ಶಿವಣ್ಣ ನಟನೆಯ ‘ಬೇಲ್’ ಚಿತ್ರಕ್ಕೆ ಪ್ರೇಕ್ಷಕರ ಜೈಕಾರ; ಉತ್ತಮ ಪ್ರದರ್ಶನ ಕಾಣುತ್ತಿದೆ ಕನ್ನಡದ ಸಿನಿಮಾ
ಶಿವರಾಜ್‌ಕುಮಾರ್ ಮತ್ತು ಸಂಗೀತ ಜೋಡಿಯ ನಟನೆಯ, ಪವನ್ ಒಡೆಯರ್ ನಿರ್ದೇಶನದ 'ಬೈಲ್' ಸಿನಿಮಾ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿದೆ. ಈ ಸಿನಿಮಾ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದು ಪವರ್-ಪ್ಯಾಕ್ಡ್ ಆಕ್ಷನ್ ಎಂಟರ್ಟೈನರ್ ಆಗಿದ್ದು, ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ರಿಪೋರ್ಟ್.

ಮುಖ್ಯಾಂಶಗಳು
- ಚಿತ್ರಮಂದಿರಗಳಲ್ಲಿ ಬೈಲ್ ಸಿನಿಮಾದ ಅಬ್ಬರ
- ಪ್ರೇಕ್ಷಕರಿಂದ ಫುಲ್ ರೆಸ್ಪಾನ್ಸ್
- ಪವನ್ ಒಡೆಯರ್ ನಿರ್ದೇಶನದ ಕಥೆ ಮತ್ತು ಆಕ್ಷನ್ ಸೀಕ್ವೆನ್ಸ್‌ಗೆ ಜೈಕಾರ
ಶಿವರಾಜ್‌ಕುಮಾರ್ ನಟನೆಯ ‘ಬೇಲ್’ ಸಿನಿಮಾ ಅಕ್ಟೋಬರ್ 2ರಂದು ತೆರೆಗೆ ಬಂತು. ಈ ಚಿತ್ರಕ್ಕೆ ಪ್ರೇಕ್ಷಕರಿಂದ ಅದ್ಭುತವಾದ ರೆಸ್ಪಾನ್ಸ್ ಸಿಕ್ಕಿದೆ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಕುಟುಂಬದವರು ಹಾಗೂ ಯುವ ಪ್ರೇಕ್ಷಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ. ವಿಶೇಷವಾಗಿ ತಮಿಳುನಾಡಿನಲ್ಲೂ ಈ ಚಿತ್ರಕ್ಕೆ ಉತ್ತಮ ಆಕ್ಯುಪೆನ್ಸಿ ಸಿಕ್ಕಿದ್ದು, ಪರಭಾಷೆಯಲ್ಲೂ ಸಿನಿಮಾದ ಹವಾ ಜೋರಾಗಿದೆ.
ಕಥೆ ಮತ್ತು ನಟನೆಯ ಕಮಾಲ್
ಈ ಚಿತ್ರವು ವಿಜಯ್ ಕುಮಾರ್ (ಶಿವರಾಜ್‌ಕುಮಾರ್) ಹೆಸರಿನ ನಿವೃತ್ತ ಕಮಿಷನರ್ ಸುತ್ತ ನಡೆಯುವ ಮರ್ಡರ್-ಮಿಸ್ಟ್ರಿ ಥ್ರಿಲ್ಲರ್ ಕಥೆಯಾಗಿದೆ. ವ್ಯವಸ್ಥೆಯಿಂದ ನ್ಯಾಯ ಸಿಗದಿದ್ದಾಗ ನಾಯಕ ಹೇಗೆ ಕಾನೂನನ್ನು ಕೈಗೆತ್ತಿಕೊಳ್ಳುತ್ತಾನೆ ಎಂಬುದು ಸಿನಿಮಾದ ಮುಖ್ಯ ಹೂರಣವಾಗಿದೆ. ಶಿವಣ್ಣ ಅವರ ಸಂಯಮದ ಹಾಗೂ ಗಂಭೀರ ನಟನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ದೀರ್ಘಕಾಲದ ಬಳಿಕ ನಟಿ ಸಂಗೀತ ಅವರು ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್ ಮಾಡಿದ್ದು, ಇವರ ಪಾತ್ರವೂ ಗಮನ ಸೆಳೆದಿದೆ. ಸಾಯಿ ಕುಮಾರ್, ಜಯರಾಮ್, ದೀಕ್ಷಿತ್ ಶೆಟ್ಟಿ, ಸಂಜನಾ ಆನಂದ್ ಹಾಗೂ ರೂಪಾಲಿ ಸೂದ್ ತಾರಾಗಣದಲ್ಲಿದ್ದು, ಎಲ್ಲರೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. .
ನಿರ್ದೇಶನ ಮತ್ತು ತಾಂತ್ರಿಕತೆ
ನಾಲ್ಕು ವರ್ಷಗಳ ಬಳಿಕ ಕಮ್‌ಬ್ಯಾಕ್ ಮಾಡಿರುವ ನಿರ್ದೇಶಕ ಪವನ್ ಒಡೆಯರ್ ಕಮರ್ಷಿಯಲ್ ಸೂತ್ರಗಳನ್ನು ಬದಿಗಿಟ್ಟು ಕಥೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದಾರೆ. ಇಂಟರ್‌ವೆಲ್ ಬ್ಲಾಕ್ ಮತ್ತು ಹಿನ್ನೆಲೆ ಸಂಗೀತ ಸಿನಿಮಾದ ಪ್ಲಸ್ ಪಾಯಿಂಟ್ ಎಂದು ಪ್ರೇಕ್ಷಕರು ಕೊಂಡಾಡುತ್ತಿದ್ದಾರೆ. ಒಟ್ಟಾರೆಯಾಗಿ ‘ಬೇಲ್’ ಸಿನಿಮಾವು ಆಕ್ಷನ್ ಜೊತೆಗೆ ಭಾವನಾತ್ಮಕ ದೃಶ್ಯಗಳಿರುವ ಭರ್ಜರಿ ಎಂಟರ್ಟೈನರ್ ಆಗಿ ಮೂಡಿಬಂದಿದೆ.
ಇದನ್ನೂ ಓದಿ: ದುಷ್ಟರ ಸಂಹಾರಕ್ಕೆ ಪರ್ಯಾಯ ಮಾರ್ಗ ತೋರಿಸಿದ ‘ಬೇಲ್’ ಸಿನಿಮಾ
ಕನ್ನಡ ಚಿತ್ರಗಳನ್ನು ನೋಡಲು ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂಬ ಕೊರಗಿದೆ. ಶಿವರಾಜ್‌ಕುಮಾರ್ ಅವರ ‘ಬೇಲ್’ ಸಿನಿಮಾ ಈ ಕೊರಗನ್ನು ಕಡಿಮೆ ಮಾಡಿದೆ. ಶಿವರಾಜ್‌ಕುಮಾರ್ ಅವರ ಡಿಫರೆಂಟ್ ಲುಕ್ ನೋಡಿ ಪ್ರೇಕ್ಷಕರು ಭೇಷ್ ಎನ್ನುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:55 pm, Sat, 10 October 26




