AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೇಪಾಳ ಪ್ರವಾಹ ಸಂತ್ರಸ್ತರಿಗೆ ಸೋನು ಸೂದ್ ನೆರವು ನೀಡಿದ್ದು ಪ್ರಚಾರಕ್ಕಾಗಿ? ತಿರುಗೇಟು ಕೊಟ್ಟ ನಟ

ಜನರಿಗೆ ಕಷ್ಟ ಬಂದಾಗ ನಟ ಸೋನು ಸೂದ್ ಅವರು ನೆರವು ನೀಡಲು ಮುಂದಾಗುತ್ತಾರೆ. ಈಗ ಅವರು ನೇಪಾಳಕ್ಕೆ ತೆರಳಿ, ಅಲ್ಲಿನ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡುತ್ತಿದ್ದಾರೆ. ಆದರೆ ಅವರ ಈ ಕಾರ್ಯವನ್ನು ಪ್ರಚಾರದ ತಂತ್ರ ಎಂದು ಕೆಲವರು ಟೀಕಿಸಿದ್ದು, ಅಂಥವರಿಗೆ ಸೋನು ಸೂದ್ ಕೂಲ್ ಆಗಿ ಉತ್ತರ ನೀಡಿದ್ದಾರೆ.

ನೇಪಾಳ ಪ್ರವಾಹ ಸಂತ್ರಸ್ತರಿಗೆ ಸೋನು ಸೂದ್ ನೆರವು ನೀಡಿದ್ದು ಪ್ರಚಾರಕ್ಕಾಗಿ? ತಿರುಗೇಟು ಕೊಟ್ಟ ನಟ
Sonu Sood In NepalImage Credit source: Instagram/sonu_sood
ಮದನ್​ ಕುಮಾರ್​
|

Updated on:Sep 03, 2026 | 4:56 PM

Share

ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹವು ಅಪಾರ ಪ್ರಮಾಣದ ಜೀವ ಮತ್ತು ಆಸ್ತಿಪಾಸ್ತಿಯನ್ನು ಬಲಿ ಪಡೆದಿದೆ. ನೂರಾರು ಜನರು ತಮ್ಮವರನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದರೆ, ಇನ್ನು ಕೆಲವರು ನಾಪತ್ತೆಯಾಗಿದ್ದಾರೆ. ಈ ಕಠಿಣ ಪರಿಸ್ಥಿತಿಯಲ್ಲಿ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿರುವ ಬಾಲಿವುಡ್ ನಟ ಹಾಗೂ ಸಮಾಜ ಸೇವಕ ಸೋನು ಸೂದ್, ಸ್ವತಃ ನೇಪಾಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಇದು ಪ್ರಚಾರದ ತಂತ್ರ ಎಂದು ಕೆಲವರು ಟೀಕಿಸಿದ್ದಾರೆ.

ಹೌದು, ನೇಪಾಳಕ್ಕೆ ತಲುಪಿದ ಸೋನು ಸೂದ್ ಅವರಿಗೆ ಒಂದೆಡೆ ಮೆಚ್ಚುಗೆ ವ್ಯಕ್ತವಾಗಿದ್ದರೆ, ಇನ್ನೊಂದೆಡೆ ಟೀಕೆಗಳೂ ವ್ಯಕ್ತವಾಗಿವೆ. ಹಿರಿಯ ಪತ್ರಕರ್ತ ಅಜಿತ್ ಅಂಜುಮ್ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿ, ‘ಇದು ಸೋನು ಸೂದ್ ಅವರ ಮಾರ್ಕೆಟಿಂಗ್ ಅಲ್ಲದೆ ಇನ್ನೇನು? ನೇಪಾಳಕ್ಕೆ ಕಾಲಿಡುತ್ತಿದ್ದಂತೆ ಅಲ್ಲಿನ ಮಕ್ಕಳ ‘ರಕ್ಷಕ’ನಂತೆ ಬಿಂಬಿಸಿಕೊಳ್ಳಲಾಗುತ್ತಿದೆ. ಇನ್ನೂ ಕೆಲಸವೇ ಆರಂಭವಾಗಿಲ್ಲ, ಆಗಲೇ ಅವರನ್ನು ದೇವರೆಂದು ಬಿಂಬಿಸುವ ಮಾರ್ಕೆಟಿಂಗ್ ಶುರುವಾಗಿದೆ’ ಎಂದು ಟೀಕಿಸಿದ್ದಾರೆ.

