ಬಾರಿ ದೊಡ್ಡ ಪ್ರಾಜೆಕ್ಟ್ಗೆ ಕೈ ಹಾಕಿದ ಬೋನಿ ಕಪೂರ್, ಸಾವಿರಾರು ಕೋಟಿ ಯೋಜನೆ
Boney Kapoor: ಹಲವು ದಶಕಗಳಿಂದಲೂ ಚಿತ್ರರಂಗದಲ್ಲಿರುವ ನಿರ್ಮಾಪಕ ಬೋನಿ ಕಪೂರ್, ಇದೀಗ ಭಾರಿ ದೊಡ್ಡ ಯೋಜನೆಯೊಂದಕ್ಕೆ ಕೈ ಹಾಕಿದ್ದಾರೆ. ಇದು ಸಾವಿರಾರು ಕೋಟಿ ರೂಪಾಯಿಯ ಪ್ರಾಜೆಕ್ಟ್.
ಬೋನಿ ಕಪೂರ್ (Boney Kapoor) ಭಾರತದ ದೊಡ್ಡ ನಿರ್ಮಾಪಕರಲ್ಲಿ ಒಬ್ಬರು. ಮಾತ್ರವಲ್ಲ ಅತ್ಯಂತ ಜಾಣ ನಿರ್ಮಾಪಕ, ಹೂಡಿಕೆದಾರ ಎಂದು ಹೆಸರು ಗಳಿಸಿದ್ದಾರೆ ಸಹ. ಬೋನಿ ಕಪೂರ್ ಪುತ್ರಿ ಜಾನ್ಹವಿ ಕಪೂರ್ ಒಮ್ಮೆ ಹೇಳಿದ್ದಂತೆ, ಬೋನಿ ಕಪೂರ್ ಅವರ ಬಳಿ ಸಲಹೆ ಕೇಳಲು ದಿನಕ್ಕೆ ಮೂವರಾದರೂ ಮನೆಗೆ ಬರುತ್ತಾರೆ, ಕನಿಷ್ಟ 10 ಮಂದಿ ಕರೆ ಮಾಡಿ ಮಾತನಾಡುತ್ತಾರೆ. ಬೋನಿ ಅವರು ಎಸ್ ಅಂದಮೇಲಷ್ಟೆ ಸಿನಿಮಾಗಳ ಮೇಲೆ ಬಂಡವಾಳ ಹೂಡುವ ನಿರ್ಮಾಪಕರು ಬಾಲಿವುಡ್ನಲ್ಲಿದ್ದಾರೆ. ಇದೀಗ ಬೋನಿ ಭಾರಿ ದೊಡ್ಡ ಹೂಡಿಕೆಯೊಂದನ್ನು ಮಾಡಿದ್ದಾರೆ. ಅದು ಸಣ್ಣ ಪ್ರಾಜೆಕ್ಟ್ ಅಲ್ಲ, ಭಾರಿ ದೊಡ್ಡ ಯೋಜನೆ. ಸಾವಿರಾರು ಕೋಟಿ ಹೂಡಿಕೆಯನ್ನು ಬೋನಿ ಮಾಡಲಿದ್ದಾರೆ.
ಹಲವು ದಶಕಗಳಿಂದಲೂ ಸಿನಿಮಾಗಳ ಮೇಲೆ ಮಾತ್ರವೇ ಅಲ್ಲದೆ ರಿಯಲ್ ಎಸ್ಟೇಟ್ ಹಾಗೂ ಇನ್ನಿತರೆ ಉದ್ಯಮಗಳ ಮೇಲೆ ಹೂಡಿಕೆ ಮಾಡುತ್ತಾ ಬಂದಿರುವ ಬೋನಿ ಕಪೂರ್, ಈಗ ಭಾರಿ ದೊಡ್ಡ ಪ್ರಾಜೆಕ್ಟ್ಗೆ ಕೈ ಹಾಕಿದ್ದಾರೆ. ಉತ್ತರ ಪ್ರದೇಶ ರಾಜ್ಯ ಸರ್ಕಾರದ ನೆರವಿನಿಂದ ನೋಯ್ಡಾನಲ್ಲಿ ಅಂತರಾಷ್ಟ್ರೀಯ ದರ್ಜೆಯ ಫಿಲಂಸಿಟಿಯೊಂದನ್ನು ಪಾಲುದಾರಿಕೆಯಲ್ಲಿ ನಿರ್ಮಾಣ ಮಾಡಲಿದ್ದಾರೆ.
