‘ಹರಿ ಹರ ವೀರ ಮಲ್ಲು’ ಬಜೆಟ್ ಎಷ್ಟು, ಪವನ್ ಪಡೆದ ಸಂಭಾವನೆ ಎಷ್ಟು?
Hari Hara Veera Mallu: ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾದ ಬಿಡುಗಡೆಯನ್ನು ಮತ್ತೆ ಮುಂದೂಡಲ್ಪಟ್ಟಿದೆ. ಸಿನಿಮಾದ ನಿರ್ಮಾಪಕರ ಹಣಕಾಸು ಪರಿಸ್ಥಿತಿ ಹದಗೆಟ್ಟಿರುವುದರಿಂದ ಹೀಗಾಗಿದೆ ಎನ್ನಲಾಗುತ್ತಿದೆ. ಅಷ್ಟಕ್ಕೂ ‘ಹರಿ ಹರ ವೀರ ಮಲ್ಲು’ ಸಿನಿಮಾದ ಬಜೆಟ್ ಎಷ್ಟು? ಸಿನಿಮಾಕ್ಕೆ ಪವನ್ ಪಡೆದಿರುವ ಸಂಭಾವನೆ ಎಷ್ಟು ಕೋಟಿ?

ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ, ಪವನ್ ಕಲ್ಯಾಣ್(Pawan Kalyan) ನಟಿಸಿರುವ ‘ಹರಿ ಹರ ವೀರ ಮಲ್ಲು’ ಸಿನಿಮಾ ಹಲವು ಕಾರಣಗಳಿಂದಾಗಿ ಈಗ ಸುದ್ದಿಯಲ್ಲಿದೆ. ಐದು ವರ್ಷಗಳ ಬಳಿಕ ಸಿನಿಮಾದ ಬಿಡುಗಡೆಗೆ ದಿನಾಂಕ ನಿಗದಿಪಡಿಸಲಾಗಿತ್ತು. ಜೂನ್ 12 ರಂದು ಸಿನಿಮಾ ಬಿಡುಗಡೆ ಆಗುವುದಕ್ಕಿತ್ತು ಆದರೆ ಅಷ್ಟರಲ್ಲೇ ಸಿನಿಮಾದ ಬಿಡುಗಡೆ ದಿನಾಂಕವನ್ನು ಮತ್ತೊಮ್ಮೆ ಮುಂದೂಡಲಾಗಿದೆ. ಅದರ ಹಿಂದೆಯೇ ಹಲವು ಸುದ್ದಿಗಳು ಹರಿದಾಡುತ್ತಿದೆ. ಸಿನಿಮಾದ ನಿರ್ಮಾಪಕ ತೀವ್ರ ಸಾಲಕ್ಕೆ ಸಿಕ್ಕಿಕೊಂಡಿದ್ದು, ಫೈನ್ಯಾನ್ಶಿಯರ್ಗಳ ಕಾರಣದಿಂದಾಗಿ ಸಿನಿಮಾ ಬಿಡುಗಡೆ ಮುಂದೂಡಲಾಗಿದೆ ಎನ್ನಲಾಗುತ್ತಿದೆ. ಅಷ್ಟಕ್ಕೂ ‘ಹರಿ ಹರ ವೀರ ಮಲ್ಲು’ ಸಿನಿಮಾದ ಬಜೆಟ್ ಎಷ್ಟು, ಸಿನಿಮಾಕ್ಕೆ ಪವನ್ ಕಲ್ಯಾಣ್ ತೆಗೆದುಕೊಂಡಿರುವ ಸಂಭಾವನೆ ಎಷ್ಟು? ಎಲ್ಲ ಮಾಹಿತಿ ಇಲ್ಲಿದೆ.
ಇತ್ತೀಚೆಗಷ್ಟೆ ‘ಹರಿ ಹರ ವೀರ ಮಲ್ಲು’ ಸಿನಿಮಾದ ಪ್ರಚಾರ ಕಾರ್ಯಕ್ರಮ ಮಚಲೀಪಟ್ಟಣಂ ಬೀಚ್ನಲ್ಲಿ ನಡೆಯಿತು. ಮಚಲೀಪಟ್ಟಣಂ ಬೀಚ್ಗೂ ಸಿನಿಮಾದ ಕತೆಗೂ ಸಂಬಂಧ ಇರುವ ಕಾರಣ ಇಲ್ಲಿಯೇ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ‘ಹರಿ ಹರ ವೀರ ಮಲ್ಲು’ ಸಿನಿಮಾದ ನಿರ್ದೇಶಕರಲ್ಲಿ ಒಬ್ಬರಾಗಿರುವ ಜ್ಯೋತಿ ಕೃಷ್ಣ, ಈ ಸಿನಿಮಾಕ್ಕೆ ನಿರ್ಮಾಪಕರು 250 ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದಾರೆ ಎಂದು ಬಹಿರಂಗವಾಗಿ ಹೇಳಿದರು.
