Kishore: ‘ನಾನು ಕೆಜಿಎಫ್ 2 ಸಿನಿಮಾ ನೋಡಿಲ್ಲ’; ಕಾರಣ ತಿಳಿಸಿದ ‘ಕಾಂತಾರ’ ನಟ ಕಿಶೋರ್
KGF 2 | Kishore: ನಟ ಕಿಶೋರ್ ಅವರು ಹಲವು ಕಾರಣಗಳಿಂದ ಸುದ್ದಿ ಆಗುತ್ತಿದ್ದಾರೆ. ಈಗ ಅವರು ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್ 2’ (KGF Chapter 2) ಸಿನಿಮಾ ಮಾಡಿದ ದಾಖಲೆಗಳು ಹಲವು. ಈ ಸಿನಿಮಾ ಬಗ್ಗೆ ಇಡೀ ದೇಶವೇ ಮಾತನಾಡಿದೆ. ಕೋಟ್ಯಂತರ ಪ್ರೇಕ್ಷಕರು ‘ಕೆಜಿಎಫ್ 2’ ನೋಡಿ ಮೆಚ್ಚಿಕೊಂಡಿದ್ದಾರೆ. ಅಚ್ಚರಿ ಎಂದರೆ ನಟ ಕಿಶೋರ್ ಅವರು ಈ ಸಿನಿಮಾವನ್ನು ವೀಕ್ಷಿಸಿಲ್ಲ. ‘ಇಂಡಿಯಾ ಟುಡೇ’ ನಡೆಸಿದ ಸಂದರ್ಶನದಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಕಿಶೋರ್ (Kishore) ಅವರು ಹಲವು ಕಾರಣಗಳಿಂದಾಗಿ ಸುದ್ದಿ ಆಗುತ್ತಿದ್ದಾರೆ. ‘ಕಾಂತಾರ’ ಚಿತ್ರದಲ್ಲಿ ಅರಣ್ಯಾಧಿಕಾರಿ ಪಾತ್ರ ಮಾಡಿದ ಅವರಿಗೆ ಅಭಿಮಾನಿಗಳಿಂದ ಚಪ್ಪಾಳೆ ಸಿಕ್ಕಿದೆ. ಅವರ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆಗಿದ್ದು, ಆ ಬಗ್ಗೆ ಚರ್ಚೆ ಆಗುತ್ತಿದೆ. ಅದರ ಬೆನ್ನಲ್ಲೇ ಅವರು ‘ಕೆಜಿಎಫ್ 2’ (KGF 2) ರೀತಿಯ ಸಿನಿಮಾಗಳ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
‘ಇದು ಸರಿಯೋ ಅಥವಾ ತಪ್ಪೋ ಎಂಬುದು ನನಗೆ ಗೊತ್ತಿಲ್ಲ. ನಾನು ಕೆಜಿಎಫ್ 2 ಸಿನಿಮಾವನ್ನು ನೋಡಿಲ್ಲ. ನಾನು ಇಷ್ಟಪಡುವ ರೀತಿಯ ಸಿನಿಮಾ ಅದಲ್ಲ. ಇದು ವೈಯಕ್ತಿಕ ಆಯ್ಕೆಯ ವಿಚಾರ’ ಎಂದು ಕಿಶೋರ್ ಹೇಳಿದ್ದಾರೆ. ‘ಯಶಸ್ವಿ ಆಗಿರದ ಕೆಲವು ಸಣ್ಣ ಸಿನಿಮಾಗಳನ್ನು ನೋಡಲು ನಾನು ಇಷ್ಟಪಡುತ್ತೇನೆ. ಬುದ್ಧಿಯಿಲ್ಲದ ಚಿತ್ರಗಳಿಗಿಂತ ಕೆಲವು ಗಂಭೀರ ವಿಚಾರದ ಬಗ್ಗೆ ಮಾತನಾಡುವ ಚಿತ್ರಗಳನ್ನು ನಾನು ನೋಡುತ್ತೇನೆ’ ಎಂದು ಕಿಶೋರ್ ಹೇಳಿರುವುದಾಗಿ ‘ಇಂಡಿಯಾ ಟುಡೇ’ ವರದಿ ಮಾಡಿದೆ.
