ಈ ವಾರ ಎಲ್ಲೆಲ್ಲೂ ‘ವಾರ್ 2’, ‘ಕೂಲಿ’ ಅಬ್ಬರ: ಸಿನಿಪ್ರಿಯರಿಗೆ ಡಬಲ್ ಮನರಂಜನೆ
ಜೂನಿಯರ್ ಎನ್ಟಿಆರ್ ಮತ್ತು ಹೃತಿಕ್ ರೋಷನ್ ಅಭಿಮಾನಿಗಳು ‘ವಾರ್ 2’ ನೋಡಿ ಎಂಜಾಯ್ ಮಾಡಲಿದ್ದಾರೆ. ‘ಕೂಲಿ’ ಸಿನಿಮಾ ನೋಡಿ ರಜನಿಕಾಂತ್, ನಾಗಾರ್ಜುನ, ಆಮಿರ್ ಖಾನ್ ಫ್ಯಾನ್ಸ್ ಮನರಂಜನೆ ಪಡೆಯಲಿದ್ದಾರೆ. ಈ ಎರಡು ಹೈವೋಲ್ಟೇಜ್ ಸಿನಿಮಾಗಳು ಒಂದೇ ದಿನ ತೆರೆಕಾಣುತ್ತಿದ್ದು, ಪೈಪೋಟಿ ಜೋರಾಗಿದೆ.

ಸರ್ಕಾರಿ ರಜೆಯ ದಿನವೇ ಸಿನಿಮಾ ಬಿಡುಗಡೆ ಆದರೆ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತದೆ. ಈ ವರ್ಷ ಸ್ವಾತಂತ್ರ್ಯೋತ್ಸವ ದಿನಾಚರಣೆ (ಆಗಸ್ಟ್ 15) ಶುಕ್ರವಾರ ಒಂದಿದೆ. ಅದಕ್ಕೂ ಒಂದು ದಿನ ಮುನ್ನವೇ ಬಹುನಿರೀಕ್ಷಿತ ಸಿನಿಮಾಗಳನ್ನು ಬಿಡುಗಡೆ ಮಾಡಿದರೆ ಪ್ರೇಕ್ಷಕರನ್ನು ಸೆಳೆದುಕೊಳ್ಳಬಹುದು. ಅಲ್ಲದೇ, ಲಾಂಗ್ ವೀಕೆಂಡ್ನ ಲಾಭವನ್ನು ಪಡೆಯಬಹುದು ಎಂಬ ಲೆಕ್ಕಾಚಾರ ಇದೆ. ಹಾಗಾಗಿ ಆಗಸ್ಟ್ 14ರಂದು ‘ವಾರ್ 2’ (War 2) ಮತ್ತು ‘ಕೂಲಿ’ (Coolie) ಸಿನಿಮಾಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಹೃತಿಕ್ ರೋಷನ್, ಜೂನಿಯರ್ ಎನ್ಟಿಆರ್, ರಜನಿಕಾಂತ್ (Rajinikanth) ಅವರ ಅಭಿಮಾನಿಗಳಿಗೆ ಮನರಂಜನೆಯ ಹಬ್ಬ ಆಗಲಿದೆ.
‘ಕೂಲಿ’ ಸಿನಿಮಾದಲ್ಲಿ ರಜನಿಕಾಂತ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಪಾತ್ರವರ್ಗದಲ್ಲಿ ಆಮಿರ್ ಖಾನ್, ನಾಗಾರ್ಜುನ, ಉಪೇಂದ್ರ, ರಚಿತಾ ರಾಮ್, ಶ್ರುತಿ ಹಾಸನ್, ಸತ್ಯರಾಜ್ ಮುಂತಾದವರು ಅಭಿನಯಿಸಿದ್ದಾರೆ. ಹಾಗಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಸದ್ದು ಮಾಡಲು ಸಜ್ಜಾಗಿದೆ. ಸ್ಟಾರ್ ಡೈರೆಕ್ಟರ್ ಲೋಕೇಶ್ ಕನಗರಾಜ್ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ.
