‘ದೇವರ’ ಸಿನಿಮಾ ಬಗ್ಗೆ ರಾಷ್ಟ್ರಪ್ರಶಸ್ತಿ ವಿಜೇತ ಕೊರಿಯೋಗ್ರಾಫರ್ ಅಸಮಾಧಾನ
Devara: ಜೂ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ಬಿಡುಗಡೆ ಆಗಿ ತಿಂಗಳುಗಳೇ ಆಗಿವೆ. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹಿಟ್ ಎನಿಸಿಕೊಂಡಿದೆ. ವಿದೇಶಗಳಲ್ಲಿಯೂ ಸಹ ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಆದರೆ ಇದೀಗ ರಾಷ್ಟ್ರಪ್ರಶಸ್ತಿ ವಿಜೇತ ಡ್ಯಾನ್ಸ್ ಕೊರಿಯಾಗ್ರಫರ್ ಒಬ್ಬರು ಸಿನಿಮಾ ಬಗ್ಗೆ ತಕರಾರು ಎತ್ತಿದ್ದಾರೆ.

ಜೂ ಎನ್ಟಿಆರ್ (Jr NTR) ನಟನೆಯ ‘ದೇವರ’ ಸಿನಿಮಾ ಬಿಡುಗಡೆ ಆಗಿ ತಿಂಗಳುಗಳೇ ಆಗಿವೆ. ಇದೀಗ ಸಿನಿಮಾ ಒಟಿಟಿಗೂ ಬಂದಾಗಿದೆ. ಸಿನಿಮಾ ಭಾರತದಲ್ಲಿ ಮಾತ್ರವೇ ಅಲ್ಲದೆ ಜಪಾನ್ನಲ್ಲಿಯೂ ಭರ್ಜರಿ ಕಲೆಕ್ಷನ್ ಮಾಡಿದೆ. ಜೂ ಎನ್ಟಿಆರ್ ಅನ್ನು ಜಪಾನ್ನಲ್ಲಿ ಸಹ ಸ್ಟಾರ್ ಅನ್ನಾಗಿ ಮಾಡಿದೆ. ಸಿನಿಮಾದ ಬಗ್ಗೆ ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತಾದರೂ ಆ ನಂತರ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಚೇತರಿಕೆ ಕಂಡು ಒಳ್ಳೆಯ ಮೊತ್ತ ಗಳಿಕೆ ಮಾಡಿತು. ಆದರೆ ಇಷ್ಟೆಲ್ಲ ಆದ ಬಳಿಕ ಭಾರತದ ಖ್ಯಾತ ಡ್ಯಾನ್ಸ್ ಕೊರಿಯೋಗ್ರಾಫರ್ ಒಬ್ಬರು ‘ದೇವರ’ ಸಿನಿಮಾ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಲವಾರು ಸೂಪರ್-ಡೂಪರ್ ಹಿಟ್ ಸಿನಿಮಾಗಳಿಗೆ ನೃತ್ಯ ಸಂಯೋಜನೆ ಮಾಡಿರುವ ಖ್ಯಾತ ಡ್ಯಾನ್ಸ್ ಕೊರಿಯೋಗ್ರಾಫರ್ ಬಾಸ್ಕೊ ಮಾರ್ಟಿಸ್ ‘ದೇವರ’ ಸಿನಿಮಾ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ದೇವರ’ ಸಿನಿಮಾನಲ್ಲಿ ‘ಚುಟ್ಟುಮಲ್ಲೆ’ ಹಾಡು ಬಹಳ ಹಿಟ್ ಆಗಿತ್ತು. ಆ ಹಾಡು ಬಂದಾಗ ಚಿತ್ರಮಂದಿರದಲ್ಲಿ ಅಭಿಮಾನಿಗಳು ಸಹ ಜೋರಾಗಿ ಹಾಡು ಹಾಡಿ ಎಂಜಾಯ್ ಮಾಡುತ್ತಿದ್ದಾರೆ. ಆ ಹಾಡಿಗೆ ಜಾನ್ಹವಿ ಮತ್ತು ಜೂ ಎನ್ಟಿಆರ್ ಸಖತ್ ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡಿದ್ದರು. ಆ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದು ಖ್ಯಾತ ಡ್ಯಾನ್ಸ್ ಕೊರಿಯೋಗ್ರಾಫರ್ ಭಾಸ್ಕೊ ಮಾರ್ಟಿಸ್.