ಇನ್ನು ಸಿನಿಮಾಕ್ಕೆ ಪವನ್ ಕಲ್ಯಾಣ್ ಪಡೆದಿರುವ ಸಂಭಾವನೆ ಸಹ ಅಭಿಮಾನಿಗಳಿಗೆ ಶಾಕ್ ಆಗುವಂಥಹದ್ದೆ. ಪವನ್ ಕಲ್ಯಾಣ್ ಅವರೇ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಂತೆ ಅವರು ಒಂದು ದಿನ ಚಿತ್ರೀಕರಣಕ್ಕೆ ಹೋದರೆ ಎರಡು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರಂತೆ. ಅವರು ಎಷ್ಟು ದಿನ ಚಿತ್ರೀಕರಣ ಮಾಡುತ್ತಾರೆ ಎಂಬುದರ ಮೇಲೆ ಆ ಸಿನಿಮಾಕ್ಕೆ ಅವರು ತೆಗೆದುಕೊಳ್ಳುವ ಸಂಭಾವನೆ ನಿರ್ಧಾರವಾಗುತ್ತದೆ.
ಇದನ್ನೂ ಓದಿ: ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಬಿಡುಗಡೆ ಮತ್ತೆ ಮುಂದೂಡಿಕೆ
ಅಂದಹಾಗೆ ‘ಹರಿ ಹರ ವೀರ ಮಲ್ಲು’ ಸಿನಿಮಾಕ್ಕೆ ಪವನ್ ಕಲ್ಯಾಣ್ ಪಡೆದಿರುವುದು ಕೇವಲ 11 ಕೋಟಿ ಸಂಭಾವನೆ ಮಾತ್ರ. ಹಾಗೆಂದು ಪವನ್ ಕಲ್ಯಾಣ್ ಕೇವಲ ಐದು ದಿನಗಳ ಕಾಲ ಚಿತ್ರೀಕರಣ ಮಾಡಿದ್ದಾರೆ ಎಂದಲ್ಲ. ಪವನ್ ಕಲ್ಯಾಣ್ಗೆ ಆರಂಭದಲ್ಲಿ 10 ಕೋಟಿ ರೂಪಾಯಿ ಹಣವನ್ನು ಅಡ್ವಾನ್ಸ್ ಆಗಿ ನಿರ್ಮಾಪಕರು ನೀಡಿದ್ದರಂತೆ. ಅದಾದ ಬಳಿಕ ಒಂದು ಕೋಟಿ ರೂಪಾಯಿ ಕೊಟ್ಟರಂತೆ. ಸಿನಿಮಾದ ಚಿತ್ರೀಕರಣದಲ್ಲಿ ಆ ನಂತರ ಪವನ್ ಭಾಗಿ ಆಗದ ಕಾರಣ, ಪವನ್ ಸಹ ಸಂಭಾವನೆಯನ್ನು ಕೇಳಲಿಲ್ಲವಂತೆ.
ಈಗ ಸಿನಿಮಾದ ನಿರ್ಮಾಪಕರಾದ ಎಎಂ ರತ್ನಂ ಹಾಗೂ ಎ ದಯಾಕರ್ ರಾವ್ ಅವರುಗಳು ಹಣಕಾಸು ಮುಗ್ಗಟ್ಟಿನಲ್ಲಿ ಸಿಲುಕಿರುವ ಕಾರಣದಿಂದಾಗಿ ನಟ ಪವನ್ ಕಲ್ಯಾಣ್ ಅವರು ತಾವು ಪಡೆದಿದ್ದ ಸಂಭಾವನೆಯನ್ನು ನಿರ್ಮಾಪಕರಿಗೆ ಮರಳಿಸಿದ್ದಾರಂತೆ. ಅಂದರೆ ಪ್ರಸ್ತುತ ಅವರು ‘ಹರಿ ಹರ ವೀರ ಮಲ್ಲು’ ಸಿನಿಮಾಕ್ಕೆ ಯಾವುದೇ ಸಂಭಾವನೆ ಪಡೆದಿಲ್ಲ. ಆದರೆ ಸಿನಿಮಾ ಬಿಡುಗಡೆ ಆದ ಮೇಲೆ ಬರುವ ಲಾಭಾಂಶದಲ್ಲಿ ಪವನ್ಗೆ ಇಂತಿಷ್ಟು ಭಾಗವನ್ನು ನಿರ್ಮಾಪಕರು ಕೊಡುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