ಇದನ್ನೂ ಓದಿ: Kishore: ದೈವದ ಕುರಿತ ಪೋಸ್ಟ್ನಿಂದ ಕಿಶೋರ್ ಟ್ವಿಟರ್ ಖಾತೆ ಸಸ್ಪೆಂಡ್ ಆಗಿಲ್ಲ; ಅಸಲಿ ಕಾರಣ ತಿಳಿಸಿದ ನಟ
ಕಿಶೋರ್ ಅವರು ಬಹುಭಾಷೆಯಲ್ಲಿ ಹೆಸರು ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು ಹಾಗೂ ತಮಿಳಿನಲ್ಲೂ ಅವರಿಗೆ ಸಖತ್ ಬೇಡಿಕೆ ಇದೆ. ಹಿಂದಿ ವೆಬ್ ಸಿರೀಸ್ಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. 2022ರಲ್ಲಿ ‘ಕಾಂತಾರ’, ‘ಪೊನ್ನಿಯಿನ್ ಸೆಲ್ವನ್ 1’ ಮುಂತಾದ ಸಿನಿಮಾಗಳ ಮೂಲಕ ಅವರು ಯಶಸ್ಸು ಕಂಡಿದ್ದಾರೆ.
ಕಿಶೋರ್ ಟ್ವಿಟರ್ ಖಾತೆ ಸಸ್ಪೆಂಡ್ ಆಗಲು ಕಾರಣ ಏನು?
ದೈವಕ್ಕೆ ಅಪಮಾನ ಮಾಡಿದ ಯುವಕನೊಬ್ಬ ರಕ್ತಕಾರಿ ಸತ್ತಿದ್ದಾನೆ ಎಂಬ ಸುದ್ದಿಗೆ ಕಿಶೋರ್ ಅವರು ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದರು. ಆದ್ದರಿಂದ ಅವರ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆಗಿದೆ ಎಂದೇ ಸುದ್ದಿ ಹಬ್ಬಿಸಲಾಗಿತ್ತು. ಆದರೆ ಅದು ನಿಜವಲ್ಲ ಎಂದು ಕಿಶೋರ್ ಸೋಶಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: IMDb Top 10 Indian Movies: ಐಎಂಡಿಬಿ ಟಾಪ್ 10 ಚಿತ್ರಗಳಲ್ಲಿ ಕಾಂತಾರ, ಕೆಜಿಎಫ್ 2, 777 ಚಾರ್ಲಿ
‘ಅನವಶ್ಯಕ ಊಹಾಪೋಹಗಳನ್ನು ತಡೆಯಲಿಕ್ಕಾಗಿಯಷ್ಟೆ. ನನ್ನ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆದದ್ದು ನನ್ನ ಯಾವ ಪೋಸ್ಟಿನಿಂದಲೂ ಅಲ್ಲ. ಡಿಸೆಂಬರ್ 20ನೇ ತಾರೀಕು 2022ರಂದು ಹ್ಯಾಕ್ ಮಾಡಲಾಗಿದ್ದರಿಂದ ಎಂದು ತಿಳಿದುಬಂದಿದೆ. ತಕ್ಕ ಕ್ರಮ ಕೈಗೊಳ್ಳುವ ಭರವಸೆ ಟ್ವಿಟರ್ ಕೂಡ ಕೊಟ್ಟಿದೆ. ಎಲ್ಲರ ಕಾಳಜಿಗೆ ಧನ್ಯವಾದಗಳು’ ಎಂದು ಕಿಶೋರ್ ಈಗ ಪೋಸ್ಟ್ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:04 pm, Thu, 5 January 23