ಆದರೆ ‘ದೇವರ’ ಸಿನಿಮಾ ತಂಡದವರು ಭಾಸ್ಕೊಗೆ ಸಿಗಬೇಕಾದ ಮನ್ನಣೆ ನೀಡಿಲ್ಲವಂತೆ. ಸಿನಿಮಾದ ಪ್ರಚಾರ ಸಂದರ್ಭದಲ್ಲಾಗಲಿ ಸಂದರ್ಶನಗಳಲ್ಲಾಗಲಿ, ಜಾನ್ಹವಿ ಅಥವಾ ಜೂ ಎನ್ಟಿಆರ್ ಅವರುಗಳು ‘ಚುಟ್ಟುಮಲ್ಲೆ’ ಹಾಡಿಗೆ ಭಾಸ್ಕೊ ನೃತ್ಯ ಸಂಯೋಜನೆ ಮಾಡಿರುವ ವಿಷಯವನ್ನು ಹೇಳಿಲ್ಲವಂತೆ. ಈ ವಿಷಯದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಭಾಸ್ಕೊ, ಕನಿಷ್ಟ ಜಾನ್ಹವಿಯಾದರೂ ಈ ಬಗ್ಗೆ ಮಾತನಾಡಬೇಕಿತ್ತು, ಆದರೆ ಅವರೂ ಸಹ ಮಾತನಾಡಿಲ್ಲ. ಕೊರಿಯೋಗ್ರಾಫರ್ಗಳನ್ನು ಚಿತ್ರರಂಗದ ಹೇಗೆ ನಡೆಸಿಕೊಳ್ಳುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ’ ಎಂದಿದ್ದಾರೆ.
ಇದನ್ನೂ ಓದಿ:ವಿಜಯ್ ದೇವರಕೊಂಡ ವಾಟ್ಸಾಪ್ ಚಾಟ್ ಸ್ಕ್ರೀನ್ಶಾಟ್ ವೈರಲ್; ಪ್ರಮುಖ ವಿಷಯ ಲೀಕ್
ವಿಕ್ಕಿ ಕೌಶಲ್ ಅವರ ಸೂಪರ್ ಹಿಟ್ ಹಾಡು ‘ತೌಬಾ ತೌಬಾ’ಗೂ ಭಾಸ್ಕೋ ಅವರೇ ನೃತ್ಯ ಸಂಯೋಜನೆ ಮಾಡಿದ್ದರು. ಅದೇ ಸಂದರ್ಶನದಲ್ಲಿ ವಿಕ್ಕಿ ಕೌಶಲ್ ಅವರನ್ನು ಕೊಂಡಾಡಿರುವ ಭಾಸ್ಕೊ, ‘ತೌಬಾ ತೌಬಾ ಸ್ಟೆಪ್ ವೈರಲ್ ಆದಾಗ ಎಲ್ಲ ಸಂದರ್ಶನದಲ್ಲೂ ಸಹ ಅವರು ನನ್ನ ಹೆಸರು ತೆಗೆದುಕೊಂಡು ನನಗೆ ಧನ್ಯವಾದ ಹೇಳಿದರು. ಆದರೆ ‘ದೇವರ’ ತಂಡದವರು ಹಾಗೆ ಮಾಡಿಲ್ಲ’ ಎಂದಿದ್ದಾರೆ. ಸಿನಿಮಾದ ಟೈಟಲ್ ಕಾರ್ಡ್ನಲ್ಲಿ ಭಾಸ್ಕೊ ಮಾರ್ಟಿಸ್ ಹೆಸರು ಇದೆ ಆದರೆ ಚಿತ್ರತಂಡ ಎಲ್ಲೂ ಸಹ ಭಾಸ್ಕೊ ಹೆಸರು ಹೇಳಿಲ್ಲ ಎಂಬುದು ಅವರ ಬೇಸರ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




