ಹಾಲಿ ಸಿಎಂ ಪಾತ್ರದಲ್ಲಿ ನಟಿಸಲು ಒಲ್ಲೆ ಎಂದ ದುಲ್ಕರ್ ಸಲ್ಮಾನ್
Dulquer Salmaan: ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಜೀವನ, ರಾಜಕೀಯ ಆಧರಿಸಿದ 'ಯಾತ್ರಾ 2' ಸಿನಿಮಾದಲ್ಲಿ ಜಗನ್ ಪಾತ್ರದಲ್ಲಿ ನಟಿಸುವುದಿಲ್ಲವೆಂದು ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಹೇಳಿದ್ದಾರೆ.

ತೆಲುಗು ರಾಜ್ಯದ ರಾಜಕೀಯ (Politics) ಹಾಗೂ ಸಿನಿಮಾಕ್ಕೂ ಬಹಳ ಹತ್ತಿರದ ಸಂಬಂಧ. ಸಿನಿಮಾ ತಾರೆಯರು ರಾಜಕಾರಣಿಗಳಾಗುವುದು ಅಲ್ಲಿ ತೀರಾ ಸಾಮಾನ್ಯ. ಸಿನಿಮಾವನ್ನೂ ಸಹ ತುಸು ಹೆಚ್ಚೇ ರಾಜಕೀಯಕ್ಕೆ ಬಳಸುತ್ತಾ ಬಂದಿದ್ದಾರೆ ಅಲ್ಲಿನ ಸಿನಿಮಾ ಮಂದಿ ಹಾಗೂ ರಾಜಕರಾಣಿಗಳು. ಇದಕ್ಕೆ ಆಂಧ್ರದ ಯಾವುದೇ ಪಾರ್ಟಿ ಹೊರತಲ್ಲ. ಈ ಹಿಂದೆ 2019ರಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗುವ ಒಂದು ತಿಂಗಳ ಮೊದಲು ಹಾಲಿ ಸಿಎಂ ಜಗನ್ ಅವರ ತಂದೆ ರಾಜಶೇಖರ ರೆಡ್ಡಿ ಕುರಿತಾದ ‘ಯಾತ್ರಾ‘ (Yatra) ಸಿನಿಮಾ ಬಿಡುಗಡೆ ಆಗಿತ್ತು. ಮತದಾರರ ಮೇಲೆ ಆ ಸಿನಿಮಾ ದೊಡ್ಡಮಟ್ಟದಲ್ಲಿಯೇ ಪ್ರಭಾವ ಬೀರಿತ್ತು. ಈಗ ಮತ್ತೊಂದು ವಿಧಾನಸಭೆ ಚುನಾವಣೆ ಬರುತ್ತಿದ್ದು, ಈಗ ‘ಯಾತ್ರಾ 2’ ಸಿನಿಮಾಕ್ಕೆ ವೇದಿಕೆ ರೆಡಿಯಾಗಿದೆ.
‘ಯಾತ್ರಾ’ ಸಿನಿಮಾದಲ್ಲಿ ವೈಎಸ್ ರಾಜಶೇಖರ ರೆಡ್ಡಿ ಅವರ ಪಾತ್ರದಲ್ಲಿ ನಟ ಮಮ್ಮುಟಿ ನಟಿಸಿದ್ದರು. ರಾಜಶೇಖರ ರೆಡ್ಡಿ ಅವರ ಜೀವನ, ರಾಜಕೀಯ, ಕಾಂಗ್ರೆಸ್ ಪಕ್ಷದೊಟ್ಟಿಗಿನ ಆಂತರಿಕ ತಿಕ್ಕಾಟ, ಪಾದಯಾತ್ರೆ, ಸಿಎಂ ಆಗಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚಿತ್ರಣವಿತ್ತು. ಇದೀಗ ಆಂಧ್ರ ಪ್ರದೇಶ ಮತ್ತೋಂದು ವಿಧಾನಸಭೆ ಚುನಾವಣೆಗೆ ರೆಡಿಯಾಗಿದ್ದು ‘ಯಾತ್ರಾ 2’ ಸಿನಿಮಾ ಘೋಷಣೆಯೂ ಆಗಿದೆ. ‘ಯಾತ್ರಾ 2’ ಸಿನಿಮಾದಲ್ಲಿ ಜಗನ್ ಮೋಹನ್ ರೆಡ್ಡಿ ಜೀವನ ಕುರಿತಾದ ಚಿತ್ರಣ ಇರಲಿದೆ. ಸಿನಿಮಾದಲ್ಲಿ ಜಗನ್ ಪಾತ್ರದಲ್ಲಿ ದುಲ್ಕರ್ ಸಲ್ಮಾನ್ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ದುಲ್ಕರ್ ಸಲ್ಮಾನ್ ತಾವು ಸಿನಿಮಾದಲ್ಲಿ ನಟಿಸುವುದಿಲ್ಲ ಎಂದಿದ್ದಾರಂತೆ.
