‘ಬಿಗ್ ಬಾಸ್ ಸೀಸನ್ 9’ (BBK 9) ಶೋ ವಿನ್ನರ್ ರೂಪೇಶ್ ಶೆಟ್ಟಿ ಅವರು ಹೀರೋ ಆಗಿ ನಟಿಸಿರುವ ‘ಮಂಕು ಭಾಯ್ ಫಾಕ್ಸಿ ರಾಣಿ’ (Manku Bhai Foxy Rani) ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಈ ಸಿನಿಮಾ ಜನವರಿ 13ರಂದು ರಿಲೀಸ್ ಆಗಲಿದೆ. ಗಗನ್ ಎಂ. ನಿರ್ದೇಶನ ಮಾಡಿದ್ದು ‘ಬ್ರಹ್ಮಗಂಟು’ ಧಾರಾವಾಹಿ ಖ್ಯಾತಿಯ ಗೀತಾ ಭಾರತಿ ಭಟ್, ಪಂಚಮಿ ರಾವ್ ಕೂಡ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ‘ಇದನ್ನು ಶಾರ್ಟ್ ಮೂವೀ ಮಾಡೋಣ ಅಂತ ಪ್ಲ್ಯಾನ್ ಮಾಡಿಕೊಂಡಿದ್ದೆ. ಆದರೆ ರೂಪೇಶ್ ಶೆಟ್ಟಿ (Roopesh Shetty) ನಟಿಸಲು ಒಪ್ಪಿಕೊಂಡ ಮೇಲೆ ಇದರ ಕಥೆಯನ್ನು ಸಿನಿಮಾಗೆ ಹೊಂದುವಂತೆ ಸಿದ್ಧ ಮಾಡಿಕೊಂಡ್ವಿ. 2019ರಲ್ಲಿ ಆರಂಭವಾದ ಚಿತ್ರವಿದು. ಈಗ ಬಿಡುಗಡೆಯ ಹಂತಕ್ಕೆ ಬಂದಿದೆ’ ಎಂದಿದ್ದಾರೆ ನಿರ್ದೇಶಕರು.
ತುಳು ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿ, ಕಿರುಚಿತ್ರ ಹಾಗೂ ಡಾಕ್ಯುಮೆಂಟರಿಗಳನ್ನು ಮಾಡಿ ಅನುಭವ ಹೊಂದಿರುವ ಗಗನ್ ಅವರು ‘ಮಂಕು ಭಾಯ್ ಫಾಕ್ಸಿ ರಾಣಿ’ ಸಿನಿಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ‘ಮಂಗಳೂರು ಕನ್ನಡ ಶೈಲಿಯಲ್ಲಿ ಡೈಲಾಗ್ಗಳಿವೆ. ಯಕ್ಷಗಾನದಲ್ಲಿ ಸಿಂಹದ ವೇಷ ಹಾಕುವ ಹುಡುಗನ ಜೀವನದಲ್ಲಿ ನಡೆಯುವ ಪ್ರೇಮಕಥೆ ಇದರಲ್ಲಿ ಇದೆ’ ಎಂದು ಗಗನ್ ಹೇಳಿದ್ದಾರೆ.
ಸಿನಿಮಾದ ಬಗ್ಗೆ ರೂಪೇಶ್ ಶೆಟ್ಟಿ ಮಾತನಾಡಿದ್ದಾರೆ. ‘ಈ ಚಿತ್ರದಲ್ಲಿ ಕಥೆಯೇ ಹೀರೋ. ಒಂದು ಮುಗ್ಧ ಲವ್ ಸ್ಟೋರಿ ಇರುವ ಸಿನಿಮಾ ಇದು. ಚಿತ್ರಕ್ಕಾಗಿ 8 ಕೆಜಿ ದಪ್ಪ ಆಗಿದ್ದೆ. ಕನ್ನಡದಲ್ಲಿ ಹೀರೋ ಆಗಿ ನಟಿಸುತ್ತಿರುವ 5ನೇ ಸಿನಿಮಾವಿದು. ‘ಡೇಂಜರ್ ಝೋನ್’, ‘ಅನುಷ್ಕಾ’, ‘ನಿಶಬ್ಧ 2’, ‘ಗೋವಿಂದ ಗೋವಿಂದ’ ಸಿನಿಮಾ ಮಾಡಿದ್ದೇನೆ. ಆಗೆಲ್ಲ ಆ ಚಿತ್ರದಲ್ಲಿ ನಾನಿದ್ದೇನೆ ಎಂದು ಹೇಳುತ್ತಿದ್ದೆ. ಆದ್ರೆ ಇದೇ ಮೊದಲ ಬಾರಿಗೆ ರೂಪೇಶ್ ಶೆಟ್ಟಿ ಸಿನಿಮಾ ಬರ್ತಿದೆ ಅಂತ ಎಲ್ಲರೂ ಹೇಳುತ್ತಿದ್ದಾರೆ. ಇದಕ್ಕೆಲ್ಲ ಬಿಗ್ ಬಾಸ್ ಕಾರಣ’ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.
