Allu Arjun: ‘ಪುಷ್ಪ 2’ ಚಿತ್ರಕ್ಕೆ ಈವರೆಗೆ ಆಗಿರೋದು 5 ದಿನದ ಶೂಟಿಂಗ್ ಮಾತ್ರ; ಅಭಿಮಾನಿಗಳಿಗೆ ನಿರಾಸೆ
Pushpa 2 | Sukumar: ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾಗೆ ಕೇವಲ 5 ದಿನಗಳ ಚಿತ್ರೀಕರಣ ಮಾತ್ರ ಮಾಡಲಾಗಿದೆ ಎಂದು ಸುಕುಮಾರ್ ಮಾಹಿತಿ ನೀಡಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳಿಗೆ ನಿರಾಸೆ ಆಗಿದೆ.

ನಟ ಅಲ್ಲು ಅರ್ಜುನ್ (Allu Arjun) ಅವರಿಗೆ ‘ಪುಷ್ಪ’ ಸಿನಿಮಾದಿಂದ ಸಿಕ್ಕ ಗೆಲುವು ಬಹುದೊಡ್ಡದು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರು ಮಿಂಚುವಂತಾಗಿದ್ದು ಈ ಚಿತ್ರದಿಂದ. ‘ಪುಷ್ಪ’ ಸಿನಿಮಾದ ಹಿಂದಿ ವರ್ಷನ್ ನೋಡಿ ಉತ್ತರ ಭಾರತದ ಪ್ರೇಕ್ಷಕರು ಫಿದಾ ಆಗಿದ್ದರು. 2021ರ ಡಿಸೆಂಬರ್ನಲ್ಲಿ ಈ ಸಿನಿಮಾ ತೆರೆಕಂಡು ಧೂಳೆಬ್ಬಿಸಿತ್ತು. ಅದಾಗಿ ಒಂದು ವರ್ಷ ಕಳೆದಿದ್ದರೂ ಕೂಡ ಅದರ ಸೀಕ್ವೆಲ್ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ. ‘ಪುಷ್ಪ 2’ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳಿಗೆ ನಿರ್ದೇಶಕ ಸುಕುಮಾರ್ (Sukumar) ಅವರು ಹೆಚ್ಚಿನ ಸಮಯ ತೆಗೆದುಕೊಂಡಿದ್ದಾರೆ. ಒಂದಿಲ್ಲೊಂದು ಕಾರಣಕ್ಕೆ ಈ ಸಿನಿಮಾದ ಕೆಲಸಗಳು ವಿಳಂಬ ಆಗುತ್ತಿವೆ. ಅಚ್ಚರಿ ಎಂದರೆ, ‘ಪುಷ್ಪ 2’ (Pushpa 2) ಚಿತ್ರಕ್ಕೆ ಈವರೆಗೂ ಆಗಿರೋದು 5 ದಿನದ ಶೂಟಿಂಗ್ ಮಾತ್ರ!
ಸುಕುಮಾರ್ ಅವರು ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ. ‘ಗೀತಾ ಆರ್ಟ್ಸ್’ ಬ್ಯಾನರ್ ಜೊತೆ ಅವರು ನಿರ್ಮಿಸಿರುವ ‘18 ಪೇಜಸ್’ ಸಿನಿಮಾ ಈ ವಾರ (ಡಿ.23) ಬಿಡುಗಡೆ ಆಗಲಿದೆ. ಈ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಇತ್ತೀಚೆಗೆ ನಡೆದಿದೆ. ಈ ಕಾರ್ಯಕ್ರಮಕ್ಕೆ ಸುಕುಮಾರ್ ಮತ್ತು ಅಲ್ಲು ಅರ್ಜುನ್ ಹಾಜರಿ ಹಾಕಿದ್ದರು. ಈ ವೇಳೆ ಅವರು ‘ಪುಷ್ಪ 2’ ಬಗ್ಗೆ ಅಪ್ಡೇಟ್ ನೀಡಿದ್ದಾರೆ.
ಇದನ್ನೂ ಓದಿ: Mythri Movie Makers: ‘ಪುಷ್ಪ 2’ ನಿರ್ಮಾಪಕರ ಮೇಲೆ ಐಟಿ ದಾಳಿ; ಸಂಕಷ್ಟದಲ್ಲಿ ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆ
ಈವರೆಗೂ ‘ಪುಷ್ಪ 2’ ಸಿನಿಮಾಗೆ ಕೇವಲ 5 ದಿನಗಳ ಚಿತ್ರೀಕರಣ ಮಾಡಲಾಗಿದೆ ಅಷ್ಟೇ ಎಂದು ಸುಕುಮಾರ್ ಮಾಹಿತಿ ನೀಡಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಆದಷ್ಟು ಬೇಗ ಈ ಚಿತ್ರದ ಶೂಟಿಂಗ್ ಮುಗಿಯಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಆದರೆ ಸುಕುಮಾರ್ ಅವರು ತುಂಬ ಕಾಳಜಿ ವಹಿಸಿ ಈ ಚಿತ್ರವನ್ನು ಕಟ್ಟಿಕೊಡುತ್ತಿರುವುದರಿಂದ ಸಹಜವಾಗಿಯೇ ಶೂಟಿಂಗ್ ವಿಳಂಬ ಆಗುತ್ತಿದೆ.
ಇದನ್ನೂ ಓದಿ: Pushpa 2: ‘ಪುಷ್ಪ 2’ ಚಿತ್ರಕ್ಕೆ ಭಯಾನಕ ವಿಲನ್ ಎಂಟ್ರಿ? ವಿದೇಶಿ ನಟನಿಗೆ ಮಣೆ ಹಾಕಿದ ನಿರ್ದೇಶಕ ಸುಕುಮಾರ್
‘ಪುಷ್ಪ 2’ ಚಿತ್ರದ ಕೆಲಸಗಳು ತಡವಾಗುತ್ತಿರುವ ಬಗ್ಗೆ ಅಲ್ಲು ಅರ್ಜುನ್ ಬೇಸರ ಮಾಡಿಕೊಂಡಿಲ್ಲ. ಸುಕುಮಾರ್ ಅವರ ಕಾರ್ಯವೈಖರಿ ಬಗ್ಗೆ ಅಲ್ಲು ಅರ್ಜುನ್ ಅವರಿಗೆ ಸಂಪೂರ್ಣ ಭರವಸೆ ಇದೆ. ಹಾಗಾಗಿ ಅವರ ಪ್ಲ್ಯಾನ್ ಪ್ರಕಾರವೇ ಎಲ್ಲವೂ ನಡೆಯುತ್ತಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್, ಫಹಾದ್ ಫಾಸಿಲ್ ಮುಂತಾದ ಖ್ಯಾತ ಕಲಾವಿದರು ನಟಿಸುತ್ತಿದ್ದಾರೆ.
ಮೊದಲ ಪಾರ್ಟ್ಗಿಂತಲೂ ‘ಪುಷ್ಟ 2’ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸುವ ಸವಾಲು ಚಿತ್ರತಂಡದ ಮುಂದಿದೆ. ಅದಕ್ಕಾಗಿ ಕಥೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ಕಾರಣದಿಂದ ಸಿನಿಮಾ ಕೆಲಸಗಳು ವಿಳಂಬ ಆಗುತ್ತಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:06 pm, Tue, 20 December 22