
ರಜನೀಕಾಂತ್ ನಟನೆಯ ‘ಜೈಲರ್ 2’ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ತಮಿಳು ಸೇರಿದಂತೆ ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಅಕ್ಟೋಬರ್ 15ರಂದು ಸಿನಿಮಾ ರಿಲೀಸ್ ಆಗುತ್ತಿದ್ದು, ಈಗಾಗಲೇ ಸಿನಿಮಾದ ಮುಂಗಡ ಬುಕಿಂಗ್ ಓಪನ್ ಆಗಿದೆ. ಸಿನಿಮಾ ರಿಲೀಸ್ ಆಗುವ ಮುಂಚೆಯೇ ಸಾವಿರಾರು ಟಿಕೆಟ್ಗಳು ಮುಂಗಡವಾಗಿ ಮಾರಾಟ ಆಗಿದ್ದು, ಸಿನಿಮಾ ರಿಲೀಸ್ಗೆ ಮುಂಚೆಯೇ 30 ಕೋಟಿಗೂ ಹೆಚ್ಚು ಗಳಿಕೆಯನ್ನು ಮುಂಗಡ ಬುಕಿಂಗ್ನಿಂದಲೇ ಮಾಡಲಾಗಿದೆ. ಬೆಂಗಳೂರಿನಲ್ಲೂ ಸಹ ಮುಂಗಡ ಬುಕಿಂಗ್ ಓಪನ್ ಆಗಿದ್ದು, ಟಿಕೆಟ್ ದರಗಳು ಪ್ರತಿಬಾರಿಯಂತೆ ಈ ಬಾರಿಯೂ ಗಗನಕ್ಕೇರಿವೆ.
ಪ್ರತಿಬಾರಿಯೂ ಪರಭಾಷೆ ಸಿನಿಮಾಗಳು ಬಿಡುಗಡೆ ಆದಾಗ ಟಿಕೆಟ್ ಬೆಲೆಯಲ್ಲಿ ಭಾರಿ ಏರಿಕೆ ಮಾಡಲಾಗುತ್ತದೆ. ‘ಜೈಲರ್ 2’ ಸಿನಿಮಾಕ್ಕೂ ಅದೇ ಮತ್ತೆ ಪುನರಾವರ್ತನೆಯಾಗಿದೆ. ಬೆಂಗಳೂರಿನಲ್ಲಿ ಅಕ್ಟೋಬರ್ 15ರಂದು ಬೆಳಿಗ್ಗೆ 6 ಗಂಟೆಗೆ ವಿಶೇಷ ಶೋ ಪ್ರದರ್ಶಿಸಲಾಗುತ್ತಿದ್ದು, ಈ ಶೋನ ಕನಿಷ್ಟ ಟಿಕೆಟ್ ದರವೇ 900 ರೂಪಾಯಿಗಳಿವೆ. ಕೆಲವು ಚಿತ್ರಮಂದಿರಗಳಲ್ಲಿ ವಿಶೇಷ ಶೋ ಟಿಕೆಟ್ ಬೆಲೆ 2000 ಕ್ಕಿಂತಲೂ ಹೆಚ್ಚಿದೆ. ವಿಶೇಷ ಶೋ ಹೊರತುಪಡಿಸಿ ಇತರೆ ಶೋಗಳಿಗೆ ಸಹ ಟಿಕೆಟ್ ದರ ಕಡಿಮೆ ಏನಿಲ್ಲ. ಮಲ್ಟಿಪ್ಲೆಕ್ಸ್ಗಳಲ್ಲಿ ಕನಿಷ್ಟ ಟಿಕೆಟ್ ದರ 400 ಕೆಲವೆಡೆ 550 ರೂಪಾಯಿಗಳಿವೆ. ಗರಿಷ್ಠ ಟಿಕೆಟ್ ದರ 1500 ಕೆಲವೆಡೆ ಇನ್ನೂ ಹೆಚ್ಚಿದೆ.
ಇನ್ನು ಇದೇ ‘ಜೈಲರ್ 2’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಚೆನ್ನೈನಲ್ಲೂ ಓಪನ್ ಆಗಿದ್ದು, ಅಲ್ಲಿಗೂ ಬೆಂಗಳೂರಿಗೂ ಟಿಕೆಟ್ ದರದಲ್ಲಿ ನೆಲ-ಆಕಾಶದಷ್ಟು ವ್ಯತ್ಯಾಸವಿದೆ. ಚೆನ್ನೈನಲ್ಲಿ ಮಲ್ಟಿಪ್ಲೆಕ್ಸ್ಗಳಲ್ಲಿಯೂ ಸಹ ಸರಾಸರಿ ಗರಿಷ್ಠ ದರ 185-190 ರೂಪಾಯಿಗಳು ಮಾತ್ರವೇ ಇದೆ. ಕನಿಷ್ಠ ಟಿಕೆಟ್ ದರ ಕೇವಲ 54 ರೂಪಾಯಿಗಳು ಮಾತ್ರವೇ ಇದೆ. ಬೆಂಗಳೂರಿನಲ್ಲಿ ಇದರ 15 ಪಟ್ಟು ಟಿಕೆಟ್ ದರ ಹೆಚ್ಚಿದೆ. ಚೆನ್ನೈನಲ್ಲಿ ಮೊದಲ ಶೋ 9 ಗಂಟೆಗೆ ಶುರು ಆಗಲಿದೆ. ಕರ್ನಾಟಕದಲ್ಲಿ ಬೆಳಿಗ್ಗೆ ಆರು ಗಂಟೆಗೆ ಶೋ ಪ್ರಾರಂಭ ಆಗುತ್ತಿದೆ.
ಇದನ್ನೂ ಓದಿ:ರಜನೀಕಾಂತ್ ಸಿನಿಮಾನಲ್ಲಿ ಶ್ರೀಲೀಲಾ, ಚಿತ್ರೀಕರಣದಲ್ಲಿ ಭಾಗಿ
‘ಜೈಲರ್ 2’ ಸಿನಿಮಾ ಈ ಹಿಂದೆ ಬಿಡುಗಡೆ ಆಗಿದ್ದ ‘ಜೈಲರ್’ ಸಿನಿಮಾದ ಮುಂದುವರೆದ ಭಾಗವೇ ಆಗಿದ್ದು, ಸಿನಿಮಾ ಅನ್ನು ನೆಲ್ಸನ್ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಕಲಾನಿಧಿ ಮಾರನ್. ಸಂಗೀತವನ್ನು ಅನಿರುದ್ಧ್ ರವಿಚಂದ್ರನ್ ನೀಡಿದ್ದಾರೆ. ಸಿನಿಮಾನಲ್ಲಿ ರಜನೀಕಾಂತ್ ಜೊತೆಗೆ ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್, ಮೋಹನ್ಲಾಲ್, ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್, ಬಾಲಿವುಡ್ ನಟ ಹೃತಿಕ್ ರೋಷನ್ ಅವರುಗಳು ನಟನೆ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:48 pm, Tue, 13 October 26