ಈ ಟೀಕೆಗೆ ಸಮಾಧಾನದಿಂದಲೇ ಉತ್ತರಿಸಿದ ಸೋನು ಸೂದ್, ‘ಸಹೋದರ, ನೀವು ಕೂಡ ಒಳ್ಳೆಯ ಮನುಷ್ಯ . ನೀವೂ ನೇಪಾಳಕ್ಕೆ ಬನ್ನಿ, ನಾವಿಬ್ಬರೂ ಸೇರಿ ಕೆಲಸ ಮಾಡೋಣ’ ಎಂದು ಪ್ರತ್ಯುತ್ತರ ನೀಡಿದ್ದಾರೆ. ಅವರು ಈ ರೀತಿ ಕೂಲ್ ಆಗಿ ಉತ್ತರ ನೀಡುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ಈ ಮೊದಲ ಕೊರೋನಾ ಲಾಕ್​ಡೌನ್ ಆದಾಗಲೂ ಸೋನು ಸೂದ್ ಅವರು ಜನರ ಸಹಾಯಕ್ಕೆ ಮುಂದಾಗಿದ್ದರು.

ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ:

ಸೋನು ಸೂದ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ವೀಡಿಯೊ ಹಂಚಿಕೊಂಡಿದ್ದು, ನೇಪಾಳದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂಚರಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಪ್ರವಾಹದ ಅಲೆಗಳು ನಾಲ್ಕು ಮಹಡಿಯ ಕಟ್ಟಡಗಳನ್ನೂ ತಲುಪಿದ್ದವು ಎಂದು ಅವರು ವೀಡಿಯೊದಲ್ಲಿ ತಿಳಿಸಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ತ್ರಿಶೂಲಿ ನದಿಯ ಬಳಿ ನಿಂತಿರುವ ಫೋಟೋ ಹಂಚಿಕೊಂಡಿದ್ದಾರೆ.

‘ತ್ರಿಶೂಲಿ ನದಿಯ ಬಳಿ ನಿಂತು ನೋಡಿದಾಗ ಪ್ರವಾಹ ಸೃಷ್ಟಿಸಿದ ಸಾವು-ನೋವು, ಒಡೆದು ಹೋದ ಮನೆಗಳು ಹಾಗೂ ಕುಟುಂಬಗಳ ದುಃಖ ಕಣ್ಣಿಗೆ ಕಟ್ಟುತ್ತಿದೆ. ನೇಪಾಳ ಎಂದಿಗೂ ಒಂಟಿಯಲ್ಲ. ನಾನು ಇಲ್ಲಿನ ಜನರೊಂದಿಗೆ ನಿಲ್ಲುತ್ತೇನೆ. ಮನೆಗಳನ್ನು ಮರುನಿರ್ಮಾಣ ಮಾಡಲು ಮತ್ತು ಅವರ ಜೀವನವನ್ನು ಮತ್ತೆ ಕಟ್ಟಿಕೊಡಲು ನನ್ನಿಂದ ಸಾಧ್ಯವಿರುವ ಎಲ್ಲಾ ಸಹಾಯ ಮಾಡುತ್ತೇನೆ’ ಎಂದು ಸೋನು ಸೂದ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ದುಬೈನಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಸೋನು ಸೂದ್ ಕಡೆಯಿಂದ ಉಚಿತ ವಸತಿ ಸೌಲಭ್ಯ

ಸಹಾಯ ಹಸ್ತ ಚಾಚಿದ ನಟ:

ಸುದ್ದಿಸಂಸ್ಥೆ ‘ಎಎನ್‌ಐ’ ಜೊತೆ ಮಾತನಾಡಿದ ಸೋನು ಸೂದ್ ಅವರು, ‘ನಾವು ಪ್ರವಾಹ ಸಂತ್ರಸ್ತರನ್ನು ಭೇಟಿಯಾಗಲು ಇಲ್ಲಿದ್ದೇವೆ. ಭಾರತದಿಂದ ಸಾಕಷ್ಟು ಪರಿಹಾರ ಸಾಮಗ್ರಿಗಳನ್ನು ತಂದಿದ್ದೇವೆ. ಕಷ್ಟದಲ್ಲಿರುವ ಜನರಿಗೆ ನೆರವಾಗುವುದು ಪ್ರತಿಯೊಬ್ಬರ ಕರ್ತವ್ಯ. ಪ್ರಸ್ತುತ ಕಂಬಳಿಗಳು ಮತ್ತು ಆಹಾರ ಪದಾರ್ಥಗಳನ್ನು ತಂದಿದ್ದೇವೆ. ಅವರಿಗೆ ಇನ್ನೇನು ಅಗತ್ಯವಿದೆ ಎಂಬುದನ್ನು ಕೇಳಿ ತಿಳಿದುಕೊಳ್ಳುತ್ತಿದ್ದೇವೆ. ಭಾರತದಿಂದ ನೇಪಾಳಕ್ಕೆ ಸಾಮಗ್ರಿಗಳನ್ನು ಕಳುಹಿಸುವುದು ಸವಾಲಿನ ಕೆಲಸವಾದರೂ, ಮುಂದಿನ ದಿನಗಳಲ್ಲೂ ಈ ಪರಿಹಾರ ಕಾರ್ಯ ತಲುಪುವಂತೆ ನೋಡಿಕೊಳ್ಳುತ್ತೇವೆ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 4:56 pm, Thu, 3 September 26

Follow Us