ಪುರಿ ಜಗನ್ನಾಥ್-ವಿಜಯ್ ಸೇತುಪತಿ ಸಿನಿಮಾ ಶುರು, ದುನಿಯಾ ವಿಜಿ ಎಂಟ್ರಿ ಯಾವಾಗ?
Vijay Sethupathi-Duniya Vijay: ಒಂದು ಕಾಲದ ಸ್ಟಾರ್ ನಿರ್ದೇಶಕ ಪುರಿ ಜಗನ್ನಾಥ್ ಅವರ ಅದೃಷ್ಟ ಕಳೆದ ಕೆಲ ವರ್ಷಗಳಿಂದಲೂ ಕೈಕೊಟ್ಟಿದೆ. ಅವರೇ ನಿರ್ಮಿಸಿ, ನಿರ್ದೇಶನ ಮಾಡಿದ್ದ ಎರಡು ದೊಡ್ಡ ಸಿನಿಮಾಗಳು ಪ್ಲಾಪ್ ಆಗಿವೆ. ಇದೀಗ ಮತ್ತೊಂದು ಸಾಹಸಕ್ಕೆ ಪುರಿ ಕೈ ಹಾಕಿದ್ದು, ವಿಜಯ್ ಸೇತುಪತಿ ಸಿನಿಮಾದ ನಾಯಕ. ಕನ್ನಡದ ದುನಿಯಾ ವಿಜಯ್ ಸಹ ನಟಿಸುತ್ತಿದ್ದಾರೆ.

ಪುರಿ ಜಗನ್ನಾಥ್, ತೆಲುಗು ಚಿತ್ರರಂಗದ (Tollywood) ಟಾಪ್ ನಟರಾಗಿದ್ದರು. ಅವರಷ್ಟು ಸರಣಿ ಹಿಟ್ ಸಿನಿಮಾಗಳನ್ನು ನಿರ್ದೇಶಕ ತೆಲುಗಿನಲ್ಲಿ ಮತ್ತೊಬ್ಬರಿಲ್ಲ. ರಾಜಮೌಳಿಗಿಂತಲೂ ಪ್ರತಿಭಾವಂತ ನಿರ್ದೇಶಕ ಪುರಿ ಎನ್ನಲಾಗುತ್ತದೆ. ರಾಜಮೌಳಿಯ ತಂದೆಯವರೇ ಈ ಮಾತು ಹೇಳಿದ್ದಾರೆ. ಆದರೆ ಕಳೆದ ಕೆಲ ವರ್ಷಗಳಿಂದ ಪುರಿ ಜಗನ್ನಾಥ್ ಅದೃಷ್ಟವೇ ಸರಿ ಇಲ್ಲ. ನಿರ್ದೇಶಿಸಿದ ಸಿನಿಮಾಗಳೆಲ್ಲ ಸೋಲು ಕಾಣುತ್ತಿವೆ. ಒಂದು ಹಿಟ್ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ. ಇದೀಗ ಪುರಿ ಜಗನ್ನಾಥ್ ಹೊಸ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದು, ನಿರ್ಮಾಣವೂ ಅವರದ್ದೆ.
ಪುರಿ ಜಗನ್ನಾಥ್ ಅವರ ತಮ್ಮ ಹೊಸ ಸಿನಿಮಾಕ್ಕೆ ವಿಜಯ್ ಸೇತುಪತಿ ಅವರನ್ನು ನಾಯಕನನ್ನಾಗಿ ಹಾಕಿಕೊಂಡಿದ್ದಾರೆ. ವಿಜಯ್ ಸೇತುಪತಿ ಮಾತ್ರವೇ ಅಲ್ಲದೆ ಹಲವು ಪ್ರತಿಭಾವಂತ ಕಲಾವಿದರು ಈ ಸಿನಿಮಾನಲ್ಲಿ ನಟಿಸಲಿದ್ದು, ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೆ ಹೈದ್ರಾಬಾದ್‌ನಲ್ಲಿ ನಡೆದಿದ್ದು, ಹೈದರಾಬಾದ್ನಲ್ಲಿಯೇ ಸಿನಿಮಾದ ಚಿತ್ರೀಕರಣ ಶುರುವಾಗಿದೆ.
