ಮಕಾಡೆ ಮಲಗಿದ ‘ಲಾಲ್ ಸಿಂಗ್ ಚಡ್ಡಾ’ಗೆ ಒಟಿಟಿಯಿಂದ ಬಂತು ಬಂಪರ್ ಆಫರ್; ಟ್ರೋಲಿಗರ ಬಾಯಿ ಮುಚ್ಚಿಸಿದ ಆಮಿರ್
ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ ಕಳಪೆ ಪ್ರದರ್ಶನ ನೀಡಿದೆ. ಆದರೆ, ಒಟಿಟಿಯಲ್ಲಿ ಚಿತ್ರಕ್ಕೆ ದೊಡ್ಡ ಬೇಡಿಕೆ ಬಂದಿದೆ. ಇದಕ್ಕೆ ಕಾರಣ ಆಗಿದ್ದು ವಿದೇಶಿ ಬಾಕ್ಸ್ ಆಫೀಸ್ ಕಲೆಕ್ಷನ್.
ಆಮಿರ್ ಖಾನ್ (Aamir Khan) ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿದೆ. ಆಮಿರ್ ಖಾನ್ ಸಿನಿಮಾಗಳು ಮೊದಲ ವೀಕೆಂಡ್ನಲ್ಲೇ 60 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ ಉದಾಹರಣೆ ಸಾಕಷ್ಟಿದೆ. ಆದರೆ, ‘ಲಾಲ್ ಸಿಂಗ್ ಚಡ್ಡಾ’ (Laal Singh Chaddha) ಚಿತ್ರದ ಭಾರತದ ಬಾಕ್ಸ್ ಆಫೀಸ್ ಕಲೆಕ್ಷನ್ 60 ಕೋಟಿ ರೂಪಾಯಿ ದಾಟಿಲ್ಲ ಅನ್ನೋದು ಆಮಿರ್ ಖಾನ್ ಫ್ಯಾನ್ಸ್ಗೆ ಬೇಸರ ಮೂಡಿಸಿದೆ. ಈ ಕಾರಣದಿಂದ ಸಿನಿಮಾ ಒಟಿಟಿಯಲ್ಲಿ ಕಡಿಮೆ ಬೆಲೆಗೆ ಮಾರಾಟ ಆಗಲಿದೆ ಎಂದೇ ಊಹಿಸಲಾಗಿತ್ತು. ಆದರೆ, ಒಂದು ಘಟನೆಯಿಂದ ಒಟಿಟಿ ಹಕ್ಕು ದೊಡ್ಡ ಮಟ್ಟದಲ್ಲಿ ಸೇಲ್ ಆಗಿದೆ.
ಆಮಿರ್ ಖಾನ್ ಅವರು ಅಸಹಿಷ್ಣುತೆಗೆ ಸಂಬಂಧಿಸಿದಂತೆ ನೀಡಿದ ಹೇಳಿಕೆಯನ್ನು ಜನರು ಈಗಲೂ ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ. ಇದೇ ಹೇಳಿಕೆಯನ್ನು ನೆನಪಿನಲ್ಲಿ ಇಟ್ಟುಕೊಂಡು ‘ಲಾಲ್ ಸಿಂಗ್ ಚಡ್ಡಾ’ ಚಿತ್ರವನ್ನು ಬೈಕಾಟ್ ಮಾಡುವಂತೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆರಂಭಿಸಲಾಗಿತ್ತು. ಇದು ಕೂಡ ಚಿತ್ರದ ಕಲೆಕ್ಷನ್ ಮೇಲೆ ಪ್ರಭಾವ ಬೀರಿದೆ. ಈ ಎಲ್ಲಾ ಕಾರಣದಿಂದ ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ ಕಳಪೆ ಪ್ರದರ್ಶನ ನೀಡಿದೆ. ಆದರೆ, ಒಟಿಟಿಯಲ್ಲಿ ಚಿತ್ರಕ್ಕೆ ದೊಡ್ಡ ಬೇಡಿಕೆ ಬಂದಿದೆ. ಇದಕ್ಕೆ ಕಾರಣ ಆಗಿದ್ದು ವಿದೇಶಿ ಬಾಕ್ಸ್ ಆಫೀಸ್ ಕಲೆಕ್ಷನ್.
‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ವಿದೇಶಿ ಬಾಕ್ಸ್ ಆಫೀಸ್ನಲ್ಲಿ 59 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ವಿದೇಶದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಹಾಗೂ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರ ಕೂಡ ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿಲ್ಲ. ಇದು ಚಿತ್ರಕ್ಕೆ ವರದಾನವಾಗಿದೆ. ‘ಲಾಲ್ ಸಿಂಗ್ ಚಡ್ಡಾ’ ಹಾಲಿವುಡ್ನ ‘ಫಾರೆಸ್ಟ್ ಗಂಪ್’ ಚಿತ್ರದ ರಿಮೇಕ್. ಈ ಕಾರಣದಿಂದಲೂ ವಿದೇಶದಲ್ಲಿ ಸಿನಿಮಾವನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Laal Singh Chaddha: ಬಾಯ್ಕಾಟ್ ನಡುವೆಯೂ 100 ಕೋಟಿ ಕಲೆಕ್ಷನ್ ಮಾಡಿದ ಲಾಲ್ ಸಿಂಗ್ ಚಡ್ಡಾ..!
‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ಒಟಿಟಿ ಹಕ್ಕು 125 ಕೋಟಿ ರೂಪಾಯಿಗೆ ಮಾರಾಟವಾಗಿದೆ ಎನ್ನಲಾಗುತ್ತಿದೆ. ಈ ಮೊದಲು ಆರು ತಿಂಗಳ ಬಳಿಕ ಚಿತ್ರವನ್ನು ಒಟಿಟಿಗೆ ತರುವ ಆಲೋಚನೆ ಚಿತ್ರತಂಡಕ್ಕೆ ಇತ್ತು. ಆದರೆ, ಈಗ ಇದನ್ನು ಎರಡು ತಿಂಗಳಿಗೆ ಇಳಿಕೆ ಮಾಡಲಾಗಿದೆ. ಈ ಎಲ್ಲ ಕಾರಣದಿಂದ ಆಮಿರ್ ಖಾನ್ ಅವರು ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ.