2022ರಲ್ಲಿ ಹಿಂದಿ ಚಿತ್ರರಂಗ (Bollywood) ಸಾಕಷ್ಟು ನಷ್ಟ ಅನುಭವಿಸಿದೆ. ಭಾರಿ ನಿರೀಕ್ಷೆ ಇಟ್ಟುಕೊಂಡು ತಯಾರಾದ ಸಿನಿಮಾಗಳೆಲ್ಲ ಸೋಲಿನ ಹಾದಿ ಹಿಡಿದವು. ಸ್ಟಾರ್ ಕಲಾವಿದರ ಚಿತ್ರಗಳು ಕೂಡ ಮೋಡಿ ಮಾಡಲಿಲ್ಲ. ದಕ್ಷಿಣ ಭಾರತದ ಸಿನಿಮಾಗಳ ಎದುರಲ್ಲಿ ಹಿಂದಿ ಚಿತ್ರಗಳು ಹೀನಾಯವಾಗಿ ಸೋತವು. ಆದರೆ 2023ರಲ್ಲಿ ಶುಭಾರಂಭ ಆಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರ (Pathaan Movie) ಜನವರಿ 25ರಂದು ರಿಲೀಸ್ ಆಗಲಿದೆ. ಈ ಸಿನಿಮಾ ಬಿಗ್ ಬಜೆಟ್ನಲ್ಲಿ ಸಿದ್ಧವಾಗಿದ್ದು, ಅಭಿಮಾನಿಗಳ ವಲಯದಲ್ಲಿ ಸಖತ್ ನಿರೀಕ್ಷೆ ಹುಟ್ಟುಹಾಕಿದೆ. ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬ ಕೌತುಕ ಸಿನಿಪ್ರಿಯರ ಮನದಲ್ಲಿ ಮೂಡಿದೆ.
ಶಾರುಖ್ ಖಾನ್ ಅವರು ‘ಜೀರೋ’ ಸಿನಿಮಾದ ಸೋಲಿನ ಬಳಿಕ ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡಿಲ್ಲ. ಹಾಗಾಗಿ ಅವರ ಪಾಲಿಗೆ ‘ಪಠಾಣ್’ ಚಿತ್ರ ಕಮ್ಬ್ಯಾಕ್ ಪ್ರಾಜೆಕ್ಟ್ ಆಗಲಿದೆ. ಈ ಸಿನಿಮಾವನ್ನು ಅದ್ದೂರಿಯಾಗಿ ಸ್ವಾಗತಿಸಬೇಕು ಎಂಬುದು ಅಭಿಮಾನಿಗಳ ಆಸೆ. ಅದಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳಲಾಗುತ್ತಿದೆ. 4 ವರ್ಷಗಳ ಬಳಿಕ ಶಾರುಖ್ ಖಾನ್ ಅವರ ಸಿನಿಮಾ ತೆರೆಕಾಣುತ್ತಿರುವುದರಿಂದ ಜೋಶ್ ಜೋರಾಗಿದೆ. ಆದರೆ ಅದಕ್ಕೆ ಬಹಿಷ್ಕಾರದ ಭಯವೂ ಕಾಡುತ್ತಿದೆ.
ಇದನ್ನೂ ಓದಿ: Shah Rukh Khan: ಮೋದಿ ತಾಯಿ ನಿಧನಕ್ಕೆ ಶಾರುಖ್ ಖಾನ್ ಸಂತಾಪ; ‘ಪಠಾಣ್’ ಹೀರೋ ಹೇಳಿದ್ದಿಷ್ಟು..