ಪುರಿ ಜಗನ್ನಾಥ್ ಅವರು ತಮ್ಮದೇ ಪುರಿ ಕನೆಕ್ಟ್ಸ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಜೆಬಿ ನಾರಾಯಣ್ ರಾವ್ ಕೊಂಡ್ರೊಲ್ಲಾ ಅವರ ಜೆಬಿ ಮೋಷನ್ ಪಿಕ್ಚರ್ಸ್ ಬ್ಯಾನರ್ ಸಹಯೋಗದಲ್ಲಿ ಚಾರ್ಮಿ ಕೌರ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟಿ ಸಂಯುಕ್ತ ಮೆನನ್, ಟಬು, ದುನಿಯಾ ವಿಜಯ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಪ್ಯಾನ್-ಇಂಡಿಯಾ ಯೋಜನೆಯು ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ:ವಿಜಯ್ ಸೇತುಪತಿ ಮಗನ ವರ್ತನೆಗೆ ಫ್ಯಾನ್ಸ್ ಅಸಮಾಧಾನ; ಕ್ಷಮೆ ಕೇಳಿದ ಸ್ಟಾರ್ ನಟ
ಪ್ರಸ್ತುತ ವಿಜಯ್ ಸೇತುಪತಿ, ಸಂಯುಕ್ತಾ ಮೆನನ್ ಇನ್ನು ಕೆಲವರಷ್ಟೆ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದ್ದಾರೆ. ದುನಿಯಾ ವಿಜಯ್, ಟಬು ಇನ್ನಿತರೆ ಕೆಲವು ನಟರು ತುಸು ತಡವಾಗಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಿನಿಮಾವನ್ನು ಗೆಲ್ಲಿಸಲೇ ಬೇಕು ಎಂಬ ಉಮೇದಿನಲ್ಲಿದ್ದಾರೆ ನಿರ್ದೇಶಕ ಪುರಿ ಜಗನ್ನಾಥ್.
25 ವರ್ಷಗಳಿಂದಲೂ ಸಿನಿಮಾ ನಿರ್ದೇಶನ ಮಾಡುತ್ತಿರುವ ಪುರಿ ಜಗನ್ನಾಥ್, ಪುನೀತ್ ನಟನೆಯ ‘ಅಪ್ಪು’, ಶಿವಣ್ಣ ನಟನೆಯ ‘ಯುವರಾಜ’ ತೆಲುಗಿನಲ್ಲಿ ‘ಬದ್ರಿ’, ‘ಶಿವಮಣಿ’, ‘ಅಮ್ಮ ನಾನ್ನ ಓ ತಮಿಳ್ ಅಮ್ಮಾಯಿ’, ‘ಸೂಪರ್’, ‘ಪೋಕಿರಿ’, ‘ದೇಸಮುದುರು’, ‘ಬುಜ್ಜಿಗಾಡು’, ಅಮಿತಾಬ್ ಬಚ್ಚನ್ ನಟನೆಯ ‘ಬುಡ್ಡಾ ಹೋಗ ತೇರ ಬಾಪ್’, ‘ಟೆಂಪರ್’ ಇನ್ನೂ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಆದರೆ 2022 ರಲ್ಲಿ ಬಿಡುಗಡೆ ಆದ ‘ಲೈಗರ್’ ಸಿನಿಮಾ ಅಟ್ಟರ್ ಫ್ಲಾಪ್ ಆಯ್ತು. ಅದಾದ ಬಳಿಕ ಬಂದ ‘ಡಬಲ್ ಇಸ್ಮಾರ್ಟ್’ ಸಿನಿಮಾ ಸಹ ಗೆಲ್ಲಲಿಲ್ಲ. ಈಗ ವಿಜಯ್ ಸೇತುಪತಿ ಜೊತೆಗೆ ಹೊಸ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




