ವಿಶ್ವಾದ್ಯಂತ ಧೂಳೆಬ್ಬಿಸಿದೆ ‘ಆರ್ಆರ್ಆರ್’ ಸಿನಿಮಾ; 3 ದಿನಕ್ಕೆ 500 ಕೋಟಿ ರೂ. ಕಲೆಕ್ಷನ್
RRR Movie Collection: ಮೊದಲ ದಿನವೇ ‘ಆರ್ಆರ್ಆರ್’ ಚಿತ್ರ ವಿಶ್ವಾದ್ಯಂತ 223 ಕೋಟಿ ರೂಪಾಯಿ ಕಮಾಯಿ ಮಾಡಿದೆ ಎಂದು ವರದಿ ಆಗಿತ್ತು. ಈಗ ಮೂರು ದಿನ ಕಳೆಯುವುದರೊಳಗೆ 500 ಕೋಟಿ ರೂಪಾಯಿ ಗಡಿ ಮುಟ್ಟಿದೆ.
ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಿರ್ದೇಶಕ ರಾಜಮೌಳಿ (Rajamouli) ಅವರು ಮತ್ತೊಮ್ಮೆ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಪಡಿಸಿದ್ದಾರೆ. ಅವರ ಬತ್ತಳಿಕೆಯಿಂದ ಬಂದಿರುವ ‘ಆರ್ಆರ್ಆರ್’ ಸಿನಿಮಾ (RRR Movie) ಗಲ್ಲಾಪೆಟ್ಟಿಗೆಯಲ್ಲಿ ದೂಳೆಬ್ಬಿಸುತ್ತಿದೆ. ಮೂಲತಃ ತೆಲುಗಿನಲ್ಲಿ ಸಿದ್ಧವಾದ ಈ ಚಿತ್ರ ಕನ್ನಡ, ಹಿಂದಿ, ಮಲಯಾಳಂ, ತಮಿಳು ಭಾಷೆಗೆ ಡಬ್ ಆಗಿ ತೆರೆ ಕಂಡಿದೆ. ಮಾ.25ರಂದು ಅದ್ದೂರಿಯಾಗಿ ವಿಶ್ವಾದ್ಯಂತ ‘ಆರ್ಆರ್ಆರ್’ ಸಿನಿಮಾ ರಿಲೀಸ್ ಆಯಿತು. ಮೂರು ದಿನ ಕಳೆಯುವುದರೊಳಗೆ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಬಂಗಾರದ ಬೆಳೆ ತೆಗೆದಿದೆ. ಆ ಮೂಲಕ ರಾಮ್ ಚರಣ್ ಮತ್ತು ಜ್ಯೂ. ಎನ್ಟಿಆರ್ ಅವರ ವೃತ್ತಿಜೀವನಕ್ಕೆ ಒಳ್ಳೆಯ ಮೈಲೇಜ್ ಸಿಕ್ಕಿದೆ. ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಅವರು ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಈ ಸಿನಿಮಾದಿಂದ ಅವರ ಫೇಮ್ ಹೆಚ್ಚಿದೆ. ಎಲ್ಲ ಭಾಷೆಯಲ್ಲೂ ‘ಆರ್ಆರ್ಆರ್’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಶುಕ್ರವಾರ, ಶನಿವಾರ ಮತ್ತು ಭಾನುವಾರ ಸೇರಿ ಬಾಕ್ಸ್ ಆಫೀಸ್ನಲ್ಲಿ 500 ಕೋಟಿ ರೂಪಾಯಿ ಕಲೆಕ್ಷನ್ (RRR Box Office Collection) ಆಗಿದೆ!
ಮೊದಲ ದಿನವೇ ‘ಆರ್ಆರ್ಆರ್’ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿತು. ಶುಕ್ರವಾರ (ಮಾ.25) ವಿಶ್ವಾದ್ಯಂತ 223 ಕೋಟಿ ರೂಪಾಯಿ ಕಮಾಯಿ ಆಗಿದೆ ಎಂದು ವರದಿ ಆಗಿತ್ತು. ಮೂರು ದಿನ ಕಳೆಯುವುದರೊಳಗೆ 500 ಕೋಟಿ ರೂಪಾಯಿ ಗಡಿ ಮುಟ್ಟಿರುವುದು ‘ಆರ್ಆರ್ಆರ್’ ಸಿನಿಮಾದ ಹೆಚ್ಚುಗಾರಿಕೆ. ಈ ಬಗ್ಗೆ ಟ್ರೇಡ್ ಅನಾಲಿಸಿಸ್ಟ್ ತರಣ್ ಆದರ್ಶ್, ರಮೇಶ್ ಬಾಲಾ ಮುಂತಾದವರು ಪೋಸ್ಟ್ ಮಾಡಿದ್ದಾರೆ.
