ಹೃತಿಕ್ ಜೊತೆ ಹೋಲಿಕೆ ಮಾಡಬೇಡಿ: ಅಭಿಮಾನಿಗಳಿಗೆ ಜ್ಯೂನಿಯರ್ ಎನ್ಟಿಆರ್ ಸಲಹೆ
ಇಬ್ಬರು ಸ್ಟಾರ್ ಹೀರೋಗಳು ಒಂದೇ ಸಿನಿಮಾದಲ್ಲಿ ನಟಿಸಿದಾಗ ಅಭಿಮಾನಿಗಳು ಹೋಲಿಕೆ ಮಾಡುತ್ತಾರೆ. ಇದರಿಂದ ಫ್ಯಾನ್ಸ್ ವಾರ್ ಶುರುವಾಗುತ್ತದೆ. ಆ ರೀತಿ ಆಗದಿರಲಿ ಎಂದು ಜೂನಿಯರ್ ಎನ್ಟಿಆರ್ ಕಿವಿಮಾತು ಹೇಳಿದ್ದಾರೆ. ‘ವಾರ್ 2’ ಸಿನಿಮಾದಲ್ಲಿ ನಟಿಸಿರುವ ಹೃತಿಕ್ ರೋಷನ್ ಜೊತೆ ತಮ್ಮನ್ನು ಹೋಲಿಸಬಾರದು ಎಂದು ಅವರು ಹೇಳಿದ್ದಾರೆ.

ಟಾಲಿವುಡ್ ಸ್ಟಾರ್ ನಟ ಜೂನಿಯರ್ ಎನ್ಟಿಆರ್ ಅವರು ‘ವಾರ್ 2’ (War 2) ಸಿನಿಮಾದಲ್ಲಿ ಬಾಲಿವುಡ್ ಹೀರೋ ಹೃತಿಕ್ ರೋಷನ್ (Hrithik Roshan) ಜೊತೆ ತೆರೆ ಹಂಚಿಕೊಂಡಿದ್ದಾರೆ. ಆಗಸ್ಟ್ 14ರಂದು ಈ ಸಿನಿಮಾ ವಿಶ್ವಾದ್ಯಂತ ಅದ್ದೂರಿಯಾಗಿ ತೆರೆಕಾಣಲಿದೆ. ಈಗಾಗಲೇ ಟ್ರೇಲರ್ ಮತ್ತು ಹಾಡುಗಳು ಸಖತ್ ಹೈಪ್ ಸೃಷ್ಟಿ ಮಾಡಿವೆ. ‘ಜನಾಬ್-ಏ-ಆಲಿ’ ಹಾಡಿನಲ್ಲಿ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್ಟಿಆರ್ (Jr NTR) ಅವರು ಜೊತೆಯಾಗಿ ಡ್ಯಾನ್ಸ್ ಮಾಡಿದ್ದಾರೆ. ಇಬ್ಬರ ನಡುವೆ ಅಭಿಮಾನಿಗಳು ಹೋಲಿಕೆ ಮಾಡುತ್ತಿದ್ದಾರೆ. ಅಂಥವರಿಗೆ ಜೂನಿಯರ್ ಎನ್ಟಿಆರ್ ಅವರು ಒಂದು ಸಲಹೆ ನೀಡಿದ್ದಾರೆ.
ಹೈದರಾಬಾದ್ನಲ್ಲಿ ‘ವಾರ್ 2’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಅದ್ದೂರಿಯಾಗಿ ನಡೆದಿದೆ. ಇದರಲ್ಲಿ ಹೃತಿಕ್ ರೋಷನ್, ಜೂನಿಯರ್ ಎನ್ಟಿಆರ್ ಭಾಗಿ ಆಗಿದ್ದರು. ಈ ವೇಳೆ ಮಾತನಾಡಿದ ಜೂನಿಯರ್ ಎನ್ಟಿಆರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿರುವ ಒಂದು ವಿಷಯದ ಬಗ್ಗೆ ಪ್ರಸ್ತಾಪಿಸಿದರು.
