‘ನೀನಿದ್ದರೆ’ ಆಲ್ಬಂ ಹಾಡಿನಿಂದ ಚಿಗುರಿದ ಸಿನಿಮಾ ಕನಸು; ಸುಮಧುರ ಹಾಡು ರಿಲೀಸ್
‘ಸಿರಿ ಮ್ಯೂಸಿಕ್’ ಮೂಲಕ ‘ನೀನಿದ್ದರೆ’ ಹಾಡು ಬಿಡುಗಡೆ ಆಗಿದೆ. ಹೊಸ ಕಲಾವಿದರು ಈ ಗೀತೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮಧುರ ಪ್ರೀತಿಯ ಮೆಲುಕಿನಂತೆ ಈ ಹಾಡು ಸಿದ್ಧವಾಗಿದೆ. ಇದನ್ನೇ ಒಂದು ಸಿನಿಮಾ ರೂಪದಲ್ಲಿ ಕಟ್ಟಿಕೊಡುವ ಪ್ಲ್ಯಾನ್ ಸಹ ಈ ತಂಡಕ್ಕೆ ಇದೆ. ಆ ಕುರಿತು ತಂಡ ಮಾಹಿತಿ ನೀಡಿದೆ.

ಸಿನಿಮಾ ಹಾಡುಗಳು ಮಾತ್ರವಲ್ಲದೇ ಆಲ್ಬಂ ಗೀತೆಗಳು (Kannada Album Songs) ಅಥವಾ ಮ್ಯೂಸಿಕ್ ವಿಡಿಯೋಗಳು ಕೂಡ ಪ್ರೇಕ್ಷಕರ ಗಮನ ಸೆಳೆಯುತ್ತವೆ. ಅಂಥ ಹಾಡುಗಳ ಸಾಲಿಗೆ ‘ನೀನಿದ್ದರೆ’ (Neeniddare) ಎಂಬ ಹೊಸ ಗೀತೆ ಸೇರ್ಪಡೆ ಆಗಿದೆ. ‘ಮೊಗಾಚಿ ಲಾರಂ ಕ್ರಿಯೇಶನ್’ ಮೂಲಕ ಈ ಸಾಂಗ್ ನಿರ್ಮಾಣ ಆಗಿದೆ. ಇದರ ಅವಧಿ 5.52 ನಿಮಿಷ ಇದೆ. ಸಿರಿ ಮ್ಯೂಸಿಕ್ ಮೂಲಕ ಈ ಆಲ್ಬಂ ಸಾಂಗ್ (Album Song) ಬಿಡುಗಡೆ ಆಗಿದೆ. ಹಾಡಿನಿಂದ ಶುರುವಾದ ಈ ಪಯಣವು ಸಿನಿಮಾ ಮಾಡುವ ಕನಸನ್ನು ಹುಟ್ಟುಹಾಕಿದೆ. ಈ ಬಗ್ಗೆ ತಂಡದವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಹಿರಿಯ ನಟ ರಮೇಶ್ ಭಟ್ ಅವರು ‘ನೀನಿದ್ದರೆ..’ ಹಾಡನ್ನು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ‘ನಿರ್ಮಾಪಕರು ನನ್ನನ್ನು ಫಾದರ್ ಅಂತ ಕರೆಯುತ್ತಾರೆ. ಆದರೆ ನನಗೆ ಅವರು ಗಾಡ್‌ಫಾದರ್. ಮಂಗಳೂರಿಗೆ ಶೂಟಿಂಗ್ ಅಂತ ಹೋದಾಗ, ತಪ್ಪದೇ ಭೇಟಿಯಾಗುತ್ತಾರೆ ಮತ್ತು ಉಡುಗೊರೆ ನೀಡುತ್ತಾರೆ. ಇಂತಹವರ ಋಣ ತೀರಿಸಲು ಬ್ಯುಸಿ ಇದ್ದರೂ ಬಂದಿರುವೆ’ ಎಂದು ಹೇಳಿದರು. ಈ ವೇಳೆ ಹಿರಿಯ ನಟ ಟೆನ್ನಿಸ್ ಕೃಷ್ಣ ಕೂಡ ಉಪಸ್ಥಿತರಿದ್ದರು.

