ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ತಮ್ಮ ಸಿನಿಮಾ ಹಾಗೂ ಟ್ವೀಟ್ಗಳಿಂದ ವಿವಾದಗಳನ್ನು ತಮಗೆ ತಾವೇ ಮೈಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್ ಇತರೆ ಕೆಲವರ ಬಗ್ಗೆ ಕಳೆದ ಕೆಲ ವರ್ಷಗಳಿಂದಲೂ ಪದೇ ಪದೇ ಟ್ವೀಟ್ ಮಾಡುತ್ತಲೇ ಬರುತ್ತಿರುವ ರಾಮ್ ಗೋಪಾಲ್ ವರ್ಮಾ ಇವರ ಬಗ್ಗೆ ವ್ಯಂಗ್ಯದ ರೀತಿಯ ಸಿನಿಮಾಗಳನ್ನು ಸಹ ನಿರ್ದೇಶನ ಮಾಡಿದ್ದಾರೆ. ಇದೀಗ ಚಂದ್ರಬಾಬು ನಾಯ್ಡು ಹಾಗೂ ಪವನ್ ಕಲ್ಯಾಣ್ ಒಟ್ಟಿಗೆ ಆಂಧ್ರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದಿದ್ದು, ವರ್ಮಾ ಒಂದು ವರ್ಷದ ಹಿಂದೆ ಮಾಡಿದ್ದ ಟ್ವೀಟ್ಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಆಂಧ್ರ ಪೊಲೀಸರು ರಾಮ್ ಗೋಪಾಲ್ ವರ್ಮಾಗಾಗಿ ಹುಡುಕಾಟ ನಡೆಸಿದ್ದಾರೆ.
ಪೊಲೀಸರು ರಾಮ್ ಗೋಪಾಲ್ ವರ್ಮಾ ಅವರಿಗಾಗಿ ಹುಡುಕಾಟ ನಡೆಸುತ್ತಿರುವ ವೇಳೆಯಲ್ಲಿಯೇ ವರ್ಮಾ ವಿಡಿಯೋ ಒಂದನ್ನು ಹರಿಬಿಟ್ಟಿದ್ದು, ತಮ್ಮದೇ ಶೈಲಿನಲ್ಲಿ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿರುವ ಜೊತೆಗೆ ಪೊಲೀಸರ ತನಿಖಾ ವಿಧಾನದ ಬಗ್ಗೆಯೂ ವ್ಯಂಗ್ಯ ಮಾಡಿದ್ದಾರೆ. ವಿಡಿಯೋನಲ್ಲಿ ಮಾತನಾಡಿರುವ ವರ್ಮಾ, ‘ನಾನು ಒಂದು ವರ್ಷದ ಹಿಂದೆ ಮಾಡಿರುವ ಟ್ವೀಟ್, ನಾಲ್ಕು ಬೇರೆ ಬೇರೆ ಪ್ರದೇಶದಲ್ಲಿ ವಾಸಿಸುವ ಜನರಿಗೆ, ಈಗ ಒಂದೇ ಸಮಯದಲ್ಲಿ ಭಾವನೆಗಳಿಗೆ ಧಕ್ಕೆ ಮಾಡಿದೆ. ನಾಲ್ಕು ಬೇರೆ ಬೇರೆ ಪ್ರದೇಶಗಳಲ್ಲಿ ಅವರು ದೂರು ನೀಡಿದ್ದಾರೆ. ಇದು ಹೇಗೆ ಸಾಧ್ಯ?’ ಎಂದು ಪ್ರಶ್ನೆ ಮಾಡಿದ್ದಾರೆ.
‘ಮತ್ತೊಂದು ವಿಷಯವೆಂದರೆ ನಾನು ಯಾರ ಬಗ್ಗೆ ಟ್ವೀಟ್ ಮಾಡಿದ್ದೇನೋ ಅವರಿಗೆ ಆ ಟ್ವೀಟ್ನಿಂದ ಘಾಸಿಯಾಗಿಲ್ಲ ಆದರೆ ಯಾರೋ ಮೂರನೇ ವ್ಯಕ್ತಿಯ ಭಾವನೆಗೆ ಧಕ್ಕೆ ಆಗಿದೆ. ಅಸಲಿಗೆ ನಾನು ಟ್ವೀಟ್ ಮಾಡಿದ ವ್ಯಕ್ತಿಗೂ, ನನ್ನ ಮೇಲೆ ದೂರು ನೀಡಿರುವ ವ್ಯಕ್ತಿಗೂ ಸಂಬಂಧವೇ ಇಲ್ಲ. ಹಾಗಿದ್ದ ಮೇಲೆ ನನ್ನ ಮೇಲೆ ಹೇರಲಾಗಿರುವ ಸೆಕ್ಷನ್ಗಳು ನಿಜಕ್ಕೂ ಅನ್ವಯ ಆಗುತ್ತವೆಯೇ? ಎಂಬ ಅನುಮಾನ ನನಗೆ ಇದೆ. ಅಲ್ಲದೆ ಇದು ಪ್ರಾಸಿಕ್ಯೂಷನ್ ಮಾಡಬಲ್ಲ ಅರ್ಹತೆಯುಳ್ಳ ಪ್ರಕರಣವೇ ಅಲ್ಲ ಎಂಬ ಅನುಮಾನ ಇದೆ’ ಎಂದಿದ್ದಾರೆ ವರ್ಮಾ.
