದರಲ್ಲಿ ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದರು.
ಇದನ್ನೂ ಓದಿ:
Shabana Azmi: ಆಲ್ಕೋಹಾಲ್ ಆರ್ಡರ್ ಮಾಡಿದ ಶಬಾನಾ ಆಜ್ಮಿಗೆ ಮೋಸ; ಪೊಲೀಸರ ಮೊರೆ ಹೋದ ಖ್ಯಾತ ನಟಿ
ಎರಡನೇ ಮದುವೆ ಮಾಡಿಕೊಂಡ ಫರ್ಹಾನ್ ಅಖ್ತರ್; ಪ್ರೇಯಸಿ ಶಿಬಾನಿ ಜತೆ ಸಿಂಪಲ್ ವಿವಾಹ
Published On - 11:59 am, Sun, 27 February 22