ಮಗನ ಜನನ ಪ್ರಮಾಣಪತ್ರದಲ್ಲಿ ಧರ್ಮದ ಕಾಲಂ ಖಾಲಿ ಬಿಟ್ಟ ಖ್ಯಾತ ನಟ
ಧರ್ಮದ ವಿಚಾರದಲ್ಲಿ ನಟ ವಿಕ್ರಾಂತ್ ಮಾಸಿ ಅವರು ತಮ್ಮದೇ ನಿಲುವು ಹೊಂದಿದ್ದಾರೆ. ಮಗನ ಜನನ ಪ್ರಮಾಣಪತ್ರದಲ್ಲಿ ಧರ್ಮ ಯಾವುದು ಎಂಬುದನ್ನು ಅವರು ತಿಳಿಸಿಲ್ಲ. ಅದಕ್ಕೆ ಕಾರಣ ಕೂಡ ಇದೆ. ಆ ಬಗ್ಗೆ ವಿಕ್ರಾಂತ್ ಮಾಸಿ ಅವರು ವಿವರವಾಗಿ ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ನಟ ವಿಕ್ರಾಂತ್ ಮಾಸಿ ಅವರು ಬಾಲಿವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ‘ಛಪಾಕ್’, ‘12th ಫೇಲ್’, ‘ದಿ ಸಾಬರಮತಿ ರಿಪೋರ್ಟ್’ ಮುಂತಾದ ಸಿನಿಮಾಗಳಿಂದ ಅವರಿಗೆ ಖ್ಯಾತಿ ಸಿಕ್ಕಿದೆ. ಅಲ್ಲದೇ ಧರ್ಮದ (Religion) ಬಗ್ಗೆ ತಾವು ಹೊಂದಿರುವ ನಿಲುವಿನ ಕಾರಣದಿಂದಲೂ ವಿಕ್ರಾಂತ್ ಮಾಸಿ ಅವರು ಚರ್ಚೆಗೆ ಒಳಗಾಗುತ್ತಾರೆ. ಕಳೆದ ವರ್ಷ ಅವರಿಗೆ ಗಂಡು ಮಗು ಜನಿಸಿತು. ಮಗನ ಜನನ ಪ್ರಮಾಣಪತ್ರದ ಬಗ್ಗೆ ವಿಕ್ರಾಂತ್ ಮಾಸಿ (Vikrant Massey) ಅವರು ಈಗ ಮಾತನಾಡಿದ್ದಾರೆ. ಈ ಪ್ರಮಾಣಪತ್ರದಲ್ಲಿ ಧರ್ಮದ ಕಾಲಂ ಖಾಲಿ ಬಿಟ್ಟಿರುವುದಾಗಿ ಅವರು ಹೇಳಿದ್ದಾರೆ.
ನಟಿ ರಿಯಾ ಚಕ್ರವರ್ತಿ ನಡೆಸುವ ಪಾಡ್ಕಾಸ್ಟ್ಗೆ ವಿಕ್ರಾಂತ್ ಮಾಸಿ ಅವರು ಸಂದರ್ಶನ ನೀಡಿದ್ದಾರೆ. ವಿಕ್ರಾಂತ್ ಮಾಸಿ ಅವರು ಯಾವ ಧರ್ಮವನ್ನೂ ಪ್ರತ್ಯೇಕವಾಗಿ ಅನುಸರಿಸುವುದಿಲ್ಲ. ಆದರೆ ಅವರಿಗೆ ದೇವರ ಮೇಲೆ ನಂಬಿಕೆ ಇದೆ. ಈ ಎಲ್ಲ ವಿಚಾರಗಳ ಬಗ್ಗೆ ಅವರು ಪಾಡ್ಕಾಸ್ಟ್ನಲ್ಲಿ ಮಾತನಾಡಿದ್ದಾರೆ. ಮಗನ ಜನನ ಪ್ರಮಾಣಪತ್ರದಲ್ಲಿ ಧರ್ಮದ ಕಾಲಂ ಖಾಲಿ ಬಿಟ್ಟಿದ್ದಕ್ಕೆ ಅವರು ಕಾರಣ ತಿಳಿಸಿದ್ದಾರೆ.
