ಈ ‘ಗರ್ಲ್ಫ್ರೆಂಡ್’ ನೀವು ಅಂದುಕೊಂಡಂತೆ ಇಲ್ಲ; ರಶ್ಮಿಕಾ ಮಂದಣ್ಣ ಬಗ್ಗೆ ಇಲ್ಲಿದೆ ಹೊಸ ಸುದ್ದಿ
ರಶ್ಮಿಕಾ ಮಂದಣ್ಣ ಅವರು ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಅವರು ನಟಿಸಿದ ‘ಅನಿಮಲ್’ ಸಿನಿಮಾ ಬ್ಲಾಕ್ ಬಸ್ಟರ್ ಆಗಿದೆ. ಈಗ ಅವರು ‘ದಿ ಗರ್ಲ್ಫ್ರೆಂಡ್’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ರಶ್ಮಿಕಾ ಮಂದಣ್ಣ ವಿಶೇಷ ತರಬೇತಿ ಪಡೆದುಕೊಂಡಿದ್ದಾರೆ. ಆ ಮೂಲಕ ನಿರೀಕ್ಷೆ ಹೆಚ್ಚಿಸಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಹಲವು ಆಫರ್ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ದಕ್ಷಿಣ ಭಾರತ ಮಾತ್ರವಲ್ಲದೇ ಬಾಲಿವುಡ್ನಲ್ಲೂ ಅವರು ಫೇಮಸ್ ಆಗಿದ್ದಾರೆ. ಇತ್ತೀಚೆಗೆ ತೆರೆಕಂಡ ‘ಅನಿಮಲ್’ (Animal) ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ಅವರು ದೊಡ್ಡ ಗೆಲುವು ಕಂಡಿದ್ದಾರೆ. ಹಾಗಂತ ಈ ಯಶಸ್ಸಿನ ಖುಷಿಯಲ್ಲಿ ಅವರು ಸುಮ್ಮನೆ ಕುಳಿತಿಲ್ಲ. ಮುಂದಿನ ಸಿನಿಮಾದ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ರಶ್ಮಿಕಾ ಮಂದಣ್ಣ ನಟಿಸುತ್ತಿರುವ ‘ದಿ ಗರ್ಲ್ಫ್ರೆಂಡ್’ (The Girlfriend) ಸಿನಿಮಾದ ಬಗ್ಗೆ ಒಂದು ಹೊಸ ನ್ಯೂಸ್ ಕೇಳಿಬಂದಿದೆ. ಈ ಚಿತ್ರಕ್ಕಾಗಿ ರಶ್ಮಿಕಾ ಅವರು ಮಾರ್ಷಲ್ ಆರ್ಟ್ಸ್ ಕಲಿಯುತ್ತಿದ್ದಾರೆ.
‘ದಿ ಗರ್ಲ್ಫ್ರೆಂಡ್’ ಎಂದ ತಕ್ಷಣ ಇದು ಅಪ್ಪಟ ಪ್ರೇಮಕಥೆಯುಳ್ಳ ಸಿನಿಮಾ ಎಂದು ಪ್ರೇಕ್ಷಕರು ಊಹಿಸುವುದು ಸಹಜ. ಆದರೆ ವಾಸ್ತವ ಆ ರೀತಿ ಇಲ್ಲವಂತೆ. ಈ ‘ದಿ ಗರ್ಲ್ಫ್ರೆಂಡ್’ ನೀವಂದುಕೊಂಡ ರೀತಿಯಲ್ಲಿ ಇಲ್ಲ. ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ ಅವರು ಫೈಟಿಂಗ್ ಕೂಡ ಮಾಡಲಿದ್ದಾರೆ. ಈಗಾಗಲೇ ಅವರು ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.
ಇದನ್ನೂ ಓದಿ: 4 ಕೋಟಿಗೆ ಏರಿತು ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ; ನಟಿಗೆ ಡಬಲ್ ಖುಷಿ
ಹೈದರಾಬಾದ್ನ ಹೊರವಲಯದಲ್ಲಿ ‘ದಿ ಗರ್ಲ್ಫ್ರೆಂಡ್’ ಸಿನಿಮಾಗೆ ಶೂಟಿಂಗ್ ನಡೆಯುತ್ತಿದೆ. ಮುಂಬೈ, ಬೆಂಗಳೂರು ಮುಂತಾದ ನಗರಗಳಲ್ಲಿ ‘ಅನಿಮಲ್’ ಸಿನಿಮಾದ ಪ್ರಮೋಷನ್ ಮಾಡಿದ ಬಳಿಕ ರಶ್ಮಿಕಾ ಮಂದಣ್ಣ ಅವರು ನೇರವಾಗಿ ‘ದಿ ಗರ್ಲ್ಫ್ರೆಂಡ್’ ಸಿನಿಮಾದ ಶೂಟಿಂಗ್ ಸೆಟ್ಗೆ ಬಂದಿದ್ದಾರೆ. ಮೊದಲ ಹಂತದ ಚಿತ್ರೀಕರಣದಲ್ಲಿ ಅವರು ಭಾಗಿ ಆಗಿದ್ದಾರೆ. ಮೊದಲ 20 ದಿನದ ಚಿತ್ರೀಕರಣದಲ್ಲಿ ಆ್ಯಕ್ಷನ್ ದೃಶ್ಯಗಳನ್ನು ಶೂಟ್ ಮಾಡಲಾಗುತ್ತಿದೆ. ಇದರಲ್ಲಿ ರಶ್ಮಿಕಾ ಅವರು ಸಾಹಸ ಮೆರೆಯಲಿದ್ದಾರೆ.
‘ದಿ ಗರ್ಲ್ಫ್ರೆಂಡ್’ ಸಿನಿಮಾದಲ್ಲಿ ಕೇವಲ ಲವ್ ಸ್ಟೋರಿ ಮಾತ್ರವಲ್ಲದೇ ಭರ್ಜರಿ ಆ್ಯಕ್ಷನ್ ದೃಶ್ಯಗಳು ಇರಲಿವೆ. ಮೂಲಗಳ ಪ್ರಕಾರ ರಶ್ಮಿಕಾ ಮಂದಣ್ಣ ಅವರು ಎರಡು ಭಿನ್ನ ಶೇಡ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಅವರು ಮಾರ್ಷಲ್ ಆರ್ಟ್ಸ್ ತರಬೇತಿ ಪಡೆದುಕೊಂಡಿದ್ದಾರೆ. ಇದೇ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರು ಅತಿಥಿ ಪಾತ್ರ ಮಾಡುವ ಸಾಧ್ಯತೆ ಇದೆ ಎಂದು ಕೂಡ ಹೇಳಲಾಗುತ್ತಿದೆ. ಆದರೆ ಈ ವಿಚಾರದ ಬಗ್ಗೆ ಚಿತ್ರತಂಡದಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:16 pm, Wed, 6 December 23