Prabhas: ‘ಮಾತು ಕಡಿಮೆ ಆಡ್ತೀನಿ, ವರ್ಷಕ್ಕೆ ಮೂರು ಸಿನಿಮಾ ಮಾಡ್ತೀನಿ’; ಅಭಿಮಾನಿಗಳಿಗೆ ಪ್ರಭಾಸ್ ಭರವಸೆ
‘ಆದಿಪುರುಷ್’ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್ ಇವೆಂಟ್ ತಿರುಪತಿಯಲ್ಲಿ ನಡೆದಿದೆ. ವೇದಿಕೆ ಏರಿದ ಪ್ರಭಾಸ್ ಅವರು ತಮ್ಮ ಮುಂದಿನ ಸಿನಿಮಾ ಪ್ಲ್ಯಾನ್ ಕುರಿತು ಮಾತನಾಡಿದ್ದಾರೆ.

ನಟ ಪ್ರಭಾಸ್ (Prabhas) ಅವರು ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ‘ಬಾಹುಬಲಿ’, ‘ಬಾಹುಬಲಿ 2’ ಚಿತ್ರದಿಂದ ಅವರ ಜನಪ್ರಿಯತೆ ಹೆಚ್ಚಾಯಿತು. ಆದರೆ, ಈ ಯಶಸ್ಸನ್ನು ಕಾಯ್ದುಕೊಂಡು ಹೊಗಲು ಅವರ ಬಳಿ ಸಾಧ್ಯವಾಗಿಲ್ಲ. ಹೀಗಾಗಿ, ‘ಆದಿಪುರುಷ್’ ಚಿತ್ರದ (Adipurush Movie) ಮೂಲಕ ಗೆಲ್ಲಬೇಕಾದ ಅನಿವಾರ್ಯತೆ ಇದೆ. ‘ಬಾಹುಬಲಿ’ ಬಳಿಕ ನಿಧಾನ ಗತಿಯಲ್ಲಿ ಸಿನಿಮಾ ಮಾಡಿದ್ದ ಪ್ರಭಾಸ್ ಅವರು ಈಗ ವೇಗ ಹೆಚ್ಚಿಸಿಕೊಂಡಿದ್ದಾರೆ. ಒಟ್ಟೊಟ್ಟಿಗೆ ಹಲವು ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಈಗ ಪ್ರಭಾಸ್ ಅವರು ಅಭಿಮಾನಿಗಳಿಗೆ ಹೊಸ ಭರವಸೆ ನೀಡಿದ್ದಾರೆ. ಇನ್ನುಮುಂದೆ ವರ್ಷಕ್ಕೆ ಅವರ ನಟನೆಯ ಎರಡು ಅಥವಾ ಮೂರು ಸಿನಿಮಾಗಳು ರಿಲೀಸ್ ಆಗಲಿವೆ.
‘ಆದಿಪುರುಷ್’ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್ ಇವೆಂಟ್ ತಿರುಪತಿಯಲ್ಲಿ ಮಂಗಳವಾರ (ಜೂನ್ 7) ನಡೆದಿದೆ. ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಮಂದಿ ಹಾಜರಿ ಹಾಕಿದ್ದರು. ವೇದಿಕೆ ಏರಿದ ಪ್ರಭಾಸ್ ಅವರು ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದರು. ಈ ವೇಳೆ ಅವರು ತಮ್ಮ ಮುಂದಿನ ಸಿನಿಮಾ ಪ್ಲ್ಯಾನ್ ಕುರಿತೂ ಮಾತನಾಡಿದ್ದಾರೆ.
