ರವಿ ಶಂಕರ್ ಗುರೂಜಿ ಪಾತ್ರ ಮಾಡಲಿರುವ ‘12th ಫೇಲ್’ ನಟ ವಿಕ್ರಾಂತ್ ಮಾಸಿ
‘12th ಫೇಲ್’, ‘ದಿ ಸಾಬರಮತಿ ರಿಪೋರ್ಟ್’ ಮುಂತಾದ ಸಿನಿಮಾಗಳ ಮೂಲಕ ಹೆಸರು ಮಾಡಿರುವ ನಟ ವಿಕ್ರಾಂತ್ ಮಾಸಿ ಅವರಿಗೆ ಈಗ ಇನ್ನೊಂದು ಅವಕಾಶ ಸಿಕ್ಕಿದೆ. ‘ವೈಟ್’ ಸಿನಿಮಾದಲ್ಲಿ ವಿಕ್ರಾಂತ್ ಮಾಸಿ ಅವರು ಶ್ರೀ ಶ್ರೀ ರವಿಶಂಕರ್ ಗುರೂಜಿ ಪಾತ್ರವನ್ನು ಮಾಡಲು ಸಜ್ಜಾಗಿದ್ದಾರೆ. ‘ಪಠಾಣ್’, ‘ವಾರ್’, ‘ಫೈಟರ್’ ಸಿನಿಮಾಗಳ ಖ್ಯಾತಿಯ ನಿರ್ಮಾಪಕ ಸಿದ್ದಾರ್ಥ್ ಆನಂದ್ ಅವರು ‘ವೈಟ್’ ಸಿನಿಮಾ ನಿರ್ಮಿಸಲಿದ್ದಾರೆ.

ನಟ ವಿಕ್ರಾಂತ್ ಮಾಸಿ ಅವರು ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಮಾಡಿದ್ದಾರೆ. ‘12th ಫೇಲ್’ (12th Fail) ಸಿನಿಮಾ ಮೂಲಕ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ಸಿಕ್ಕಿತು. ಕಳೆದ ವರ್ಷ ಬಿಡುಗಡೆ ಆದ ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾದಲ್ಲಿ ಕೂಡ ಅವರ ನಟನೆಗೆ ಜನರು ಮೆಚ್ಚುಗೆ ಸೂಚಿಸಿದರು. ಈಗ ವಿಕ್ರಾಂತ್ ಮಾಸಿ (Vikrant Massey) ಅವರಿಗೆ ಹೊಸ ಹೊಸ ಅವಕಾಶಗಳು ಸಿಗುತ್ತಿವೆ. ಹೊಸ ಸಿನಿಮಾದಲ್ಲಿ ಅವರು ಶ್ರೀ ಶ್ರೀ ರವಿಶಂಕರ್ ಗುರೂಜಿ (Sri Sri Ravi Shankar) ಪಾತ್ರವನ್ನು ಮಾಡಲಿದ್ದಾರೆ. ಈ ಚಿತ್ರಕ್ಕೆ ‘ವೈಟ್’ ಎಂದು ಹೆಸರು ಇಡಲಾಗಿದೆ. ಈಗಾಗಲೇ ಈ ಸಿನಿಮಾಗಾಗಿ ಅವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
‘ಆರ್ಟ್ ಆಫ್ ಲಿವಿಂಗ್’ ಸಂಸ್ಥಾಪಕ ರವಿ ಶಂಕರ್ ಗುರೂಜಿ ಅವರು ವಿದೇಶದಲ್ಲಿ ಸಹ ತಮ್ಮ ಛಾಪು ಮೂಡಿಸಿದ್ದಾರೆ. ಕೊಲಂಬಿಯಾದ ಸಿವಿಲ್ ವಾರ್ ಅಂತ್ಯಗೊಳಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ‘ವೈಟ್’ ಸಿನಿಮಾದಲ್ಲಿ ಈ ವಿಷಯವನ್ನು ತೋರಿಸಲಾಗುವುದು. ವಿಕ್ರಾಂತ್ ಮಾಸಿ ಅವರು ರವಿಶಂಕರ್ ಗುರೂಜಿ ಪಾತ್ರದಲ್ಲಿ ಹೇಗೆ ಕಾಣಿಸುತ್ತಾರೆ ಎಂಬುದನ್ನು ನೋಡಲು ಫ್ಯಾನ್ಸ್ ಉತ್ಸುಕರಾಗಿದ್ದಾರೆ.
ಶ್ರೀ ಶ್ರೀ ರವಿಶಂಕರ್ ಗುರೂಜಿ ಪಾತ್ರವನ್ನು ಮಾಡಲು ವಿಕ್ರಾಂತ್ ಮಾಸಿ ಅವರು ಈಗಾಗಲೇ ಉದ್ದ ಕೂದಲು ಬಿಡುತ್ತಿದ್ದಾರೆ. ಹಳೇ ವಿಡಿಯೋಗಳನ್ನು ನೋಡಿ ರವಿಶಂಕರ್ ಅವರ ಬಾಡಿ ಲಾಂಗ್ವೇಜ್ ಗಮನಿಸುತ್ತಿದ್ದಾರೆ. ಎಲ್ಲವೂ ಎಂದುಕೊಂಡಂತೆ ನಡೆದರೆ ಜೂನ್ ತಿಂಗಳಲ್ಲಿ ‘ವೈಟ್’ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ ಎಂದು ಮಾಧ್ಯಮಗಳಲ್ಲಿ ವರದಿ ಪ್ರಕಟ ಆಗಿದೆ.
ಇದನ್ನೂ ಓದಿ: ಮೋದಿ ಮೆಚ್ಚಿದ ನಟ ವಿಕ್ರಾಂತ್ ಮಾಸಿ ನಿವೃತ್ತಿ ಘೋಷಿಸಿಲ್ಲ; ಇಲ್ಲಿದೆ ಅಸಲಿ ವಿಚಾರ
‘ವೈಟ್’ ಸಿನಿಮಾ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬರಲಿದೆ. ಬಾಲಿವುಡ್ನ ಖ್ಯಾತ ನಿರ್ಮಾಪಕ ಸಿದ್ದಾರ್ಥ್ ಆನಂದ್ ಅವರು ಈ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ. ಮಹಾವೀರ್ ಜೈನ್ ಮತ್ತು ಆನಂದ್ ಕೂಡ ನಿರ್ಮಾಣದಲ್ಲಿ ಕೈ ಜೋಡಿಸಲಿದ್ದಾರೆ. ವಿದೇಶದ ತಂತ್ರಜ್ಞರು ಈ ಸಿನಿಮಾಗಾಗಿ ಕೆಲಸ ಮಾಡಲಿದ್ದಾರೆ. ಈಗಾಗಲೇ ಕೊಲಂಬಿಯಾದಲ್ಲಿ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ ಎನ್ನಲಾಗಿದೆ. 2026ರಲ್ಲಿ ‘ವೈಟ್’ ಸಿನಿಮಾ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.