ಪ್ರತಿಭಾವಂತ ನಟನ ವ್ಯವಸ್ಥಿತವಾಗಿ ಮುಗಿಸುತ್ತಿದೆಯೇ ತಮಿಳು ಚಿತ್ರರಂಗ
Chiyaan Vikram: ತಮಿಳು ಚಿತ್ರರಂಗದ ಪ್ರತಿಭಾವಂತ ನಟ ಚಿಯಾನ್ ವಿಕ್ರಂ. ಪಾತ್ರಕ್ಕಾಗಿ ಏನು ಬೇಕಾದರೂ ಮಾಡಲು ತಯಾರಿರುವ ನಟ. ಮಾಸ್ ಸಿನಿಮಾ ಹೀರೋ ಆಗುವ ಎಲ್ಲ ಅವಕಾಶವಿದ್ದರೂ ರಿಸ್ಕ್ ತೆಗೆದುಕೊಂಡು ಸವಾಲಿನ ಪಾತ್ರಗಳನ್ನೇ ಮಾಡುತ್ತಾ ಬರುತ್ತಿದ್ದಾರೆ. ಆದರೆ ತಮಿಳು ಚಿತ್ರರಂಗ ಅವರನ್ನು ವ್ಯವಸ್ಥಿತವಾಗಿ ಮುಗಿಸಲು ಯೋಜನೆ ಹಾಕಿಕೊಂಡಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಹಾಲಿವುಡ್ನಲ್ಲಿ ಕ್ರಿಸ್ಟಿಯಾನ್ ಬೇಲ್ ಎಂಬ ನಟರೊಬ್ಬರಿದ್ದಾರೆ. ಪಾತ್ರಕ್ಕಾಗಿ ಪ್ರಾಣವನ್ನೂ ಪಡಕ್ಕಿಡಬಲ್ಲ ನಟ ಅವರು. ಭಾರತದಲ್ಲಿ ಆ ರೀತಿಯ ಯಾರಾದರೂ ನಟ ಇದ್ದರೆ ಅದು ಚಿಯಾನ್ ವಿಕ್ರಂ. ತಮಿಳಿನ ಈ ನಟ ತನ್ನ ವಾರಗೆಯ ಇತರೆ ನಟರಂತೆ ಕೇವಲ ಕಮರ್ಶಿಯಲ್ ಸಿನಿಮಾಗಳ ಹಿಂದೆ ಬೀಳದೆ ನಟನೆಗೆ ಅವಕಾಶವಿರುವ, ಕತೆಗೆ ಮಹತ್ವ ಇರುವ, ನಟನಾಗಿ ತಮಗೆ ಸವಾಲೊಡ್ಡುವ ಸಿನಿಮಾಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ಆದರೆ ಈಗ ತಮಿಳು ಪ್ರೇಕ್ಷಕರು ಮತ್ತು ಚಿತ್ರರಂಗ ಇಂಥಹಾ ಅದ್ಭುತ ನಟನ ಕೈಬಿಡುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ.
‘ಸೇತು’ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಚಿಯಾನ್ ವಿಕ್ರಂ, ಆ ಸಿನಿಮಾದಲ್ಲಿಯೇ ತಮ್ಮ ನಟನಾ ಪ್ರತಿಭೆ ಎಷ್ಟು ಅಗಾಧವಾದುದು ಎಂಬುದನ್ನು ತೋರಿಸಿದ್ದರು. ಆ ಬಳಿಕ ಆ ಸಿನಿಮಾ ಕನ್ನಡದಲ್ಲಿ ‘ಹುಚ್ಚ’ ಹಿಂದಿಯಲ್ಲಿ ‘ತೇರೆನಾಮ್’ ಹೀಗೆ ಹಲವು ಭಾಷೆಗಳಿಗೆ ರೀಮೇಕ್ ಆಗಿ ಬ್ಲಾಕ್ ಬಸ್ಟರ್ ಆಯ್ತು. ಯಶಸ್ಸು ಸಿಕ್ಕ ಮೇಲೂ ಸಹ ‘ಪಾಪ್ಯುಲರ್ ಹಾದಿ’ಯನ್ನು ಹಿಡಿಯದೆ ರಿಸ್ಕ್ ಆದರೂ ನಟನೆಗೆ ಸವಾಲೊಡ್ಡವ ಪಾತ್ರಗಳನ್ನೇ ಹುಡುಕಿ ಹೆಕ್ಕಿಕೊಂಡ ಚಿಯಾನ್ ವಿಕ್ರಂ, ಎಷ್ಟೋ ಸಿನಿಮಾಗಳನ್ನು ಕೇವಲ ತಮ್ಮ ಅದ್ಬುತ ನಟನೆಯಿಂದಷ್ಟೆ ಗೆಲ್ಲಿಸಿದ ಉದಾಹರಣೆಗಳು ಇವೆ.