ಅಪ್ಪ ರಾಜಶೇಖರ ರೆಡ್ಡಿ ಪಾತ್ರದಲ್ಲಿ ಮಮ್ಮುಟಿ ನಟಿಸಿದ್ದರು, ಮಗ ಜಗನ್ ಪಾತ್ರದಲ್ಲಿ ಮಮ್ಮುಟಿ ಪುತ್ರ ದುಲ್ಕರ್ ಸಲ್ಮಾನ್ ನಟಿಸಲಿ ಎಂಬುದು ಸಿಎಂ ಜಗನ್ ಮೋಹನ್ ರೆಡ್ಡಿ ಉದ್ದೇಶವಾಗಿತ್ತಂತೆ. ಆದರೆ ದುಲ್ಕರ್ ಸಲ್ಮಾನ್ ಇದಕ್ಕೆ ಒಪ್ಪಿಲ್ಲ. ರಾಜಕೀಯ ಉದ್ದೇಶದಿಂದ ಮಾಡುತ್ತಿರುವ ಸಿನಿಮಾ ಇದಾದ್ದರಿಂದಲೇ ‘ಯಾತ್ರಾ 2’ ಸಿನಿಮಾದಲ್ಲಿ ನಟಿಸದಿರಲು ದುಲ್ಕರ್ ಸಲ್ಮಾನ್ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಸೋನಂ ಕಪೂರ್ ಬಗ್ಗೆ ರಾಣಾ ದಗ್ಗುಬಾಟಿ ಹೇಳಿಕೆ: ಪ್ರತಿಕ್ರಿಯೆ ನೀಡಿದ ದುಲ್ಕರ್ ಸಲ್ಮಾನ್
‘ಯಾತ್ರಾ 2’ ಸಿನಿಮಾವನ್ನು ಕೆಲವು ದಿನಗಳ ಹಿಂದಷ್ಟೆ ಘೋಷಿಸಲಾಗಿದೆ. ಈ ಹಿಂದೆ ‘ಯಾತ್ರಾ’ ಸಿನಿಮಾ ನಿರ್ದೇಶನ ಮಾಡಿದ್ದ ಮಹಿ ವಿ ರಾಘವ್ ಅವರೇ ‘ಯಾತ್ರಾ 2’ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಸಿನಿಮಾದ ಚಿತ್ರಕತೆ ಈಗಾಗಲೇ ತಯಾರಾಗಿದೆ. ಸಿನಿಮಾಕ್ಕೆ ಸಂರತೋಶ್ ನಾರಾಯಣ್ ಸಂಗೀತ ನೀಡಲಿದ್ದಾರೆ. ಈ ಹಿಂದಿನ ‘ಯಾತ್ರಾ’ ಸಿನಿಮಾ ನಿರ್ಮಾಣ ಮಾಡಿದ್ದ 70 ಎಂಎಂ ಎಂಟರ್ಟೈನರ್ಸ್ ನಿರ್ಮಾಣ ಸಂಸ್ಥೆಯೇ ‘ಯಾತ್ರಾ 2’ ಸಿನಿಮಾವನ್ನು ನಿರ್ಮಾಣ ಮಾಡಲಿದೆ. ಸಿನಿಮಾ ಮುಂದಿನ ಫೆಬ್ರವರಿಗೆ ಬಿಡುಗಡೆ ಆಗಲಿದೆ ಎಂದು ಈಗಾಗಲೇ ಘೋಷಣೆ ಸಹ ಮಾಡಲಾಗಿದೆ. ಇದೀಗ ದುಲ್ಕರ್ ಸಲ್ಮಾನ್, ನಟಿಸುವುದಿಲ್ಲ ಎಂದ ಬಳಿಕ ಇನ್ಯಾವ ನಟನನ್ನು ಮುಖ್ಯ ಪಾತ್ರಕ್ಕೆ ಆಯ್ಕೆ ಮಾಡಲಿದ್ದಾರೆ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




