ಗಂಭೀರ ಸ್ವರೂಪ ಪಡೆದುಕೊಂಡ ಬ್ಲಾಕ್ಮೇಲ್ ಪ್ರಕರಣ; ಭಯಗೊಂಡ ನಿರ್ದೇಶಕ ಪುರಿ ಜಗನ್ನಾಥ್
ಕೆಲ ಹಂಚಿಕೆದಾರರು ನಷ್ಟ ಉಂಟಾಗಿದೆ ಎಂದು ಆರೋಪ ಮಾಡಿದ್ದರು. ಅವರೆಲ್ಲರಿಗೂ ಪುರಿ ನಷ್ಟ ತುಂಬಿಕೊಟ್ಟಿದ್ದರು. ಇಷ್ಟಾದರೂ ಸುಮ್ಮನಾಗದ ಹಂಚಿಕೆದಾರರು ಪುರಿ ಜಗನ್ನಾಥ್ ಅವರನ್ನು ಬ್ಲಾಕ್ಮೇಲ್ ಮಾಡಿದ್ದರು.
‘ಲೈಗರ್’ ಸಿನಿಮಾ (Liger Movie) ಸೋಲಿನಿಂದ ನಿರ್ದೇಶಕ ಪುರಿ ಜಗನ್ನಾಥ್ (Puri Jagannadh) ಅವರು ಇನ್ನೂ ಚೇತರಿಸಿಕೊಂಡಿಲ್ಲ. ಅವರಿಗೆ ಇದರಿಂದ ಸಾಕಷ್ಟು ತೊಂದರೆಗಳು ಆಗುತ್ತಿವೆ. ಬಾಲಿವುಡ್ನಲ್ಲಿ ಅವರ ಫೇಮ್ ಕಡಿಮೆ ಆಗಿದ್ದು ಒಂದು ಕಡೆಯಾದರೆ ಮತ್ತೊಂದು ಕಡೆ ಅವರು ಬ್ಲಾಕ್ಮೇಲ್ ಎದುರಿಸುತ್ತಿದ್ದಾರೆ. ಹಣದ ವಿಚಾರದಲ್ಲಿ ಹಂಚಿಕೆದಾರರು ಪುರಿ ಜಗನ್ನಾಥ್ ಅವರನ್ನು ಬೆದರಿಸುತ್ತಿದ್ದಾರೆ. ಇದರಿಂದ ‘ಲೈಗರ್’ ನಿರ್ದೇಶಕ ಭಯಗೊಂಡಿದ್ದಾರೆ. ಈಗ ಅವರು ಕೆಲವರ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಇದರಿಂದ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಏನಿದು ಪ್ರಕರಣ?
ಪುರಿ ಜಗನ್ನಾಥ್ ಅವರು ಲೈಗರ್ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕೆ ಅವರು ನಿರ್ಮಾಪಕ ಕೂಡ ಹೌದು. ಈ ಸಿನಿಮಾದಿಂದ ಅನೇಕರು ನಷ್ಟ ಅನುಭವಿಸಿದ್ದಾರೆ. ಕೆಲ ಹಂಚಿಕೆದಾರರು ನಷ್ಟ ಉಂಟಾಗಿದೆ ಎಂದು ಆರೋಪ ಮಾಡಿದ್ದರು. ಅವರೆಲ್ಲರಿಗೂ ಪುರಿ ನಷ್ಟ ತುಂಬಿಕೊಟ್ಟಿದ್ದರು. ಇಷ್ಟಾದರೂ ಸುಮ್ಮನಾಗದ ಹಂಚಿಕೆದಾರರು ಪುರಿ ಜಗನ್ನಾಥ್ ಅವರನ್ನು ಬ್ಲಾಕ್ಮೇಲ್ ಮಾಡಿದ್ದರು. ಈ ಸಂಬಂಧ ಆಡಿಯೋ ರೆಕಾರ್ಡ್ ಒಂದು ಲೀಕ್ ಆಗಿತ್ತು. ಈಗ ಪುರಿ ಅವರು ಈ ಪ್ರಕರಣದಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ವಾರಂಗಲ್ ಶ್ರೀನು ವಿರುದ್ಧ ಪುರಿ ಜಗನ್ನಾಥ್ ಅವರು ದೂರು ದಾಖಲು ಮಾಡಿದ್ದಾರೆ. ಹೈದರಾಬಾದ್ನಲ್ಲಿರುವ ತಮ್ಮ ಕುಟುಂಬಕ್ಕೆ ರಕ್ಷಣೆ ನೀಡಿ ಎಂದು ಅವರು ಕೋರಿದ್ದಾರೆ. ಇದಲ್ಲದೆ, ಫೈನಾನ್ಸರ್ ಜಿ. ಶೋಭನ್ ಬಾಬು ವಿರುದ್ಧವೂ ನಿರ್ದೇಶಕ ದೂರು ಕೊಟ್ಟಿದ್ದಾರೆ. ಅವರು ತಮ್ಮ ವಿರುದ್ಧ ಹಿಂಸೆ ಮಾಡಲು ಪ್ರೇರೇಪಿಸಿದ್ದಾರೆ ಎಂಬ ಆರೋಪವನ್ನು ಮಾಡಿದ್ದಾರೆ.
ಆಡಿಯೋ ರೆಕಾರ್ಡ್ನಲ್ಲಿ ಏನಿತ್ತು?
‘ಪ್ರಾಮಾಣಿಕತೆ ಇಲ್ಲದ ವಿತರಕರ ಜೊತೆ ವ್ಯವಹಾರ ಮಾಡಿ ನನಗೆ ಸಾಕಾಗಿದೆ. ಇವರೆಲ್ಲ ಬಾಕ್ಸ್ ಆಫೀಸ್ ಲೆಕ್ಕಾಚಾರದಲ್ಲಿ ಮೋಸ ಮಾಡ್ತಾರೆ. ಲೈಗರ್ ಚಿತ್ರವನ್ನು ಉತ್ತರ ಭಾರತದಲ್ಲಿ ವಿತರಣೆ ಮಾಡಿದ ಅನಿಲ್ ಥಡಾನಿ ಅವರು ನಮಗೆ ಸರಿಯಾದ ಲೆಕ್ಕ ನೀಡ್ತಾರೆ. ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಅದು ಹೆಚ್ಚಾಗಿತ್ತು. ಅದಕ್ಕಾಗಿಯೇ ನಾನು ಅವರ ಜೊತೆ ಕುಳಿತು ಮಾತನಾಡಲು ಇಷ್ಟಪಡುತ್ತೇನೆ. ಆದರೆ ಇಲ್ಲಿನ ನಮ್ಮ ವಿತರಕರನ್ನು ನೋಡಿದರೆ ನನಗೆ ಅಸಹ್ಯ ಆಗುತ್ತದೆ’ ಎಂದು ಪುರಿ ಜಗನ್ನಾಥ್ ಅವರು ಆಡಿಯೋದಲ್ಲಿ ಹೇಳಿದ್ದರು.