ಬೇಕಾಬಿಟ್ಟಿ ಕುಡಿಯುತ್ತಿದ್ದ ಅರ್ಜುನ್ ಜನ್ಯ; 10 ವರ್ಷ ಮದ್ಯವೇ ಮುಟ್ಟದಂತಹ ಘಟನೆ ನಡೆಯಿತು
ಪ್ರಸಿದ್ಧ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ತಮ್ಮ ಹಿಂದಿನ ಮದ್ಯವ್ಯಸನ ಮತ್ತು ಆಧ್ಯಾತ್ಮಿಕ ಪ್ರಯಾಣದ ಬಗ್ಗೆ ಮಾತನಾಡಿದ್ದಾರೆ. ತಂದೆಯ ಅಗಲಿಕೆಯ ನಂತರ ಅನುಭವಿಸಿದ ಕಷ್ಟಗಳು ಮತ್ತು ಆದಿ ಪರಾಶಕ್ತಿ ದೇವಸ್ಥಾನಕ್ಕೆ ಭೇಟಿ ನೀಡಿದ ಅನುಭವವು ಅವರ ಜೀವನದಲ್ಲಿ ದೊಡ್ಡ ಬದಲಾವಣೆ ತಂದಿದೆ ಎಂದು ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಅರ್ಜುನ್ ಜನ್ಯ (Arjun Janya) ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರಿಗೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿದೆ. ಅವರು ಕನ್ನಡದಲ್ಲಿ ಹಲವು ಹಿಟ್ ಹಾಡುಗಳನ್ನು ನೀಡಿದ್ದಾರೆ. ಇದರ ಜೊತೆಗೆ ಹಲವು ಯುವ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ. ಈಗ ಅರ್ಜುನ್ ಜನ್ಯ ಅವರು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಮದ್ಯ ಸೇವನೆ ಮಾಡುತ್ತಿದ್ದ ದಿನಗಳನ್ನು ಅವರು ನೆನಪಿಸಿಕೊಂಡಿದ್ದಾರೆ. ಅದನ್ನು ಬಿಟ್ಟಿದ್ದಕ್ಕೆ ದೊಡ್ಡ ಕಾರಣವೂ ಇತ್ತು.
‘ನಮ್ಮ ತಂದೆ ಹೋದಾಗ ಸಾಕಷ್ಟು ಕಷ್ಟದ ಪರಿಸ್ಥಿತಿ ಬಂತು. ಇದು ನನಗೆ ಒಂದು ಪಾಠ. ನಾನು ಓಂ ಶಕ್ತಿ ಪೂಜೆ ಮಾಡುತ್ತೇನೆ. ನಾನು ಆದಿ ಪರಾಶಕ್ತಿ ಬಂಗಾರವಾಡಿಗೆ ನಡೆದುಕೊಳ್ಳುತ್ತೇನೆ. ಅದು 2005ರ ಸಮಯ. ಕಣ್ಣಲ್ಲಿ ಕನಸುಗಳು ಇದ್ದವು. ಈ ರೀತಿ ಕನಸು ಕಾಣುವಾಗ ಆದಿ ಪರಾಶಕ್ತಿ ದೇವಸ್ಥಾನಕ್ಕೆ ತೆರಳೋ ಅವಕಾಶ ಸಿಕ್ಕಿತು’ ಎಂದು ಖಾಸಗಿ ಸುದ್ದಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅರ್ಜುನ್ ಜನ್ಯ ಹೇಳಿದ್ದಾರೆ.
‘ನಾನು ದೇವಸ್ಥಾನಕ್ಕೆ ಕಾಲಿಟ್ಟಾಗ ಬಂಗಾರವಾಡಿಗಳು ಕಂಡರು. ಅವರು ಕಾಣೋದೇ ಅಪರೂಪ. ನಾನು ಹೋಗುವಾಗ ಸಾಮಾನ್ಯರಂತೆ ನಡೆದು ಬರುತ್ತಿದ್ದಾರೆ. ಅವರು ಕಾಲಿಟ್ಟು ಬಂದ ಮಣ್ಣನ್ನು ಜನರು ಎತ್ತಿ ತಲೆಗೆ ಹಚ್ಚಿಕೊಂಡರು. ಆ ಬಳಿಕ ನಾನು ಅಮ್ಮನವರ ದರ್ಶನ ಮಾಡಿದೆ. ಪ್ರತಿ ಕಣಗಳು ಅಳೋಕೆ ಆರಂಭ ಆಯ್ತು. ನಾನು ನಿರಂತರವಾಗಿ ಅಳುತ್ತಿದ್ದೆ. ಏಕೆ ಎಂಬುದೇ ಗೊತ್ತಾಗಲಿಲ್ಲ’ ಎಂದಿದ್ದಾರೆ ಅರ್ಜುನ್ ಜನ್ಯ.
‘ನಾನು ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡುವಾಗ ಸಾಕಷ್ಟು ಕುಡಿಯುತ್ತಿದ್ದೆ. ಆ ಜೀವನವೇ ಬೇರೆ ರೀತಿ ಇತ್ತು. ದೇವಸ್ಥಾನಕ್ಕೆ ಹೋಗುವ ಹಿಂದಿನ ದಿನವೂ ಕುಡಿದಿದ್ದೆ. ಕುಡಿದು ದೇವಸ್ಥಾನಕ್ಕೆ ಬರುವಷ್ಟು ಧೈರ್ಯವೇ ಎಂದು ಪ್ರಶ್ನೆ ಕೇಳಿದಂತೆ ಆಯಿತು. ಗಿಲ್ಟ್ ಇತ್ತು. ಆಮೇಲೆ ಕುಡಿಯಲ್ಲ ಎಂದು ನಿರ್ಧರಿಸಿದೆ. ಗೆಳೆಯರಿಗೂ ಹೇಳಿದೆ’ ಎಂದಿದ್ದಾರೆ ಅರ್ಜುನ್ ಜನ್ಯ.
ಇದನ್ನೂ ಓದಿ: ‘ನೀವು ಅರ್ಜುನ್ ಜನ್ಯ ಡ್ರೀಮ್ ಲೇಡಿ’; ಅನುಶ್ರೀ ಬಗ್ಗೆ ವಿಜಯ್ ಪ್ರಕಾಶ್ ಹೀಗೆ ಹೇಳಿದ್ದೇಕೆ?
‘ಅಲ್ಲಿಂದ 10 ವರ್ಷ ಕುಡಿದೇ ಇಲ್ಲ. ದೇವಸ್ಥಾನಕ್ಕೆ ಹೋಗಿ ಬಂದಾಗ ಮೊದಲ ಆಫರ್ ಸಿಕ್ಕಿತು. ಪ್ರತಿ ಕ್ಷಣದ ಉಸಿರಾಟ ಅಮ್ಮನವರು. ಕಷ್ಟ ಬಂದರೂ ಏನು ಅನಿಸುವುದಿಲ್ಲ. ಸಕ್ಸಸ್ ಬಂದರೂ ಏನು ಅನಿಸೋದಿಲ್ಲ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:44 am, Mon, 1 September 25