Neeniddare Album Song Team
ಮಂಗಳೂರು ಮೂಲದವರಾದ, ಸದ್ಯ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ನೂರ್ ರ್ಬಟ್ ಅವರು ಈ ಹಾಡನ್ನು ನಿರ್ಮಾಣ ಮಾಡಿದ್ದಾರೆ. ವಿನ್ಸೆಂಟ್ ಫರ್ನಾಂಡಿಸ್ ಕಾಸ್ಸಿಯಾ ಅವರು ಇದಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ಲಕ್ಷೀಕಾಂತ್ ಅವರ ಛಾಯಾಗ್ರಹಣ, ರಾಜೇಶ್ ಚೌಹಾಣ್ ಅವರ ಸಂಕಲನ ಈ ಹಾಡಿಗೆ ಇದೆ. ಲೈನೆಲ್ ಡಿಮೆಲ್ಲೊ ಅವರು ಸಂಗೀತ ನೀಡಿದ್ದಾರೆ.
ಹಿಮಗಿರಿ ಎಸ್ಟೇಟ್ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಈ ಹಾಡು ಮೂಡಿಬಂದಿರುವ ರೀತಿ ಹಾಗೂ ಕೇಳುಗರಿಂದ ಸಿಕ್ಕಿರುವ ಪಾಸಿಟಿವ್ ಪ್ರತಿಕ್ರಿಯಿಂದ ಈ ತಂಡಕ್ಕೆ ಖುಷಿ ಆಗಿದೆ. ಗಾಯಕಿ ಶಿಲ್ಪಾ ಕುಟೀನ್ಹಾ ಅವರ ಕಂಠದಲ್ಲಿ ಈ ಹಾಡು ಮೂಡಿಬಂದಿದೆ. ಹಳೇ ಪ್ರೇಯಸಿ ಮತ್ತು ನಾಯಕಿ ಪಾತ್ರದಲ್ಲಿ ರಿಯಲ್ ಲೈಫ್ ತಾಯಿ-ಮಗಳು ನಟಿಸಿರುವುದು ವಿಶೇಷ.
ಇದನ್ನೂ ಓದಿ: ಯುರೋಪ್ನಲ್ಲಿ ಚಿತ್ರೀಕರಣಗೊಂಡ ‘ಹನಿ ಹನಿ’ ಆಲ್ಬಂ ಸಾಂಗ್ ಬಿಡುಗಡೆ ಮಾಡಿದ ಅಶ್ವಿನಿ
ನಾಯಕನಾಗಿ ಅವಿಲ್ ರೊಡ್ರಿಗಸ್ ಅವರು ನಟಿಸಿದ್ದಾರೆ. ನಾಯಕಿಯಾಗಿ ಕೆರನ್ ಪಿಂಟೋ ಹಾಗೂ ಹಳೇ ಪ್ರೇಯಸಿಯಾಗಿ ಸ್ಮಿತಾ ಪಿಂಟೋ ಅಭಿನಯಿಸಿದ್ದಾರೆ. ಮಧುರ ಪ್ರೀತಿಯ ಮೆಲುಕಿನಂತೆ ಈ ಹಾಡು ಸಿದ್ಧವಾಗಿದೆ. ಇದನ್ನೇ ಒಂದು ಸಿನಿಮಾ ರೂಪದಲ್ಲಿ ಕಟ್ಟಿಕೊಡುವ ಆಲೋಚನೆ ಕೂಡ ತಂಡಕ್ಕೆ ಬಂದಿದೆ. ಅದಕ್ಕೆ ನಿರ್ಮಾಪಕರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆಯಂತೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