ರಾಜಮೌಳಿ ಸಿನಿಮಾ ಎಂದರೆ ಅಭಿಮಾನಿಗಳು ಸಹಜವಾಗಿಯೇ ಅದ್ದೂರಿತನ ಬಯಸುತ್ತಾರೆ. ಅದಕ್ಕೆ ತಕ್ಕಂತೆಯೇ ‘ಆರ್ಆರ್ಆರ್’ ಸಿನಿಮಾ ಮೂಡಿಬಂದಿದೆ. ಜ್ಯೂ. ಎನ್ಟಿಆರ್ ಮತ್ತು ರಾಮ್ ಚರಣ್ ಅವರು ಸಖತ್ ಆ್ಯಕ್ಷನ್ ಮೆರೆದಿದ್ದಾರೆ. ಜೊತೆಗೆ ಸೆಂಟಿಮೆಂಟ್ ಕೂಡ ಸಿನಿಮಾದಲ್ಲಿ ಹೈಲೈಟ್ ಆಗಿದೆ. ಈ ಎಲ್ಲ ಕಾರಣಗಳಿಂದಾಗಿ ಪ್ರೇಕ್ಷಕರಿಗೆ ಸಿನಿಮಾ ಇಷ್ಟ ಆಗಿದೆ. ಮೊದಲ ದಿನವೇ ಎಲ್ಲ ಕಡೆಗಳಿಂದ ಉತ್ತಮ ವಿಮರ್ಶೆ ವ್ಯಕ್ತವಾಗಿದ್ದು ಚಿತ್ರತಂಡಕ್ಕೆ ಪ್ಲಸ್ ಪಾಯಿಂಟ್ ಆಯಿತು.
‘ಆರ್ಆರ್ಆರ್’ ಸಿನಿಮಾ ಬಿಡುಗಡೆ ಆಗುವುದಕ್ಕೂ ಮುನ್ನ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಉತ್ತಮ ಗಳಕೆ ಮಾಡುತ್ತಿತ್ತು. ‘ಆರ್ಆರ್ಆರ್’ ತೆರೆಕಂಡಿರುವುದರಿಂದ ಆ ಸಿನಿಮಾದ ಕಲೆಕ್ಷನ್ಗೆ ಪೆಟ್ಟು ಬಿದ್ದಿದೆ. ಹಿಂದಿ ಭಾಷಿಕ ರಾಜ್ಯಗಳಲ್ಲಿ ಕೂಡ ‘ಆರ್ಆರ್ಆರ್’ ಸಿನಿಮಾ ತನ್ನ ಬಲ ವೃದ್ಧಿಸಿಕೊಂಡಿದೆ. ಉತ್ತರ ಭಾರತದಲ್ಲಿ ಹಿಂದಿ ಡಬ್ಬಿಂಗ್ ವರ್ಷನ್ ಅನ್ನು ಪ್ರೇಕ್ಷಕರು ಮುಗಿಬಿದ್ದು ನೋಡುತ್ತಿದ್ದಾರೆ. ಹಿಂದಿ ವರ್ಷನ್ನಿಂದ ಶುಕ್ರವಾರ 19 ಕೋಟಿ ರೂಪಾಯಿ, ಶನಿವಾರ 24 ಕೋಟಿ ರೂಪಾಯಿ ಹಾಗೂ ಭಾನುವಾರ 31.50 ಕೋಟಿ ರೂಪಾಯಿ ಗಳಿಕೆ ಆಗಿದೆ. ಸೋಮವಾರ ಕೂಡ ಹಲವು ಕಡೆಗಳಲ್ಲಿ ಹೌಸ್ ಫುಲ್ ಆಗುತ್ತಿದೆ.
#RRR is setting new BENCHMARKS… ₹ 500 cr [and counting]… WORLDWIDE GBOC *opening weekend* biz… EXTRAORDINARY Monday on the cards… #SSRajamouli brings back glory of INDIAN CINEMA. Note: Non-holiday release. Pandemic era. pic.twitter.com/ztuu4r9eam
— taran adarsh (@taran_adarsh) March 28, 2022
ದಕ್ಷಿಣ ಭಾರತದ ಸಿನಿಮವೊಂದು ಈ ರೀತಿ ಹಿಂದಿ ವರ್ಷನ್ನಿಂದ ಭರ್ಜರಿ ಗೆಲುವು ಕಾಣುತ್ತಿರುವುದಕ್ಕೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ದಿನದಿಂದ ದಿನಕ್ಕೆ ಬಾಲಿವುಡ್ ಮಾರುಕಟ್ಟೆಯನ್ನು ದಕ್ಷಿಣ ಭಾರತದ ಸಿನಿಮಾಗಳು ಆಕ್ರಮಿಸಿಕೊಳ್ಳುತ್ತಿವೆ. ಏ.14ರಂದು ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ರಿಲೀಸ್ ಆಗುತ್ತಿದೆ. ಆ ಚಿತ್ರ ಕೂಡ ಇದೇ ರೀತಿ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಈಗಾಗಲೇ ‘ಕೆಜಿಎಫ್ 2’ ಸಿನಿಮಾದ ಟ್ರೇಲರ್ ಹಿಂದಿಯಲ್ಲಿ ಸೂಪರ್ ಹಿಟ್ ಆಗುವ ಮೂಲಕ ಹೈಪ್ ಸೃಷ್ಟಿ ಮಾಡಿದೆ.
ಇದನ್ನೂ ಓದಿ:
Alia Bhatt: ‘ಆರ್ಆರ್ಆರ್’ ಚಿತ್ರ ನೋಡಿ ನಿರಾಸೆಗೊಂಡ ಆಲಿಯಾ ಭಟ್ ಫ್ಯಾನ್ಸ್