ಬಾಲಿವುಡ್ ನಟ ಸುನೀಲ್ ಶೆಟ್ಟಿ (Sunil Shetty) ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದಾರೆ. ಪ್ರಸ್ತುತ ಹಿಂದಿ ಚಿತ್ರರಂಗದ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಅವರು ಚರ್ಚೆ ಮಾಡಿದ್ದಾರೆ. ಶಾರುಖ್ ಖಾನ್ ನಟನೆಯ ‘ಪಠಾಣ್’, ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸೇರಿದಂತೆ ಹಲವು ಸಿನಿಮಾಗಳ ಬಹಿಷ್ಕಾರಕ್ಕೆ ಕರೆ ನೀಡುವ ಮೂಲಕ ಬಾಲಿವುಡ್ (Bollywood) ವ್ಯವಹಾರಕ್ಕೆ ಪೆಟ್ಟುಕೊಡುವ ಪ್ರಯತ್ನ ಕೆಲವರಿಂದ ನಡೆದಿದೆ. ಇದನ್ನು ತಪ್ಪಿಸಲು ಸುನೀಲ್ ಶೆಟ್ಟಿ ಅವರು ಯೋಗಿ ಆದಿತ್ಯನಾಥ್ (Yogi Adityanath) ಬಳಿ ಸಹಾಯ ಕೇಳಿದ್ದಾರೆ. ‘ನೀವು ಹೇಳಿದರೆ ಬಾಯ್ಕಾಟ್ ಬಾಲಿವುಡ್ ಎಂಬ ಟ್ರೆಂಡ್ ಅಂತ್ಯವಾಗುತ್ತದೆ’ ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ. ಚಿತ್ರರಂಗಕ್ಕೆ ಅಂಟಿರುವ ಡ್ರಗ್ಸ್ ಕಳಂಕದ ಕುರಿತಾಗಿಯೂ ಅವರು ಮಾತನಾಡಿದ್ದಾರೆ.
ಸುನೀಲ್ ಶೆಟ್ಟಿ, ಜಾಕಿ ಶ್ರಾಫ್, ಸೋನು ನಿಗಮ್, ಕೈಲಾಶ್ ಖೇರ್ ಸೇರಿದಂತೆ ಅನೇಕರು ಯೋಗಿ ಆದಿತ್ಯನಾಥ್ ಅವರನ್ನು ಮುಂಬೈನಲ್ಲಿ ಭೇಟಿ ಮಾಡಿದ್ದಾರೆ. ಈ ವೇಳೆ ಹಲವು ಮಹತ್ವದ ವಿಚಾರಗಳು ಚರ್ಚೆ ಆಗಿವೆ. ಸುನೀಲ್ ಶೆಟ್ಟಿ ಅವರ ಮಾತು ಗಮನ ಸೆಳೆದಿದೆ. ‘ನಾವು ಒಳ್ಳೆಯ ಕೆಲಸ ಮಾಡುತ್ತಿದ್ದೇವೆ ಎಂಬ ಸತ್ಯವನ್ನು ಎಲ್ಲರಿಗೂ ತಿಳಿಸಬೇಕಿದೆ. ಕೆಲವರು ಕೆಟ್ಟವರು ಇರಬಹುದು. ಆದರೆ ಇಡೀ ಚಿತ್ರರಂಗ ಕೆಟ್ಟದ್ದಲ್ಲ. ನಾವು ಒಳ್ಳೆಯ ಸಿನಿಮಾ ಮಾಡಿದ್ದೇವೆ. ಎಲ್ಲರೂ ಜೊತೆಯಾಗಿ ಬಾಯ್ಕಾಟ್ ಬಾಲಿವುಡ್ ಎಂಬ ಟ್ರೆಂಡ್ ನಿಲ್ಲಿಸಬೇಕಿದೆ’ ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ: ಸುನೀಲ್ ಶೆಟ್ಟಿ ಮಕ್ಕಳ ಮದುವೆ ಬಗ್ಗೆ ಸುಳ್ಳು ಸುದ್ದಿ; ಗಾಸಿಪ್ ಹಬ್ಬಿಸಿದವರಿಗೆ ಕ್ಲಾಸ್ ತೆಗೆದುಕೊಂಡ ಸ್ಟಾರ್ ನಟ
‘ಇಂದು ನಾನು ಸುನೀಲ್ ಶೆಟ್ಟಿ ಅಂತ ಜನಪ್ರಿಯವಾಗಿದ್ದರೆ ಅದಕ್ಕೆ ಉತ್ತರ ಪ್ರದೇಶದ ಜನರು ಕಾರಣ. ನೀವು ಮುಂದಾಳತ್ವ ವಹಿಸಿದರೆ ಇದೆಲ್ಲ ಸಾಧ್ಯವಾಗುತ್ತದೆ. ನಮ್ಮ ಮೇಲೆ ಕಳಂಕ ಇದೆ ಅಂತ ಹೇಳಲು ನೋವಾಗುತ್ತದೆ. ನಮ್ಮಲ್ಲಿ ಶೇಕಡ 99ರಷ್ಟು ಮಂದಿ ಹಾಗಿಲ್ಲ. ನಾವು ದಿನವಿಡೀ ಡ್ರಗ್ಸ್ ಸೇವಿಸಲ್ಲ, ಕೆಟ್ಟ ಕೆಲಸ ಮಾಡಲ್ಲ’ ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ: ಹೋಟೆಲ್ ಕ್ಲೀನರ್ ಆಗಿದ್ದ ಸುನೀಲ್ ಶೆಟ್ಟಿ ತಂದೆ ವೀರಪ್ಪ ಶೆಟ್ಟಿ; ‘ಅಪ್ಪನೇ ನನ್ನ ಹೀರೋ’ ಎಂದ ಕನ್ನಡಿಗ
‘ನಮ್ಮ ಸಿನಿಮಾ ಸಂಗೀತವು ಭಾರತವನ್ನು ಜಗತ್ತಿನ ಜೊತೆ ಬೆಸೆಯುವಂತೆ ಮಾಡಿದೆ. ಯೋಗಿ ಅವರೇ.. ನೀವು ಮುಂದಾಳತ್ವ ವಹಿಸಿಕೊಂಡು ಪ್ರಧಾನ ಮಂತ್ರಿಗಳ ಬಳಿ ಮಾತನಾಡಿದರೆ ಅದರಿಂದ ತುಂಬ ಬದಲಾವಣೆ ಆಗಲಿದೆ’ ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ. ಅವರ ಮಾತಿಗೆ ಇನ್ನುಳಿದ ಸೆಲೆಬ್ರಿಟಿಗಳು ಕೂಡ ಚಪ್ಪಾಳೆ ಮೂಲಕ ಸಹಮತ ಸೂಚಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಸಿನಿಮಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಯೋಗಿ ಆದಿತ್ಯನಾಥ್ ಪ್ರಯತ್ನಿಸುತ್ತಿದ್ದಾರೆ. ಅದರ ಭಾಗವಾಗಿ ಅವರು ಬಾಲಿವುಡ್ ಸೆಲೆಬ್ರಿಟಿಗಳನ್ನು ಭೇಟಿ ಆಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.