Oscar 2023: ಆಸ್ಕರ್ ಪ್ರಶಸ್ತಿ ಕಣದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ; ಖುಷಿ ಸುದ್ದಿ ಹಂಚಿಕೊಂಡ ವಿವೇಕ್ ಅಗ್ನಿಹೋತ್ರಿ
The Kashmir Files: ಭಾರತದ ಸಿನಿಮಾಗಳು ಆಸ್ಕರ್ ಪ್ರಶಸ್ತಿ ಪಡೆಯಲು ಸಖತ್ ಹಣಾಹಣಿ ನಡೆಸುತ್ತಿವೆ. ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಶಾರ್ಟ್ಲಿಸ್ಟ್ ಆಗಿದೆ.
ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಕುರಿತಾದ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಚಿತ್ರದ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಬಾಕ್ಸ್ ಆಫೀಸ್ನಲ್ಲಿ 250 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದ ಈ ಸಿನಿಮಾ ಈಗ ಪ್ರಶಸ್ತಿಗಳನ್ನು ಪಡೆದುಕೊಳ್ಳುವಲ್ಲಿ ಪೈಪೋಟಿ ನೀಡುತ್ತಿದೆ. ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ (Oscar 2023) ಕಣದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಸ್ಪರ್ಧಿಸುತ್ತಿದೆ. ಈ ಸುದ್ದಿಯನ್ನು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾದಲ್ಲಿ ಪಲ್ಲವಿ ಜೋಶಿ, ಅನುಪಮ್ ಖೇರ್, ದರ್ಶನ್ ಕುಮಾರ್, ಮಿಥುನ್ ಚಕ್ರವರ್ತಿ ಮುಂತಾದವರು ನಟಿಸಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ಮಾತ್ರವಲ್ಲದೇ ಕನ್ನಡದ ‘ಕಾಂತಾರ’, ‘ವಿಕ್ರಾಂತ್ ರೋಣ’ ಸಿನಿಮಾಗಳು ಕೂಡ ಈ ಶಾರ್ಟ್ಲಿಸ್ಟ್ನಲ್ಲಿ ಸ್ಥಾನ ಪಡೆದುಕೊಂಡಿವೆ.
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವು ಆಸ್ಕರ್ನ ‘ವಿದೇಶಿ ಭಾಷಾ ಚಿತ್ರ’ ವಿಭಾಗಕ್ಕೆ ಸ್ಪರ್ಧೆ ನೀಡಲು ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಬಹುದು ಎಂದು ಬಹುತೇಕರು ಭಾವಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾದಿಂದ ಗುಜರಾತಿ ಭಾಷೆಯ ‘ಚೆಲ್ಲೋ ಶೋ’ ಸಿನಿಮಾ ಆಯ್ಕೆ ಆಗಿದ್ದರಿಂದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ಅವಕಾಶ ಮಿಸ್ ಆಗಿತ್ತು. ಆದರೆ ಈ ಚಿತ್ರ ಈಗ ನೇರವಾಗಿ ಆಸ್ಕರ್ ಕಣದಲ್ಲಿ ಸ್ಪರ್ಧೆ ಮಾಡುತ್ತಿದೆ.
BIG ANNOUNCEMENT: #TheKashmirFiles has been shortlisted for #Oscars2023 in the first list of @TheAcademy. It’s one of the 5 films from India. I wish all of them very best. A great year for Indian cinema. ???
— Vivek Ranjan Agnihotri (@vivekagnihotri) January 10, 2023
ಆಸ್ಕರ್ ಪ್ರಶಸ್ತಿಯ ಸ್ಪರ್ಧೆಯಲ್ಲಿ ಭಾರತ ಸಿನಿಮಾಗಳು ಶಾರ್ಟ್ಲಿಸ್ಟ್ ಆಗಿರುವುದು ವಿವೇಕ್ ಅಗ್ನಿಹೋತ್ರಿ ಅವರಿಗೆ ಖುಷಿ ನೀಡಿದೆ. ತಮ್ಮ ಸಿನಿಮಾ ಜೊತೆ ಪಟ್ಟಿಯಲ್ಲಿ ಇರುವ ಇತರೆ ಚಿತ್ರಗಳಿಗೂ ಅವರು ಶುಭ ಹಾರೈಸಿದ್ದಾರೆ. ಕನ್ನಡದ ‘ಕಾಂತಾರ’, ‘ವಿಕ್ರಾಂತ್ ರೋಣ’ ಸಿನಿಮಾ ತಂಡಗಳು ಕೂಡ ಖುಷಿ ಸುದ್ದಿಯನ್ನು ಹಂಚಿಕೊಂಡಿವೆ.
ಇದನ್ನೂ ಓದಿ: Swara Bhasker: ‘ದಿ ಕಾಶ್ಮೀರ್ ಫೈಲ್ಸ್’ ಕೆಟ್ಟ ಸಿನಿಮಾ ಎಂಬ ಹೇಳಿಕೆಗೆ ಸಹಮತ ಸೂಚಿಸಿದ ನಟಿ ಸ್ವರಾ ಭಾಸ್ಕರ್
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಅನೇಕರು ವಿರೋಧಿಸಿದ ನಿದರ್ಶನ ಕೂಡ ಇದೆ. ನಡಾವ್ ಲಪಿಡ್, ಸಯಿದ್ ಅಖ್ತರ್ ಮಿರ್ಜಾ ಮುಂತಾದವರು ಈ ಚಿತ್ರವನ್ನು ಕಟುವಾಗಿ ಟೀಕೆ ಮಾಡಿದ್ದುಂಟು. ‘ನನ್ನ ಪ್ರಕಾರ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಒಂದು ಕಸ. ಹಾಗಂತ ಕಾಶ್ಮೀರಿ ಪಂಡಿತರ ವಿಷಯ ಕಸವೇ? ಖಂಡಿತಾ ಇಲ್ಲ. ಆ ವಿಷಯ ನಿಜ. ಮುಸ್ಲಿಮರು ಕೂಡ ಗುಪ್ತಚರ ಸಂಸ್ಥೆಗಳ ಬಲೆಗೆ ಸಿಲುಕಿದ್ದರು. ಮುಖ್ಯ ವಿಷಯ ಏನೆಂದರೆ, ಪಕ್ಷಪಾತ ಮಾಡಬಾರದು. ಮನುಷ್ಯರಾಗಿ, ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ’ ಎಂದು ಸಯಿದ್ ಅಖ್ತರ್ ಮಿರ್ಜಾ ಈ ಹಿಂದೆ ಹೇಳಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:55 pm, Tue, 10 January 23