ಇನ್ನು, ‘ವಾರ್ 2’ ಸಿನಿಮಾದ ಹವಾ ಕೂಡ ಕಮ್ಮಿ ಏನಿಲ್ಲ. ‘ಕೂಲಿ’ ರೀತಿಯೇ ‘ವಾರ್ 2’ ಸಿನಿಮಾ ಕೂಡ ವಿಶ್ವಾದ್ಯಂತ ಬಿಡುಗಡೆ ಆಗುತ್ತಿದೆ. ಜೂನಿಯರ್ ಎನ್ಟಿಆರ್ ಮತ್ತು ಹೃತಿಕ್ ರೋಷನ್ ಅವರು ಈ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಕಿಯಾರಾ ಅಡ್ವಾಣಿ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ‘ಯಶ್ ರಾಜ್ ಫಿಲ್ಮ್ಸ್’ ನಿರ್ಮಾಣದ ಈ ಚಿತ್ರಕ್ಕೆ ಅಯಾನ್ ಮುಖರ್ಜಿ ಅವರ ನಿರ್ದೇಶನವಿದೆ.
ಜೂನಿಯರ್ ಎನ್ಟಿಆರ್ ಅವರ ಅಭಿಮಾನಿಗಳಿಗೆ ಈ ಸಿನಿಮಾ ತುಂಬಾ ಸ್ಪೆಷಲ್. ಯಾಕೆಂದರೆ, ಇದು ಅವರು ನಟಿಸಿರುವ ಮೊದಲ ಬಾಲಿವುಡ್ ಸಿನಿಮಾ. ಟ್ರೇಲರ್ನಲ್ಲಿ ಅವರು ಮಿಂಚಿದ್ದಾರೆ. ಇಬ್ಬರು ಹೀರೋಗಳು ಇರುವುದರಿಂದ ಹೋಲಿಕೆ ಸಹಜ. ಫೈಟ್ ಮತ್ತು ಡ್ಯಾನ್ ವಿಚಾರದಲ್ಲಿ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್ಟಿಆರ್ ಅವರು ಪರಸ್ಪರ ಪೈಪೋಟಿ ನೀಡುವವರಂತೆ ನಟಿಸಿದ್ದಾರೆ.
ಇದನ್ನೂ ಓದಿ: ಸಿಂಗಪುರದಲ್ಲೂ ರಜನೀ ಹವಾ, ‘ಕೂಲಿ’ ಸಿನಿಮಾ ನೋಡಲು ರಜೆ ಘೋಷಣೆ
ಅಡ್ವಾನ್ಸ್ ಟಿಕೆಟ್ ಬುಕಿಂಗ್ನಲ್ಲಿ ‘ವಾರ್ 2’ ಚಿತ್ರಕ್ಕಿಂತಲೂ ‘ಕೂಲಿ’ ಸಿನಿಮಾ ಮುಂದಿದೆ. ಮೊದಲ ದಿನ ಯಾವ ಸಿನಿಮಾಗೆ ಹೆಚ್ಚು ಕಲೆಕ್ಷನ್ ಆಗಲಿದೆ ಎಂಬುದನ್ನು ತಿಳಿಯುವ ಕೌತುಕ ಹೆಚ್ಚಿದೆ. ಕರ್ನಾಟಕದಲ್ಲಿ ‘ಸು ಫ್ರಮ್ ಸೋ’ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ‘ಕೂಲಿ’, ‘ವಾರ್ 2’ ಸಿನಿಮಾಗಳು ಅಬ್ಬರದಿಂದ ‘ಸು ಫ್ರಮ್ ಸೋ’ ಕಲೆಕ್ಷನ್ ಮೇಲೆ ಪರಿಣಾಮ ಬೀರಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