ಬೋನಿ ಕಪೂರ್ ಒಡೆತನದ ಬೇವೀವ್ ಪ್ರಾಜೆಕ್ಟ್ಸ್ ಹಾಗೂ ಬೂತಾನಿ ಇನ್ಫ್ರಾ ಗ್ರೂಪ್ಸ್ ಸಂಸ್ಥೆಗಳು ನೋಯ್ಡಾದಲ್ಲಿ ಬೃಹತ್ ಫಿಲಂ ಸಿಟಿ ನಿರ್ಮಾಣದ ಕಾಮಗಾರಿಯ ಟೆಂಡರ್ಗೆ ಅರ್ಜಿ ಹಾಕಿದ್ದವು. ಇದೀಗ ಟೆಂಡರ್ ಬೋನಿ ಕಪೂರ್ ಅವರ ಸಂಸ್ಥೆಗಳಿಗೆ ದೊರಕಿದ್ದು ಈ ಖುಷಿಯ ಸಂಗತಿಯನ್ನು ಸ್ವತಃ ಬೋನಿ ಕಪೂರ್ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:Boney Kapoor: ನಿರ್ಮಾಪಕ ಬೋನಿ ಕಪೂರ್ ಪ್ರೀತಿ ಒಪ್ಪಲು ನಟಿ ಶ್ರೀದೇವಿಗೆ ಬೇಕಾಯ್ತು ಹಲವು ವರ್ಷ
‘ಉತ್ತರ ಪ್ರದೇಶದ ನೋಯ್ಡಾದಲ್ಲಿ ಅಂತರಾಷ್ಟ್ರೀಯ ಸಿನಿಮಾ ಸ್ಟುಡಿಯೋವನ್ನು ಅಭಿವೃದ್ಧಿಪಡಿಸಲು ಟೆಂಡರ್ ಬೇವ್ಯೂ ಪ್ರಾಜೆಕ್ಟ್ಸ್ ಮತ್ತು ಭೂತಾನಿ ಇನ್ಫ್ರಾಕ್ಕೆ ಧಕ್ಕಿರುವುದನ್ನು ಗೌರವವಾಗಿ ಭಾವಿಸುತ್ತೇನೆ. ನಾವು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ನಿರೀಕ್ಷೆಗೆ ಅನುಗುಣವಾಗಿ ಕೆಲಸ ಮಾಡುತ್ತೇವೆ ಮತ್ತು ಈ ಸ್ಟುಡಿಯೋವನ್ನು ಪ್ರಪಂಚದಾದ್ಯಂತದ ಚಲನಚಿತ್ರ ನಿರ್ಮಾಪಕರಿಗೆ ಚಲನಚಿತ್ರ ಚಿತ್ರೀಕರಣಕ್ಕಾಗಿ ಅಂತರರಾಷ್ಟ್ರೀಯ ಕೇಂದ್ರವನ್ನಾಗಿ ಮಾಡುತ್ತೇವೆ’ ಎಂದಿದ್ದಾರೆ.
ಮುಂದುವರೆದು, ‘ನಿರ್ಮಾಣ ಮಾಡುವ ಸ್ಟುಡಿಯೋ ಕೇವಲ ಚಿತ್ರೀಕರಣಕ್ಕೆ ಮಾತ್ರವಲ್ಲದೆ ಪೋಸ್ಟ್ ಪ್ರೊಡಕ್ಷನ್ ಸೌಲಭ್ಯಗಳನ್ನು ಹೊಂದಿರಲಿದೆ. ನಿರ್ಮಾಪಕರು ಸ್ಕ್ರಿಪ್ಟ್‌ನೊಂದಿಗೆ ಸ್ಟುಡಿಯೋ ಒಳಗೆ ಬಂದು ರೆಡಿ ಸಿನಿಮಾದೊಂದಿಗೆ ಹೊರಗಡೆ ಹೋಗುವಂತೆ ಎಲ್ಲ ಸೌಕರ್ಯಗಳು, ತಂತ್ರಜ್ಞಾನವನ್ನೂ ಸಹ ಒಳಗೊಂಡಿರುವಂತೆ ಮಾಡುತ್ತೇವೆ. ನಾವು ಪ್ರಧಾನಿ ಮೋದಿಯವರ ದೂರದೃಷ್ಠಿ ಹಾಗೂ ಮೇಕ್ ಇನ್ ಇಂಡಿಯಾ ಘೋಷಣೆಗೆ ಅನುಗುಣದಂತೆ ಈ ಪ್ರಾಜೆಕ್ಟ್ ಅನ್ನು ಪೂರ್ತಿ ಮಾಡಲಿದ್ದೇವೆ’ ಎಂದಿದ್ದಾರೆ ಬೋನಿ ಕಪೂರ್.
ನೋಯ್ಡಾದ ಯಮುನಾ ನದಿ ಬಳಿ ಅಂತರಾಷ್ಟ್ರೀಯ ಗುಣಮಟ್ಟದ ಫಿಲಂ ಸಿಟಿ ನಿರ್ಮಾಣ ಆಗಲಿದೆ. ಬಾಲಿವುಡ್ ಸೇರಿದಂತೆ ಹಲವು ಚಿತ್ರರಂಗಗಳ ಹಿರಿಯ ನಟರು, ನಿರ್ಮಾಪಕರು, ತಂತ್ರಜ್ಞರನ್ನು ಕರೆಸಿ ಯೋಗಿ ಆದಿತ್ಯನಾಥ್ ಅವರು ಸಲಹೆಗಳನ್ನು ಸ್ವೀಕರಿಸಿ ಫಿಲಂಸಿಟಿ ನಿರ್ಮಾಣ ಘೋಷಣೆ ಮಾಡಿದ್ದರು. ಕೆಲವೇ ದಿನಗಳಲ್ಲಿ ನಿರ್ಮಾಣ ಕಾರ್ಯ ಆರಂಭವಾಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