‘ಕಾಶಿ’, ‘ಜೆಮಿನಿ’, ‘ಧೂಲ್’, ‘ಸಾಮಿ’, ‘ಪಿತಾಮಗನ್’ (ಈ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಸಹ ಲಭಿಸಿತು ವಿಕ್ರಂಗೆ), ‘ಅನ್ನಿಯನ್’, ‘ಐ’, ‘ದೀವಿ ತಿರುಮಗಲ್’, ‘ರಾವಣನ್’, ‘ಮಹಾನ್’, ‘ಪೊನ್ನಿಯಿನ್ ಸೆಲ್ವನ್’, ‘ತಂಗಲಾನ್’ ಹೀಗೆ ಒಂದಕ್ಕಿಂತಲೂ ಒಂದು ಭಿನ್ನ ಪಾತ್ರಗಳು ಮಾತ್ರವಲ್ಲದೆ ವಿಕ್ರಂ ಬಿಟ್ಟರೆ ಇನ್ಯಾರೂ ನಿಭಾಯಿಸಲಾರರು ಎನ್ನಬಹುದಾದಷ್ಟು ಸವಾಲಿನ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ವಿಕ್ರಂ.
ಇದನ್ನೂ ಓದಿ:ಕ್ಷುಲ್ಲಕ ಕಾರಣಕ್ಕೆ ಐಕಾನಿಕ್ ಸಿನಿಮಾದ ಅವಕಾಶ ಕಳೆದುಕೊಂಡ ವಿಕ್ರಂ
ಮಾಸ್ ನಾಯಕನಾಗುವ ಎಲ್ಲ ಸಾಮರ್ಥ್ಯ ಇದ್ದರೂ ಪೂರ್ಣವಾಗಿ ಆ ದಾರಿಯನ್ನು ತುಳಿಯದೆ ಒಳ್ಳೆಯ ಸಿನಿಮಾ ಕೊಡಬೇಕೆನ್ನುವ ಉಮೇದಿನಿಂದ ದಶಕಗಳಿಂದಲೂ ಕೆಲಸ ಮಾಡುತ್ತಿರುವ ಚಿಯಾನ್ ವಿಕ್ರಂಗೆ ಕಳೆದ ಕೆಲ ವರ್ಷಗಳಿಂದ ಪ್ರೇಕ್ಷಕರ ಬೆಂಬಲ ಸಿಗುತ್ತಿಲ್ಲ. ಚಿಯಾನ್ ಅನ್ನು ನಿಧಾನಕ್ಕೆ ಮೂಲೆಗೆ ಸರಿಸಲಾಗುತ್ತಿದೆ. ಅವರ ಇತ್ತೀಚೆಗಿನ ಕೆಲ ಸಿನಿಮಾಗಳ ಬಾಕ್ಸ್ ಆಫೀಸ್ ಕಲೆಕ್ಷನ್ ಇದಕ್ಕೆ ಸಾಕ್ಷಿ.
ಕೋವಿಡ್ ಬಳಿಕ ಬಿಡುಗಡೆ ಆದ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ಹಿಟ್ ಎನಿಸಿಕೊಂಡಿತು. ಆ ಸಿನಿಮಾದಲ್ಲಿ ವಿಕ್ರಂ ಸೇರಿದಂತೆ ಹಲವಾರು ಸ್ಟಾರ್ ನಟ-ನಟಿಯರ ಜೊತೆಗೆ ಮಣಿರತ್ನಂ ಬ್ರ್ಯಾಂಡ್ ಸಹ ಇತ್ತು. ಅದಾದ ಬಳಿಕ ಬಂದ ‘ತಂಗಲಾನ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಏದುಸಿರು ಬಿಡುತ್ತಲೇ ಓಡಿತ್ತು. ಬಳಿಕ ಬಂದ ‘ವೀರ ಧೀರ ಸೂರನ್’ ಸಿನಿಮಾ ಬಿಡುಗಡೆಯೂ ಕಷ್ಟವಾಗಿತ್ತು. ಮೊದಲ ಎರಡು ಶೋ ರದ್ದಾಯಿತು. ಆ ಬಳಿಕವೂ ಸಹ ಸಿನಿಮಾ ಒಂದು ವಾರದ ಬಳಿಕ 40 ಕೋಟಿ ಗಳಿಕೆಯನ್ನು ಸಹ ದಾಟಿಲ್ಲ.