2013ರಲ್ಲಿ ಅವರ ನಟನೆಯ ‘ಮಿರ್ಚಿ’ ಚಿತ್ರ ತೆರೆಗೆ ಬಂತು. ನಂತರದ 10 ವರ್ಷಗಳಲ್ಲಿ ಅವರ ನಟನೆಯ ನಾಲ್ಕು ಸಿನಿಮಾಗಳು ರಿಲೀಸ್ ಆದವು. ಇದರ ಸರಾಸರಿ ತೆಗೆದರೆ ಎರಡೂವರೆ ವರ್ಷಕ್ಕೆ ಅವರ ಒಂದು ಸಿನಿಮಾ ರಿಲೀಸ್ ಆಗಿದೆ. ಆದರೆ, ಇನ್ನುಮುಂದೆ ಈ ರೀತಿ ಇರಲ್ಲ. ಈ ವಿಚಾರವನ್ನು ಅವರು ಹೇಳಿಕೊಂಡಿದ್ದಾರೆ.
‘ಡಾರ್ಲಿಂಗ್ಸ್ ದಯವಿಟ್ಟು ವೇದಿಕೆ ಮೇಲೆ ಹೆಚ್ಚು ಮಾತನಾಡಲು ಒತ್ತಾಯಿಸಬೇಡಿ. ಇಂದು, ನಾನು ಸಾಮಾನ್ಯಕ್ಕಿಂತ ಹೆಚ್ಚೇ ಮಾತನಾಡಿದ್ದೇನೆ. ನಾನು ಇನ್ನುಮುಂದೆ ಕಡಿಮೆ ಮಾತನಾಡುತ್ತೇನೆ, ಹೆಚ್ಚು ಕೆಲಸ ಮಾಡುತ್ತೇನೆ ಎಂಬ ಭರವಸೆ ನೀಡುತ್ತೇನೆ. ವರ್ಷಕ್ಕೆ ಎರಡು ಚಿತ್ರಗಳನ್ನು ತಪ್ಪದೆ ಮಾಡುತ್ತೇನೆ. ಸಾಧ್ಯವಾದರೆ ಮೂರನೇ ಚಿತ್ರವನ್ನೂ ಮಾಡುತ್ತೇನೆ’ ಎಂದು ಪ್ರಭಾಸ್ ಹೇಳಿದ್ದಾರೆ.
ಇದನ್ನೂ ಓದಿ: ಆದಿಪುರುಷ್ ಪ್ರೀ ರಿಲೀಸ್ ವೇದಿಕೆಗೆ ಬಾಹುಬಲಿಯಂತೆ ಎಂಟ್ರಿ ಕೊಟ್ಟ ಪ್ರಭಾಸ್
ಈ ವಿಚಾರ ಕೇಳಿ ಪ್ರಭಾಸ್ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಪ್ರಭಾಸ್ ಇದನ್ನು ಗಂಭೀರವಾಗಿಯೇ ಹೇಳುತ್ತಿದ್ದಾರೆ ಎಂಬುದು ಅಭಿಮಾನಿಗಳಿಗೂ ಅರ್ಥವಾಗಿದೆ. ಇದಕ್ಕೆ ಕಾರಣ ಅವರ ಸಿನಿಮಾ ಲೈನಪ್. ಜೂನ್ 16ರಂದು ‘ಆದಿಪುರುಷ್’ ರಿಲೀಸ್ ಆಗಲಿದೆ. ಸೆಪ್ಟೆಂಬರ್ನಲ್ಲಿ ‘ಸಲಾರ್’ ಸಿನಿಮಾ ತೆರೆಗೆ ಬರಲಿದೆ. 2024ರ ಆರಂಭದಲ್ಲೇ ‘ಪ್ರಾಜೆಕ್ಟ್ ಕೆ’ ರಿಲೀಸ್ ಆಗಲಿದೆ. ಆ ಬಳಿಕ ‘ರಾಜ ಡೆಲಕ್ಸ್’ ರಿಲೀಸ್ ಆಗಲಿದೆ. ಈ ಮಧ್ಯೆ ಅವರು ಹೊಸ ಸಿನಿಮಾ ಘೋಷಣೆ ಮಾಡೋ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:37 am, Wed, 7 June 23




