
ತಮಿಳಿನ ಸ್ಟಾರ್ ನಟ ವಿಜಯ್, ತಮ್ಮ ಸಿನಿಮಾ ಜನಪ್ರಿಯತೆ ಬಳಿಸಿಕೊಂಡು ತಮಿಳುನಾಡಿನ ಸಿಎಂ ಆಗಿದ್ದಾರೆ. ಆ ಮೂಲಕ ತಮ್ಮ ಸಮಕಾಲೀನ ಸ್ಟಾರ್ ನಟರುಗಳಿಗೆ ಭರವಸೆ ತುಂಬಿದ್ದಾರೆ. ತಾವೂ ಪ್ರಯತ್ನ ಪಟ್ಟರೆ ರಾಜಕೀಯದಲ್ಲಿ ದೊಡ್ಡ ಮಟ್ಟದಲ್ಲಿ ಮಿಂಚಬಹುದು ಎಂದು ಯೋಚಿಸುವಂತೆ ಮಾಡಿದ್ದಾರೆ. ಇದೀಗ ವಿಜಯ್ ಗೆಲುವಿನ ಬಳಿಕ ಬೇರೆ-ಬೇರೆ ಚಿತ್ರರಂಗದಲ್ಲಿ ಹಲವರು ರಾಜಕೀಯ ಮಹಾತ್ವಾಕಾಂಕ್ಷೆಯನ್ನು ಇರಿಸಿಕೊಂಡು ಆ ದಿಕ್ಕಿನೆಡೆ ಕೆಲಸ ಮಾಡುತ್ತಿದ್ದಾರೆ. ತಮಿಳು ಚಿತ್ರರಂಗದ ಕೆಲ ಸ್ಟಾರ್ ನಟರೂ ಸಹ ರಾಜಕೀಯ ಪ್ರವೇಶಕ್ಕೆ ಸಿದ್ಧವಾಗುತ್ತಿದ್ದಾರೆ ಎನ್ನಲಾಗುತ್ತಿದ್ದು, ಅವರಲ್ಲಿ ನಟ ಧನುಶ್ ಸಹ ಒಬ್ಬರು ಎನ್ನಲಾಗುತ್ತಿದೆ.
ಇದಕ್ಕೆ ಸಾಕ್ಷಿಯಾಗಿ ತಮಿಳು ನಟ ಧನುಷ್ ಅವರು ತಮ್ಮ ಅಧಿಕೃತ ಅಭಿಮಾನಿ ಸಂಘವನ್ನು ‘ಧನುಷ್ ವೆಲ್ಫೇರ್ ಮೂವ್ಮೆಂಟ್’ (ಧನುಷ್ ಜನಕಲ್ಯಾಣ ಚಳವಳಿ) ಎಂದು ಮರುನಾಮಕರಣ ಮಾಡಿದ್ದಾರೆ. ಇದು ನಟನ ರಾಜಕೀಯ ಭವಿಷ್ಯದ ಕುರಿತು ತಮಿಳುನಾಡು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಊಹಾಪೋಹಗಳಿಗೆ ಕಾರಣವಾಗಿದೆ. ವಿಜಯ್ ಸಹ ತಮ್ಮ ಅಭಿಮಾನಿ ಸಂಘಟನೆಯನ್ನು ವೆಲ್ಫೇರ್ ಸಂಘವನ್ನಾಗಿ ಬದಲಾವಣೆ ಮಾಡಿ, ಅದರ ಮೂಲಕ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿ ಅದರ ಮೂಲಕವೇ ರಾಜ್ಯದಾದ್ಯಂತ ಸಂಘಟನೆ ಮಾಡಿ, ಬಳಿಕ ರಾಜಕೀಯಕ್ಕೆ ಕಾಲಿಟ್ಟರು, ಈಗ ಧನುಶ್ ಸಹ ವಿಜಯ್ ರೀತಿಯೇ ತಮ್ಮ ಅಭಿಮಾನಿ ಸಂಘವನ್ನು ಸಮಾಜ ಸೇವಾ ಸಂಘವನ್ನಾಗಿ ಬದಲಾವಣೆ ಮಾಡಿರುವುದು ಸಹಜವಾಗಿಯೇ ಕುತೂಹಲ ಕೆರಳಿಸಿದೆ.