ಇದನ್ನೂ ಓದಿ:ರಾಮ್ ಗೋಪಾಲ್ ವರ್ಮಾ ವಿರುದ್ಧ ದೂರು, ಬಂಧನ ಸಾಧ್ಯತೆ
ರಾಜಕಾರಣಿಗಳು ತಮ್ಮ ವಿರೋಧಿಗಳನ್ನು, ಟೀಕಾಕಾರರನ್ನು ಹತ್ತಿಕ್ಕಲು ಪೊಲೀಸರನ್ನು ಆಯುಧಗಳಂತೆ ಬಳಸುತ್ತಿರುವುದು ಅಮೆರಿಕ, ಯೂರೋಪ್ ದೇಶಗಳು ಹಾಗೂ ಇಲ್ಲಿಯೂ ಸಹ ನೋಡಲು ಸಿಗುತ್ತವೆ. ನಾನು ಪ್ರತ್ಯೇಕವಾಗಿ ಇಂಥಹಾ ರಾಜಕಾರಣಿ, ಇಂಥಹಾ ಪೊಲೀಸ್ ಅಧಿಕಾರಿ ಎಂದು ಹೇಳುತ್ತಿಲ್ಲ. ಆದರೆ ಅದು ಸಾಮಾನ್ಯವಾಗಿ ವ್ಯವಸ್ಥೆಯಲ್ಲಿ ನಡೆಯುತ್ತಿದೆ. ಅದೆಲ್ಲ ಏನೇ ಇದ್ದರು ಈ ನೆಲದ ಕಾನೂನಿಗೆ ಗೌರವ ಕೊಡುವ ವ್ಯಕ್ತಿ ನಾನು, ಎಲ್ಲರೂ ಕೊಡಲೇ ಬೇಕು’ ಎಂದಿದ್ದಾರೆ.
‘ಈ ಪ್ರಕರಣಕ್ಕೆ ಬರುವುದಾದರೆ ನಾನು ವರ್ಷದ ಹಿಂದೆ ಮಾಡಿರುವ ಟ್ವೀಟ್ಗೆ ಸಂಬಂಧಿಸಿದಂತೆ ಪೊಲೀಸರು ನನಗೆ ನೊಟೀಸ್ ನೀಡಿದರು. ನಾನು ನಿರ್ದಿಷ್ಟ ದಿನದಂದು ವಿಚಾರಣೆಗೆ ಹಾಜರಾಗುವುದಾಗಿ ಅವರಿಗೆ ತಿಳಿಸಿದೆ. ಆದರೆ ಅಂದು ನನಗೆ ಶೂಟಿಂಗ್ ಕೆಲಸ ಇದ್ದ ಕಾರಣ ಹೋಗಲಾಗಲಿಲ್ಲ. ಅದಾದ ಬಳಿಕ ಕಾರಣ ತಿಳಿಸಿ ಮತ್ತೊಂದು ದಿನಾಂಕ ಕೇಳಿದೆ. ಆದರೆ ಪೊಲೀಸರು ಅದಕ್ಕೆ ಒಪ್ಪುತ್ತಿಲ್ಲ. ಒಂದು ವರ್ಷದ ಹಿಂದೆ ಮಾಡಿದ ಟ್ವೀಟ್ ಅನ್ನು ಈಗ ನೋಡಿ ದೂರು ನೀಡಿದ ವ್ಯಕ್ತಿಗೆ, ಒಂದು ವಾರದಲ್ಲಿ ಪ್ರಕರಣ ಇತ್ಯರ್ಥ ಆಗಿಬಿಡಬೇಕು ಎಂದರೆ ಆಗುತ್ತದೆಯೇ? ಇದಕ್ಕೇನಾದರೂ ಅರ್ಥ ಇದೆಯೇ?’ ಎಂದು ವರ್ಮಾ ಪ್ರಶ್ನೆ ಮಾಡಿದ್ದಾರೆ.
‘ಈ ಧಾವಂತದ ಅರ್ಥ ಬೇರೆಯೇ ಇದ್ದಂತಿದೆ. ಇದು ಪ್ರಕರಣ ಇತ್ಯರ್ಥಕ್ಕೆ ಅಲ್ಲದೆ ಬೇರೆ ಕಾರಣಕ್ಕೆ ಮಾಡುತ್ತಿರುವ ಧಾವಂತದಂತೆ ತೋರುತ್ತಿದೆ. ಕೊಲೆ, ಅತ್ಯಾಚಾರಗಳಂಥಹಾ ಪ್ರಕರಣದಲ್ಲಿಯೇ ಇಷ್ಟು ಧಾವಂತದಿಂದ ನೊಟೀಸ್ಗಳನ್ನು ಕೊಡುವುದಿಲ್ಲ’ ಎಂದು ವರ್ಮಾ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