ಇನ್ನು ವಿಕ್ರಂ ‘ಧ್ರುವ ನಚ್ಚತ್ತಿರಂ’ ಸಿನಿಮಾದಲ್ಲಿ ನಟಿಸಿದ್ದು ಆ ಸಿನಿಮಾ ಬಿಡುಗಡೆಯನ್ನೇ ಕಾಣುತ್ತಿಲ್ಲ. ಈಗ, ಯಾವುದೇ ಸ್ಟಾರ್ ನಟನ ಸಿನಿಮಾ ಬರುತ್ತಿದೆಯೆಂದರೆ ಬೇರೆ ನಟರೆಲ್ಲ ಆ ಸಿನಿಮಾದ ಬಗ್ಗೆ ಪ್ರಮೋಷನ್ ಮಾಡುತ್ತಾರೆ. ಪ್ರೀ ರಿಲೀಸ್ಗೆ ಬರುತ್ತಾರೆ, ಆಡಿಯೋ ಕಾರ್ಯಕ್ರಮಕ್ಕೆ ಬಂದು ಪ್ರಚಾರ ನೀಡುತ್ತಾರೆ. ಆದರೆ ವಿಕ್ರಂಗೆ ಈ ರೀತಿಯ ಯಾವುದೇ ಬೆಂಬಲ ತಮಿಳು ಚಿತ್ರರಂಗದಲ್ಲಿ ಸಿಗುತ್ತಿಲ್ಲ. ಅವರ ಸಿನಿಮಾ ಬಿಡುಗಡೆ ಆದಾಗ ಯಾವೊಬ್ಬರೂ ಸಹ ಬೆಂಬಲಿಸಿ ಪೋಸ್ಟ್ ಹಾಕುವುದಿಲ್ಲ. ಒಟ್ಟಾರೆ ಇಡೀ ಚಿತ್ರರಂಗವೇ ಸೇರಿಕೊಂಡು ಒಬ್ಬ ಒಳ್ಳೆಯ ನಟನ ಸಿನಿಮಾ ಅನ್ನು ಮುಗಿಸಲು ಯೋಜನೆ ಹಾಕಿದೆಯೇ ಎಂಬ ಅನುಮಾನ ಮೂಡುತ್ತಿದೆ.
ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಹಾಟ್ ಬೆಡಗಿ ನೋರಾ ಫತೇಹಿ
ವಿಕ್ರಂ ನಟನೆಯ ‘ಧ್ರುವ ನಚ್ಚತ್ತಿರಮ್’ ಸಿನಿಮಾದ ನಿರ್ದೇಶಕ ಗೌತಮ್ ವಾಸುದೇವ್ ಮೆನನ್, ತಾವೇ ಬಾಯಿಬಿಟ್ಟು ನಮಗೆ ಚಿತ್ರರಂಗದ ಸಹಾಯದ ಅಗತ್ಯವಿದೆ ಎಂದು ಕೇಳಿಕೊಂಡಾಗಲೂ ಸಹ ಯಾರೂ ನೆರವಿಗೆ ಬರಲಿಲ್ಲ. ಅದು ವಿಕ್ರಂ ಸಿನಿಮಾ ಎಂಬ ಕಾರಣಕ್ಕೆ ಇರಬಹುದು. ಗೌತಮ್ ವಾಸುದೇವ್ ಮೆನನ್ ಸಾಮಾನ್ಯ ನಿರ್ದೇಶಕರಲ್ಲ. ಅವರು ನಿರ್ದೇಶಿಸಿರುವ ಬಹುತೇಕ ಸಿನಿಮಾಗಳು ಬ್ಲಾಕ್ ಬಸ್ಟರ್ ಮಾತ್ರವೇ ಅಲ್ಲ ಕಲ್ಟ್ ಕ್ಲಾಸಿಕ್. ಅವರ ಮನವಿಗೂ ಓಗೊಡುತ್ತಿಲ್ಲವೆಂದರೆ ವಿಕ್ರಂ ಮೇಲಿನ ಅಸೂಯೆ ಇನ್ನೆಷ್ಟಿರಬಹುದು. ಇದನ್ನೆಲ್ಲ ಗಮನಿಸಿದರೆ ವಿಕ್ರಂ ಅನ್ನು ಮುಗಿಸುವ ವ್ಯವಸ್ಥಿತ ಪ್ರಯತ್ನದಂತೆ ಗೋಚರಿಸುತ್ತದೆ. ಮುಂದೇನಾಗುತ್ತದೆ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