‘ಧರ್ಮ ಎಂಬುದು ವೈಯಕ್ತಿಕ ಆಯ್ಕೆ ಎಂದು ನನಗೆ ಅನಿಸುತ್ತದೆ. ನನಗೆ ಅದು ಒಂದು ಜೀವನದ ಮಾರ್ಗ. ಎಲ್ಲರಿಗೂ ಅವರವರ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಇದೆ. ನನ್ನ ಮನೆಯಲ್ಲಿ ಎಲ್ಲ ರೀತಿಯ ಧರ್ಮ ನಿಮಗೆ ಸಿಗುತ್ತದೆ. ಧರ್ಮ ಎಂಬುದನ್ನು ಮನುಷ್ಯ ಮಾಡಿದ್ದು. ನಾನು ಪೂಜೆ ಮಾಡುತ್ತೇನೆ, ಗುರುದ್ವಾರಕ್ಕೆ ಹೋಗುತ್ತೇನೆ, ದರ್ಗಾಗೂ ಹೋಗುತ್ತೇನೆ. ಈ ಎಲ್ಲದರಲ್ಲೂ ನಾನು ಶಾಂತಿ ಪಡೆಯುತ್ತೇನೆ’ ಎಂದಿದ್ದಾರೆ ವಿಕ್ರಾಂತ್ ಮಾಸಿ.
‘ನನ್ನ ಮಗನ ಜನನ ಪ್ರಮಾಣಪತ್ರದಲ್ಲಿ ನಾನು ಧರ್ಮದ ಕಾಲಂ ಖಾಲಿ ಬಿಟ್ಟಿದ್ದೇವೆ. ಸರ್ಕಾರದಿಂದ ಅವನ ಜನನ ಪ್ರಮಾಣಪತ್ರ ಬಂದಾಗ ಅದರಲ್ಲಿ ಧರ್ಮದ ಉಲ್ಲೇಖ ಇರಲಿಲ್ಲ. ಅಂದರೆ ಸರ್ಕಾರ ನಿಮಗೆ ಅದನ್ನು ಬರೆಯಲೇಬೇಕು ಅಂತ ಹೇಳಲ್ಲ. ಅದು ನಿಮಗೆ ಬಿಟ್ಟಿದ್ದು. ನನ್ನ ಮಗ ಯಾರನ್ನಾದರೂ ಧರ್ಮ, ಜಾತಿ ಆಧಾರದಲ್ಲಿ ನೋಡುತ್ತಾನೆ ಎಂದರೆ ನನಗೆ ಬೇಸರ ಆಗುತ್ತದೆ. ಅವನನ್ನು ನಾನು ಆ ರೀತಿ ಬೆಳೆಸಲ್ಲ’ ಎಂದು ವಿಕ್ರಾಂತ್ ಮಾಸಿ ಹೇಳಿದ್ದಾರೆ.
ಇದನ್ನೂ ಓದಿ: ರವಿ ಶಂಕರ್ ಗುರೂಜಿ ಪಾತ್ರ ಮಾಡಲಿರುವ ‘12th ಫೇಲ್’ ನಟ ವಿಕ್ರಾಂತ್ ಮಾಸಿ
ವಿಕ್ರಾಂತ್ ಮಾಸಿಯ ಕುಟುಂಬದಲ್ಲಿ ಎಲ್ಲ ಧರ್ಮಗಳ ಆಚರಣೆ ಇದೆ. ವಿಕ್ರಾಂತ್ ಮಾಸಿ ತಂದೆ ಕ್ರಿಶ್ಚಿಯನ್, ತಾಯಿ ಸಿಖ್ ಧರ್ಮ ಪಾಲಿಸುತ್ತಾರೆ. ವಿಕ್ರಾಂತ್ ಮಾಸಿ ಸಹೋದರ 17ನೇ ವಯಸ್ಸಿನಲ್ಲೇ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು. ರಜಪೂತ್ ಠಾಕೂರ್ ಕುಟುಂಬದ ಶೀತಲ್ ಅವರನ್ನು ವಿಕ್ರಾಂತ್ ಮಾಸಿ ಮದುವೆ ಆದರು. ಈ ರೀತಿ, ಎಲ್ಲ ಆಚರಣೆಗಳು ಅವರ ಮನೆಯಲ್ಲಿ ಇವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.