Shyam: ಜೂನಿಯರ್ ಎನ್ಟಿಆರ್ ಕಟ್ಟಾಭಿಮಾನಿ ಅನುಮಾನಾಸ್ಪದ ರೀತಿಯಲ್ಲಿ ಸಾವು
ಶ್ಯಾಮ್ ಅವರು ಜೂನಿಯರ್ ಎನ್ಟಿಆರ್ ಅವರನ್ನು ಆರಾಧಿಸುತ್ತಾ ಬೆಳೆದವರು. ಪೂರ್ವ ಗೋದಾವರಿ ಜಿಲ್ಲೆಯ ಕಾಲೇಜು ಒಂದರಲ್ಲಿ ಅವರು ಶಿಕ್ಷಣ ಪಡೆಯುತ್ತಿದ್ದರು.

ಜೂನಿಯರ್ ಎನ್ಟಿಆರ್ (Jr Ntr) ಅವರ ಕಟ್ಟಾಭಿಮಾನಿಯಾಗಿ ಗುರುತಿಸಿಕೊಂಡಿದ್ದ ಶ್ಯಾಮ್ (Shyam) ಅವರು ಸೋಮವಾರ (ಜೂನ್ 26) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅವರ ಸಾವಿನ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಕೆಲವರು ಇದನ್ನು ಆತ್ಮಹತ್ಯೆ ಎಂದು ಕರೆದಿದ್ದಾರೆ. ಈ ಸಾವಿನಲ್ಲಿ ಕುಟುಂಬದವರು ಹಾಗೂ ಆಪ್ತರು ಅನುಮಾನ ವ್ಯಕ್ತಪಡಿಸಿರುವುದರಿಂದ ಪೊಲೀಸ್ ತನಿಖೆ ನಡೆಯಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ.
ಶ್ಯಾಮ್ ಅವರು ಜೂನಿಯರ್ ಎನ್ಟಿಆರ್ ಅವರನ್ನು ಆರಾಧಿಸುತ್ತಾ ಬೆಳೆದವರು. ಪೂರ್ವ ಗೋದಾವರಿ ಜಿಲ್ಲೆಯ ಕಾಲೇಜು ಒಂದರಲ್ಲಿ ಅವರು ಶಿಕ್ಷಣ ಪಡೆಯುತ್ತಿದ್ದರು. ತಾವು ವಾಸವಾಗಿರುವ ಗ್ರಾಮದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ‘ಶ್ಯಾಮ್ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಅವನಿಗೆ ಅಂಥ ಮನಸ್ಥಿತಿ ಇರಲಿಲ್ಲ’ ಎಂದು ಕುಟುಂಬದವರು ಹೇಳಿದ್ದಾರೆ. ಈ ಕಾರಣಕ್ಕೆ ತನಿಖೆಯ ಆಗ್ರಹ ಜೋರಾಗಿದೆ.
ಕೇವಲ ಜೂನಿಯರ್ ಎನ್ಟಿಆರ್ ಅಭಿಮಾನಿಗಳು ಮಾತ್ರವಲ್ಲದೆ, ಜೂನಿಯರ್ ಎನ್ಟಿಆರ್, ಪವನ್ ಕಲ್ಯಾಣ್, ರಾಮ್ ಚರಣ್ ಹಾಗೂ ಇತರ ಸ್ಟಾರ್ಗಳ ಅಭಿಮಾನಿಗಳು ತನಿಖೆಗೆ ಆಗ್ರಹಿಸಿದ್ದಾರೆ. WeWantJusticeForShyamNTR ಎಂಬ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಟ್ವೀಟ್ಗಳನ್ನು ಮಾಡಲಾಗುತ್ತಿದೆ. ಈ ಸಾವಿನ ಹಿಂದೆ ಯಾವುದಾದರೂ ದ್ವೇಷ ಇದೆಯೇ ಎಂಬ ಅನುಮಾನ ಕೂಡ ಮೂಡಿದೆ.
ಜೂನಿಯರ್ ಎನ್ಟಿಆರ್ ಅವರನ್ನು ಶ್ಯಾಮ್ ತುಂಬಾನೇ ಗೌರವಿಸುತ್ತಿದ್ದರು. ಅನೇಕ ಕಾರ್ಯಕ್ರಮಗಳಲ್ಲಿ ಜೂನಿಯರ್ ಎನ್ಟಿಆರ್ ಅವರನ್ನು ಶ್ಯಾಮ್ ಭೇಟಿ ಮಾಡಿದ್ದರು. ವೇದಿಕೆ ಮೇಲೆ ಹಗ್ ಮಾಡಿಕೊಂಡು ಅವರು ಖುಷಿಪಟ್ಟಿದ್ದರು. ಈ ವಿಡಿಯೋಗಳನ್ನು ಫ್ಯಾನ್ಸ್ ಹಂಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ‘ವಾರ್ 2’ ಚಿತ್ರಕ್ಕಾಗಿ ಬಾಲಿವುಡ್ ಹೀರೋಗಳಿಗಿಂತಲೂ ಹೆಚ್ಚು ಸಂಭಾವನೆ ಪಡೆದ ಜೂನಿಯರ್ ಎನ್ಟಿಆರ್
ಜೂನಿಯರ್ ಎನ್ಟಿಆರ್ ಅವರು ಈ ವರೆಗೆ (ಜೂನ್ 27, ಮಧ್ಯಾಹ್ನ 2.30) ಯಾವುದೇ ಟ್ವೀಟ್ ಮಾಡಿಲ್ಲ. ಅವರು ಕೂಡ ಈ ಬಗ್ಗೆ ಧ್ವನಿ ಎತ್ತಬೇಕು ಎಂಬುದು ಅನೇಕರ ಕೋರಿಕೆ. ಈ ಪ್ರಕರಣ ಮುಂದೆ ಯಾವ ರೀತಿಯಲ್ಲಿ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:36 pm, Tue, 27 June 23