‘ಜನಾಬ್-ಏ-ಆಲಿ ಹಾಡಿನಲ್ಲಿ ಯಾರು ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ ಅಂತ ಹೋಲಿಕೆ ಮಾಡಿದರೆ ಅದು ಅಭಿಮಾನಿಗಳ ದಾರಿ ತಪ್ಪಿಸುತ್ತದೆ. ಈ ಹಾಡಿನಲ್ಲಿ ಇಬ್ಬರು ಉತ್ತಮ ಡ್ಯಾನ್ಸರ್ಗಳು ಪರಸ್ಪರ ಪೂರಕವಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಿಂಬಿತ ಆಗುತ್ತಿರವಂತೆ ಇದು ಮುಖಾಮುಖಿ ಅಲ್ಲ. ಈ ಹಾಡನ್ನು ನೀವೆಲ್ಲರೂ ಎಂಜಾಯ್ ಮಾಡಬೇಕು. ಹೃತಿಕ್ ರೋಷನ್ ಅವರು ಈ ದೇಶದ ಶ್ರೇಷ್ಠ ಡ್ಯಾನ್ಸರ್ಗಳಲ್ಲಿ ಒಬ್ಬರು’ ಎಂದು ಜೂನಿಯರ್ ಎನ್ಟಿಆರ್ ಹೇಳಿದ್ದಾರೆ.
ಇದೇ ವೇದಿಕೆಯಲ್ಲಿ ಹೃತಿಕ್ ರೋಷನ್ ಅವರು ಜೂನಿಯರ್ ಎನ್ಟಿಆರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ‘ತಾರಕ್, ನಾನು ನಿಮ್ಮನ್ನು ಕೇವಲ ಗಮನಿಸಿಲ್ಲ. ನಿಮ್ಮಿಂದ ಕಲಿತಿದ್ದೇನೆ. ನನ್ನ ಸಾಕಷ್ಟು ಗುಣಗಳನ್ನು ನಾನು ತಾರಕ್ ಅವರಲ್ಲಿ ನೋಡುತ್ತೇನೆ. 25 ವರ್ಷಗಳಲ್ಲಿ ನಮ್ಮಿಬ್ಬರ ಜರ್ನಿ ಒಂದೇ ರೀತಿ ಇತ್ತು’ ಎಂದಿದ್ದಾರೆ ಹೃತಿಕ್ ರೋಷನ್.
ಇದನ್ನೂ ಓದಿ: ‘ವಾರ್ 2’ Vs ‘ಕೂಲಿ’: ಬುಕ್ ಮೈ ಶೋನಲ್ಲಿ ಯಾರಿಗೆ ಹೆಚ್ಚಿದೆ ಬೆಂಬಲ?
‘ಜೂನಿಯರ್ ಎನ್ಟಿಆರ್ ಅವರು ತುಂಬಾ ಬದ್ಧತೆ ಇರುವ ನಟ. ಕೆಲಸದ ಬಗ್ಗೆ ತುಂಬಾ ನೈತಿಕತೆ ಹೊಂದಿದ್ದಾರೆ. ಒನ್ ಟೇಕ್, ಫೈನಲ್ ಟೇಕ್ ಸ್ಟಾರ್ ಅವರು. ಅವರು ಶಾಟ್ ಹೇಗೆ ಬಂದಿದೆ ಎಂಬುದನ್ನು ಪರಿಶೀಲಿಸುವುದೂ ಇಲ್ಲ. ಯಾಕೆಂದರೆ, ಚೆನ್ನಾಗಿ ನಟಿಸಿದ್ದೇನೆ ಎಂಬುದು ಅವರಿಗೆ ಗೊತ್ತಿರುತ್ತದೆ’ ಎಂದು ಹೃತಿಕ್ ರೋಷನ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








