ಈವರೆಗೆ ಗ್ರ್ಯಾಮಿ ಅವಾರ್ಡ್ಸ್ ಗೆದ್ದ ಭಾರತೀಯರ ಪಟ್ಟಿ ದೊಡ್ಡದಿದೆ; ಇಲ್ಲಿದೆ ವಿವರ..
Grammy Awards Winners: ಶಕ್ತಿ ಬ್ಯಾಂಡ್ಗೆ ‘ಅತ್ಯುತ್ತಮ ಗ್ಲೋಬಲ್ ಮ್ಯೂಸಿಕ್ ಆಲ್ಬಂ’ ಪ್ರಶಸ್ತಿ ದೊರೆತಿದೆ. ಸಮಕಾಲೀನ ವಾದ್ಯಗಳ ಆಲ್ಬಮ್ ಹಾಗೂ ಗ್ಲೋಬಲ್ ಮ್ಯೂಸಿಕ್ ಪರ್ಫಾರ್ಮೆನ್ಸ್ ಕೆಟಗರಿಯಲ್ಲಿ ರಾಕೇಶ್ ಅವಾರ್ಡ್ ಪಡೆದಿದ್ದಾರೆ. ಈ ಮೊದಲು ರಿಕ್ಕಿ ಕೇಜ್ ಅವರನ್ನು ಸೇರಿಸಿ ಭಾರತದ ಅನೇಕರಿಗೆ ಈ ಪ್ರಶಸ್ತಿ ಸಿಕ್ಕಿದೆ. ಆ ಬಗ್ಗೆ ಇಲ್ಲಿದೆ ವಿವರ.

ಅಮೆರಿಕದ ಲಾಸ್ ಏಂಜಲೀಸ್ನಲ್ಲಿ 66ನೇ ಸಾಲಿನ ಗ್ರ್ಯಾಮಿ ಅವಾರ್ಡ್ (Grammy Awards 2024) ಕಾರ್ಯಕ್ರಮ ನಡೆದಿದೆ. ಭಾರತೀಯ ಕಾಲಮಾನ ಫೆಬ್ರವರಿ 5ರಂದು ಅವಾರ್ಡ್ ಕಾರ್ಯಕ್ರಮ ಜರುಗಿದೆ. ಭಾರತ ಮೂಲದ ಜಾಕಿರ್ ಹುಸೇನ್ಗೆ (ಶಕ್ತಿ ಬ್ಯಾಂಡ್) ಒಂದು ಹಾಗೂ ಕೊಳಲು ವಾದಕ ರಾಕೇಶ್ ಚೌರಾಸಿಯಾ ಅವರಿಗೆ ಎರಡು ಅವಾರ್ಡ್ ಸಿಕ್ಕಿದೆ. ‘ಅತ್ಯುತ್ತಮ ಗ್ಲೋಬಲ್ ಮ್ಯೂಸಿಕ್ ಆಲ್ಬಂ’ ಪ್ರಶಸ್ತಿ ಶಕ್ತಿ ಬ್ಯಾಂಡ್ಗೆ ದೊರೆತಿದೆ. ಸಮಕಾಲೀನ ವಾದ್ಯಗಳ ಆಲ್ಬಮ್ ಹಾಗೂ ಗ್ಲೋಬಲ್ ಮ್ಯೂಸಿಕ್ ಪರ್ಫಾರ್ಮೆನ್ಸ್ ಕೆಟಗರಿಯಲ್ಲಿ ರಾಕೇಶ್ ಅವಾರ್ಡ್ ಗೆದ್ದಿದ್ದಾರೆ. ಈ ಮೊದಲು ರಿಕ್ಕಿ ಕೇಜ್ ಅವರನ್ನು ಸೇರಿಸಿ ಭಾರತದ ಅನೇಕರಿಗೆ ಈ ಪ್ರಶಸ್ತಿ ಸಿಕ್ಕಿದೆ. ಆ ಬಗ್ಗೆ ಇಲ್ಲಿದೆ ವಿವರ.
ರಿಕ್ಕಿ ಕೇಜ್
ರಿಕ್ಕಿ ಕೇಜ್ ಬೆಂಗಳೂರು ಮೂಲದವರು. ಅವರಿಗೆ ಮೂರು ಬಾರಿ ಅವಾರ್ಡ್ ಸಿಕ್ಕಿದೆ. 2015, 2022 ಹಾಗೂ 2023ರರಲ್ಲಿ ಅವರಿಗೆ ಈ ಪ್ರಶಸ್ತಿ ಸಿಕ್ಕಿತ್ತು. ಕಳೆದ ವರ್ಷ ಅವರಿಗೆ ‘ಡಿವೈನ್ ಟೈಡ್ಸ್’ ಆಲ್ಬಂಗೆ ಪ್ರಶಸ್ತಿ ದೊರೆತಿತ್ತು.
ಪಂಡಿತ್ ರವಿ ಶಂಕರ್
ಸಿತಾರ್ ವಾದಕ ಪಂಡಿತ್ ರವಿ ಶಂಕರ್ ಅವರು ಈ ಮೊದಲು ಭಾರತ ರತ್ನದಂಥ ಅವಾರ್ಡ್ ಪಡೆದವರು. ಅವರಿಗೆ ಬರೋಬ್ಬರಿ ಐದು ಬಾರಿ ಗ್ರ್ಯಾಮಿ ಪ್ರಶಸ್ತಿ ಲಭಿಸಿವೆ. 2012ರಲ್ಲಿ ಅವರು ನಿಧನ ಹೊಂದಿದರು. ಆಗ ಅವರಿಗೆ 92 ವರ್ಷ ವಯಸ್ಸಾಗಿತ್ತು. ಈಗಲೂ ಅವರು ಅನೇಕರಿಗೆ ಮಾದರಿ. ಅನೇಕ ಶಿಷ್ಯರನ್ನು ಅವರು ಹೊಂದಿದ್ದರು.
