
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಇತ್ತೀಚಿನ ವರ್ಷಗಳಲ್ಲಿ ಸೋಲಿಲ್ಲದ ಕುದುರೆಯಂತೆ ಓಡುತ್ತಿದ್ದರು. ಅವರ ಗೆಲುವಿನ ಓಟಕ್ಕೆ ಸಣ್ಣ ಬ್ರೇಕ್ ಬಿದ್ದಿದ್ದು ‘ಸಿಕಂದರ್’ ಸಿನಿಮಾದಿಂದ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ (Salman Khan) ಮತ್ತು ರಶ್ಮಿಕಾ ಮಂದಣ್ಣ ಅವರು ಜೋಡಿಯಾಗಿ ನಟಿಸಿದರು. ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಮಾಡಬಹುದು ಎಂದು ಫ್ಯಾನ್ಸ್ ನಿರೀಕ್ಷಿಸಿದ್ದರು. ಆದರೆ ಆ ನಿರೀಕ್ಷೆ ಸುಳ್ಳಾಯಿತು. ‘ಸಿಕಂದರ್’ ಸಿನಿಮಾ ಸೋತಿತು. ಮೊದಲ ದಿನವೇ ನೆಗೆಟಿವ್ ವಿಮರ್ಶೆ ಸಿಕ್ಕಿದ್ದರಿಂದ ಹೆಚ್ಚಿನ ಜನರು ಚಿತ್ರಮಂದಿರಕ್ಕೆ ಬರಲಿಲ್ಲ. ಈ ಫ್ಲಾಪ್ ಸಿನಿಮಾ ಈಗ ಒಟಿಟಿಗೆ ಬಂದಿದೆ. ಹೌದು, ನೆಟ್ಫ್ಲಿಕ್ಸ್ನಲ್ಲಿ (Netflix) ‘ಸಿಕಂದರ್’ ಪ್ರಸಾರ ಆಗುತ್ತಿದೆ.
‘ಸಿಕಂದರ್’ ಒಂದು ಫ್ಲಾಪ್ ಸಿನಿಮಾ ಆಗಿದ್ದರೂ ಕೂಡ ಅದನ್ನು ನೆಟ್ಫ್ಲಿಕ್ಸ್ ಖರೀದಿಸಿದೆ. ಯಾಕೆಂದರೆ, ಸಲ್ಮಾನ್ ಖಾನ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರೆಲ್ಲ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡದಿದ್ದರೂ ಕೂಡ ಒಟಿಟಿಯಲ್ಲಿ ಖಂಡಿತಾ ಒಂದು ಬಾರಿ ಸಿನಿಮಾ ನೋಡುತ್ತಾರೆ ಎಂಬ ನಂಬಿಕೆ ಇದೆ. ಹಾಗಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆ.
ಮೇ 25ರಿಂದ ನೆಟ್ಫ್ಲಿಕ್ಸ್ ಮೂಲಕ ‘ಸಿಕಂದರ್’ ಸಿನಿಮಾ ಪ್ರಸಾರ ಆಗುತ್ತಿದೆ. ಈ ಸಿನಿಮಾದಲ್ಲಿನ ಅನೇಕ ದೃಶ್ಯಗಳನ್ನು ಈಗಾಗಲೇ ಜನರು ಟ್ರೋಲ್ ಮಾಡಿದ್ದರು. ಈಗ ಒಟಿಟಿಯಲ್ಲಿ ಹೆಚ್ಚಿನ ಜನರಿಗೆ ಸಿನಿಮಾ ತಲುತ್ತಿದೆ. ಹಾಗಾಗಿ ಟ್ರೋಲ್ ಇನ್ನಷ್ಟು ಜಾಸ್ತಿ ಆಗುವ ಸಾಧ್ಯತೆ ಇದೆ. ಈ ಸಿನಿಮಾದಲ್ಲಿ ಸತ್ಯರಾಜ್, ಕಾಜಲ್ ಅಗರ್ವಾಲ್, ಶರ್ಮನ್ ಜೋಶಿ ಮುಂತಾದವರು ಕೂಡ ನಟಿಸಿದ್ದಾರೆ.
ಎ.ಆರ್. ಮುರುಗದಾಸ್ ಅವರು ‘ಸಿಕಂದರ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಒಂದು ಕಾಲದಲ್ಲಿ ‘ಘಜಿನಿ’ ರೀತಿಯ ಸೂಪರ್ ಹಿಟ್ ಸಿನಿಮಾ ನೀಡಿದ್ದ ಅವರು ಈಗ ಮ್ಯಾಜಿಕ್ ಮಾಡಲು ಸೋತಿದ್ದಾರೆ. ‘ಸಿಕಂದರ್’ ಸಿನಿಮಾದ ಸೋಲಿನ ಹೊಣೆಯನ್ನು ಮುರುಗದಾಸ್ ಅವರಿಗೆ ಕಟ್ಟಲಾಗಿದೆ. ಸಲ್ಮಾನ್ ಖಾನ್ ಅವರಂತಹ ಸ್ಟಾರ್ ನಟನ ಸಿನಿಮಾವನ್ನು ಮುರುಗದಾಸ್ ಅವರು ಸರಿಯಾಗಿ ಹ್ಯಾಂಡಲ್ ಮಾಡಿಲ್ಲ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಭಾರತದ ಒಟಿಟಿಯಲ್ಲಿ ಪಾಕ್ ಸಿನಿಮಾ, ಧಾರಾವಾಹಿ, ಸಂಗೀತ ಬ್ಯಾನ್; ಕೇಂದ್ರದ ಆದೇಶ
ಅದ್ದೂರಿ ಬಜೆಟ್ನಲ್ಲಿ ‘ಸಿಕಂದರ್’ ಚಿತ್ರ ನಿರ್ಮಾಣ ಆಗಿತ್ತು. ಆದರೆ ಭಾರತದ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಗಳಿಸಿದ್ದು ಕೇವಲ 103 ಕೋಟಿ ರೂಪಾಯಿ. ಬೇರೆ ನಟರ ಚಿತ್ರಕ್ಕೆ 100 ಕೋಟಿ ರೂಪಾಯಿ ಎಂದರೆ ದೊಡ್ಡ ಮೊತ್ತ ಆಗಿರಬಹುದು. ಆದರೆ ಸಲ್ಮಾನ್ ಖಾನ್ ಅವರ ಸಿನಿಮಾಗೆ ಇದು ತುಂಬ ಸಾಧಾರಣ ಕಲೆಕ್ಷನ್. ಹಾಗಾಗಿ ಇದನ್ನು ಫ್ಲಾಪ್ ಎಂದು ಪರಿಗಣಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.