ತಮಿಳು ಮಾತ್ರವೇ ಅಲ್ಲದೆ, ಹಿಂದಿ, ತೆಲುಗು ಸಿನಿಮಾಗಳಲ್ಲಿಯೂ ನಟಿಸಿ, ಹಿಟ್ಗಳನ್ನು ನೀಡಿ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಧನುಶ್ ಅವರು ಈ ವರೆಗೆ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ, ಇಚ್ಛೆಯನ್ನೂ ವ್ಯಕ್ತಪಡಿಸಿಲ್ಲ. ಆದರೆ ಅವರು ಈಗ ಅಭಿಮಾನಿ ಸಂಘದ ಹೊಸ ಹೆಸರು ಬದಲಾವಣೆ ಮಾಡಿರುವುದು ಮತ್ತು ಸಾಮಾಜಿಕ ಕಾರ್ಯಗಳ ಮೇಲೆ ಗಮನ ಹರಿಸಿರುವುದು ನೋಡಿದರೆ ಧನುಶ್ ಅವರಿಗೆ ರಾಜಕೀಯ ಮಹಾತ್ವಾಕಾಂಕ್ಷೆ ಇರುವ ಅನುಮಾನ ಮೂಡದೇ ಇರದು.
ಇದನ್ನೂ ಓದಿ:ವಿಜಯ್ ದೇವರಕೊಂಡ ಅವರನ್ನು ಪವನ್ ಕಲ್ಯಾಣ್ಗೆ ಹೋಲಿಸಿದ ನಿರ್ದೇಶಕ
ಕೋಯಮತ್ತೂರಿನಲ್ಲಿ ನಡೆದ ಧನುಶ್ ಅವರ ಅಭಿಮಾನಿ ಸಂಘದ ಹಿರಿಯ ಸದಸ್ಯರ ಸಭೆಯಲ್ಲಿ ಸಂಘದ ಹೆಸರನ್ನು ಮರುನಾಮಕರಣ ಮಾಡಲಾಗಿದೆ. ದಿನಪೂರ್ತಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 3,000 ಕ್ಕೂ ಹೆಚ್ಚು ಪದಾಧಿಕಾರಿಗಳು ಭಾಗವಹಿಸಿದ್ದರಂತೆ. ಶಿಸ್ತು, ಸಾಮಾಜಿಕ ಜವಾಬ್ದಾರಿ ಮತ್ತು ಸಮುದಾಯ ಕಲ್ಯಾಣವೇ ಈ ಸಭೆಯ ಮುಖ್ಯ ಉದ್ದೇಶವಾಗಿತ್ತು. ಕಾರ್ಯಕ್ರಮದಲ್ಲಿ ನಟ ಧನುಷ್ ಸ್ವತಃ ಉಪಸ್ಥಿತರಿರಲಿಲ್ಲ. ಧನುಷ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಚಲನಚಿತ್ರ ನಿರ್ದೇಶಕ ಸುಬ್ರಮಣ್ಯಂ ಶಿವ ಅವರ ಪ್ರಕಾರ, ಮಾಜಿ ಪತ್ರಕರ್ತ ಮತ್ತು ಎಐಎಡಿಎಂಕೆ (AIADMK) ಮಾಜಿ ಸಂಸದ ರಬಿ ಬರ್ನಾರ್ಡ್ ಈ ಸಭೆಯನ್ನು ಉದ್ದೇಶಿಸಿ ಸುಮಾರು ಒಂದು ಗಂಟೆಗಳ ಕಾಲ ಮಾತನಾಡಿದರು. ಅವರ ಭಾಷಣದಲ್ಲಿ ಶಿಸ್ತು, ನಿರಂತರ ಕಲ್ಯಾಣ ಕಾರ್ಯಗಳು ಮತ್ತು ಸಮಾಜಕ್ಕೆ ನೀಡುವ ಕೊಡುಗೆಯ ಮಹತ್ವದ ಕುರಿತು ವಿವರವಾಗಿ ಚರ್ಚಿಸಲಾಯಿತು.
ಚುನಾವಣಾ ರಾಜಕೀಯಕ್ಕೆ ಧುಮುಕುವ ಮೊದಲು, ನಟ ವಿಜಯ್ ತಮ್ಮ ಅಭಿಮಾನಿ ಸಂಘವನ್ನು ಸಮಾಜ ಸೇವಾ ಸಂಸ್ಥೆಯಾಗಿ ಪರಿವರ್ತಿಸಿದ್ದರು. ಇದು ಉಚಿತ ಆಹಾರ ವಿತರಣೆ, ಗ್ರಂಥಾಲಯಗಳ ಆರಂಭ ಮತ್ತು ಕಾನೂನು ನೆರವಿನಂತಹ ಚಟುವಟಿಕೆಗಳನ್ನು ಆಯೋಜಿಸಿತ್ತು. ಇದೇ ಸಂಸ್ಥೆ ಮೂಲಕ ರಾಜ್ಯದಾದ್ಯಂತ ಸಂಘಟೆಯನ್ನೂ ಸಹ ವಿಜಯ್ ಮಾಡಿದ್ದರು. ಧನುಶ್ ಸಹ ಈಗ ಇದೇ ಹಾದಿಯಲ್ಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