ಕ್ಲಾಸಿಕಲ್ ಡಾನ್ಸರ್ ಆದ ಪಂಚಮಿ ರಾವ್ ಅವರಿಗೆ ಇದು ಮೊದಲ ಸಿನಿಮಾ. ‘ನನಗೆ ಸಿನಿಮಾ ರಂಗದ ಮೇಲೆ ಮೊದಲಿನಿಂದ ಆಸಕ್ತಿ ಇತ್ತು. ಒಳ್ಳೆಯ ಕಂಟೆಂಟ್ ಇರುವ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಈ ಚಿತ್ರದ ಕಥೆ ತುಂಬಾ ವಿಶೇಷ ಎನಿಸಿತು. ಹಾಗಾಗಿ ಒಪ್ಪಿಕೊಂಡೆ’ ಎಂದಿದ್ದಾರೆ ಪಂಚಮಿ.
ಇದನ್ನೂ ಓದಿ: Roopesh shetty: ಬಿಗ್ ಬಾಸ್ನಲ್ಲಿ ಗೆದ್ದ ಕಪ್ನ ವಿಶೇಷ ವ್ಯಕ್ತಿಗಳಿಗೆ ಅರ್ಪಿಸಿದ ರೂಪೇಶ್ ಶೆಟ್ಟಿ
ನಟಿ ಗೀತಾ ಭಾರತಿ ಭಟ್ ಪಾಲಿಗೆ ಈ ಸಿನಿಮಾ ಸ್ಪೆಷಲ್ ಆಗಿದೆ. ‘ಹಲವು ಚಿತ್ರಗಳಲ್ಲಿ ಪೋಷಕ ಪಾತ್ರ ಮಾಡಿದ್ದೆ. ಆದರೆ ಲೀಡ್ ರೋಲ್ನಲ್ಲಿ ನಟಿಸಿರೋದು ಇದೇ ಮೊದಲು. ಆರಂಭದಲ್ಲಿ ಮಂಗಳೂರು ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ಆದ್ರೆ ಶೂಟಿಂಗ್ ಮುಗಿಯುವ ಹೊತ್ತಿಗೆ ಪೂರ್ತಿ ಮಂಗಳೂರು ಕನ್ನಡ ಕಲಿತೆ. ನನ್ನನ್ನು ನಾನು ತೆರೆ ಮೇಲೆ ನೋಡಿಕೊಂಡಾಗ ಆತ್ಮ ವಿಶ್ವಾಸ ಹೆಚ್ಚಿದೆ’ ಎಂದು ಗೀತಾ ಭಾರತಿ ಭಟ್ ಹೇಳಿದ್ದಾರೆ.
ಪ್ರಕಾಶ್ ತುಮ್ಮಿನಾಡು, ಅರ್ಜುನ ಕಜೆ, ಪ್ರಶಾಂತ್ ಅಂಚನ್, ವಿವೇಕ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ‘ಜೋಶ್ವ ಮೀಡಿಯಾ ಪ್ರೈವೇಟ್ ಲಿಮಿಟೆಡ್’ ಬ್ಯಾನರ್ ಮೂಲಕ ಜೋಶ್ವ ಜೈಶಾನ್ ಕ್ರಾಸ್ತಾ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ವಿನ್ಯಾಸ್ ಮಧ್ಯ, ಶಮೀರ್ ಮುಡಿಪು ಸಂಗೀತ ನಿರ್ದೇಶನ, ಶಿನೋಯ್ ವಿ ಜೋಸೆಫ್ ಹಿನ್ನೆಲೆ ಸಂಗೀತ, ಎಂ.ಕೆ. ಷಹಜಹಾನ್ ಛಾಯಾಗ್ರಹಣ, ಸುಶಾಂತ್ ಶೆಟ್ಟಿ, ಪ್ರಜ್ವಲ್ ಸುವರ್ಣ ಸಂಕಲನ ಈ ಚಿತ್ರಕ್ಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.