ಕೆಲವು ಕಾರಣಗಳಿಂದಾಗಿ ಶಾರುಖ್ ಖಾನ್ ಅವರ ಸಿನಿಮಾಗಳನ್ನು ಕೆಲವರು ವಿರೋಧಿಸುತ್ತಿದ್ದಾರೆ. ‘ಪಠಾಣ್’ ಚಿತ್ರದ ವಿಚಾರದಲ್ಲೂ ಅದು ಮುಂದುವರಿದಿದೆ. ಈ ಚಿತ್ರದ ‘ಬೇಷರಂ ರಂಗ್..’ ಹಾಡು ಬಿಡುಗಡೆ ಆದಾಗಿನಿಂದ ವಿರೋಧದ ಕಿಚ್ಚು ಜೋರಾಗಿದೆ. ಈ ಗೀತೆಯಲ್ಲಿ ದೀಪಿಕಾ ಪಡುಕೋಣೆ ಅವರು ಕಾಣಿಸಿಕೊಂಡ ರೀತಿ ಸರಿಯಿಲ್ಲ ಮತ್ತು ಕೇಸರಿ ಬಣ್ಣದ ಬಿಕಿನಿ ಧರಿಸಿದ್ದು ಸೂಕ್ತವಲ್ಲ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಚಿತ್ರವನ್ನು ಬಹಿಷ್ಕಾರ ಮಾಡಬೇಕು ಎಂದು ಅಭಿಯಾನ ನಡೆಯುತ್ತಿದೆ.
ಇದನ್ನೂ ಓದಿ: Jhoome Jo Pathaan: ‘ಪಠಾಣ್’ ಚಿತ್ರದ 2ನೇ ಹಾಡಿನಲ್ಲಿ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮಿಂಚಿಂಗ್
ಎಲ್ಲ ಸಂದರ್ಭದಲ್ಲೂ ಬಹಿಷ್ಕಾರದ ಬಿಸಿ ತಟ್ಟಿಯೇಬಿಡುತ್ತದೆ ಅಂತೇನೂ ಇಲ್ಲ. ಸಿನಿಮಾ ಚೆನ್ನಾಗಿದ್ದರೆ ಪ್ರೇಕ್ಷಕರು ಖಂಡಿತಾ ಚಿತ್ರಮಂದಿರಕ್ಕೆ ಬಂದು ವೀಕ್ಷಿಸುತ್ತಾರೆ. ಹಾಗಾಗಿ ‘ಪಠಾಣ್’ ಹೇಗಿರಲಿದೆ ಎಂಬುದರ ಮೇಲೆ ಎಲ್ಲವೂ ನಿರ್ಧಾರ ಆಗಲಿದೆ. ಈ ಚಿತ್ರಕ್ಕೆ ಸಿದ್ದಾರ್ಥ್ ಆನಂದ್ ಅವರು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ‘ಬ್ಯಾಂಗ್ ಬ್ಯಾಂಗ್’, ‘ವಾರ್’ ಮುಂತಾದ ಸಾಹಸ ಪ್ರಧಾನ ಸಿನಿಮಾಗಳನ್ನು ನೀಡಿದ್ದ ಅವರು ಈಗ ‘ಪಠಾಣ್’ ಚಿತ್ರವನ್ನು ಜನರ ಮುಂದಿಡುತ್ತಿದ್ದಾರೆ. ಹಾಗಾಗಿ ಅವರ ಕೆಲಸದ ಮೇಲೆ ಪ್ರೇಕ್ಷಕರಿಗೆ ಭರವಸೆ ಇದೆ.
‘ಪಠಾಣ್’ ಚಿತ್ರ ಉತ್ತಮ ಕಲೆಕ್ಷನ್ ಮಾಡಿದರೆ ಬಾಲಿವುಡ್ಗೆ 2023ರ ಆರಂಭದಲ್ಲೇ ಒಳ್ಳೆಯ ಓಪನಿಂಗ್ ಸಿಕ್ಕಂತೆ ಆಗುತ್ತದೆ. ಶಾರುಖ್ ಖಾನ್ ಅವರು ಮತ್ತೆ ಗೆಲುವಿನ ಟ್ರಾಕ್ಗೆ ಮರಳಲು ಸಾಧ್ಯವಾಗುತ್ತದೆ. ಏನಾಗಲಿದೆ ಅಂತ ತಿಳಿಯಲು ಬಾಲಿವುಡ್ ಮಂದಿ ಕಾದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.