ಜುಬಿನ್ ಮೆಹ್ತಾ
ಜುಬಿನ್ ಮೆಹ್ತಾ ಅವರು ಭಾರತ ಮೂಲದವರು. ಅವರು ಪಾಶ್ಚಾತ್ಯ ಸಂಗೀತ ಸಂಯೋಜಕರು. ಅವರು ಕೂಡ ಐದು ಬಾರಿ ಗ್ರ್ಯಾಮಿ ಅವಾರ್ಡ್ ಗೆದ್ದಿದ್ದಾರೆ. ಅವರು ಮೊದಲ ಬಾರಿ ಈ ಪ್ರಶಸ್ತಿ ಗೆದ್ದಿದ್ದು 1981ರಲ್ಲಿ ಅನ್ನೋದು ವಿಶೇಷ.
ಟಿಎಚ್ ವಿನಯಕ್ರಮ್
ವಿನಯಕ್ರಮ್ ಘಟಂ ವಾದಕರು. ಅವರು ಘಟಂ ದೇವರು ಎಂದೇ ಫೇಮಸ್ ಆಗಿದ್ದಾರೆ. ಇವರು ಕೂಡ ಗ್ರ್ಯಾಮಿ ಅವಾರ್ಡ್ ಪಡೆದಿದ್ದಾರೆ. ಗ್ರ್ಯಾಮಿಯಿಂದ ಬಂದ ಹಣವನ್ನು ಎನ್ಜಿಒ ಒಂದಕ್ಕೆ ಅವರು ನೀಡಿ ಮೆಚ್ಚುಗೆ ಪಡೆದಿದ್ದರು.
ಝಾಕಿರ್ ಹುಸೇನ್
ಝಾಕಿರ್ ಹುಸೇನ್ ತಬಲಾ ವಾದನಕ್ಕೆ ಅನೇಕರು ಮರುಳಾಗಿದ್ದಾರೆ. ಸಂಗೀತ ಲೋಕಕ್ಕೆ ಅವರು ನೀಡಿದ ಕೊಡುಗೆ ಅಪಾರವಾದದ್ದು. 2008ರಲ್ಲಿ ಝಾಕಿರ್ ಹುಸೇನ್ ಗ್ರ್ಯಾಮಿ ಗೆದ್ದರು. ‘ಗ್ಲೋಬಲ್ ಡ್ರಂ ಪ್ರಾಜೆಕ್ಟ್’ಗೆ ಈ ಪ್ರಶಸ್ತಿ ದೊರೆತಿತ್ತು. ಈ ಬಾರಿ ಅವರು ಮತ್ತೆ ಅವಾರ್ಡ್ ಗೆದ್ದಿದ್ದಾರೆ.
ಪಂಡಿತ್ ವಿಶ್ವ ಮೋಹನ್ ಭಟ್
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಾದ್ಯಗಾರ ಪಂಡಿತ್ ವಿಶ್ವ ಮೋಹನ್ ಭಟ್ ಅವರು ಗ್ರ್ಯಾಮಿ ಅವಾರ್ಡ್ ಗೆದ್ದಿದ್ದಾರೆ.
ಎ.ಆರ್. ರೆಹಮಾನ್
ಖ್ಯಾತ ಸಂಗೀತ ಸಂಯೋಜಕ, ಗಾಯಕ ಎ.ಆರ್.ರೆಹಮಾನ್ ಮಾಡಿದ ಸಾಧನೆ ತುಂಬಾನೇ ದೊಡ್ಡದು. ಅವರು ಎರಡು ಆಸ್ಕರ್ ಅವಾರ್ಡ್ ಗೆದ್ದಿದ್ದಾರೆ. ಭಾರತದಲ್ಲಿ ಅವರಿಗೆ ಸಿಕ್ಕ ಅವಾರ್ಡ್ಗಳಿಗೆ ಲೆಕ್ಕವೇ ಇಲ್ಲ. ಅವರು 2008ರಲ್ಲಿ ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದರು.
ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ಸ್ನಲ್ಲಿ ಭಾರತಕ್ಕೆ ಮೂರು ಪ್ರಶಸ್ತಿ; ಇಲ್ಲಿದೆ ಅವಾರ್ಡ್ ಪಡೆದವರ ಪಟ್ಟಿ
ಇವರಿಷ್ಟೇ ಅಲ್ಲದೆ ಮಿಕ್ಸ್ ಇಂಜಿನಿಯರ್ ಪಿ.ಎ. ದೀಪಕ್, ನೀಲಾ, ಫಾಲ್ಗುಣಿ ಶಾ, ಇವರ ಜೊತೆಗೆ ಸೌಂಡ್ ಇಂಜಿನಿಯರ್ ಎಚ್. ಶ್ರೀಧರ್ ಕೂಡ ಈ ಮೊದಲು ಗ್ರ್ಯಾಮಿ ಪ್ರಶಸ್ತಿ ಬಾಚಿಕೊಂಡಿದ್ದರು. ಈ ಬಾರಿ ರಾಕೇಶ್ ಚೌರಾಸಿಯಾ ಕೂಡ ಸೇರ್ಪಡೆ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