ಅಧಮ, ನಾಯಿ ಎಂದು ನಿಂದಿಸಿದ ಆರೋಪ; ನಟ ಜಗ್ಗೇಶ್ ವಿರುದ್ಧ ಸಿಎಸ್ ರಘು ದೂರು
Jaggesh: ಟ್ವಿಟರ್ನಲ್ಲಿ ‘ಅಧಮ, ನಾಯಿ’ ಎಂದು ನನ್ನನ್ನು ನಿಂದಿಸಿದ್ದಾರೆ ಎಂದು ರಘು ದೂರು ಕೊಟ್ಟಿದ್ದಾರೆ. ವಿದ್ಯಾರ್ಥಿಗಳಿಗೆ ಸ್ವೆಟರ್ ಹಂಚಿಕೆಯಲ್ಲಿ ಅಕ್ರಮ ಆರೋಪದ ವಿಚಾರವಾಗಿ ನಟ ಜಗ್ಗೇಶ್ ಟ್ವೀಟ್ ಮಾಡಿದ್ದರು.
ಬೆಂಗಳೂರು: ವಿದ್ಯಾರ್ಥಿಗಳಿಗೆ ಸ್ವೆಟರ್ ಹಂಚಿಕೆ ವಿಚಾರದಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿ ನಟ ನವರಸ ನಾಯಕ ಜಗ್ಗೇಶ್ (Jaggesh) ಟ್ವೀಟ್ ಮಾಡಿದ್ದರು. ಆ ಟ್ವೀಟ್ನಲ್ಲಿ ಅಧಮ ಮತ್ತು ನಾಯಿ ಎಂಬ ಪದಬಳಕೆ ಮಾಡಿರುವ ಬಗ್ಗೆ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಸಿ.ಎಸ್. ರಘು (Raghu) ಆಕ್ಷೇಪಿಸಿ ದೂರು ಸಲ್ಲಿಸಿದ್ದಾರೆ. ನಟ ಜಗ್ಗೇಶ್ ವಿರುದ್ಧ ದೂರು ನೀಡಿದ್ದಾರೆ. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಡಾ. ರವೀಂದ್ರನಾಥ್ಗೆ ದೂರು ಸಲ್ಲಿಸಲಾಗಿದೆ.
ಟ್ವಿಟರ್ನಲ್ಲಿ ‘ಅಧಮ, ನಾಯಿ’ ಎಂದು ನನ್ನನ್ನು ನಿಂದಿಸಿದ್ದಾರೆ ಎಂದು ರಘು ದೂರು ಕೊಟ್ಟಿದ್ದಾರೆ. ವಿದ್ಯಾರ್ಥಿಗಳಿಗೆ ಸ್ವೆಟರ್ ಹಂಚಿಕೆಯಲ್ಲಿ ಅಕ್ರಮ ಆರೋಪದ ವಿಚಾರವಾಗಿ ನಟ ಜಗ್ಗೇಶ್ ಟ್ವೀಟ್ ಮಾಡಿದ್ದರು. ಟ್ವೀಟ್ ಈಗ ಮತ್ತೊಂದು ಆರೋಪಕ್ಕೆ ಕಾರಣವಾಗಿದೆ.
ಸ್ಯಾಂಡಲ್ವುಡ್ನ ಖ್ಯಾತ ನಟ ಜಗ್ಗೇಶ್ ಅವರು ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಸಿ.ಎಸ್. ರಘು ವಿರುದ್ಧ ಕಾನೂನು ಹೋರಾಟ ಮಾಡಲು ನಿರ್ಧರಿಸಿದ್ದರು. ಈ ಬಗ್ಗೆ ಅವರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಟ್ವಿಟರ್ ಮೂಲಕ ರಘು ಅವರಿಗೆ ಜಗ್ಗೇಶ್ ಪರ ವಕೀಲರು ನೋಟಿಸ್ ನೀಡಿದ್ದರು. ತಮಗೆ ಸಂಬಂಧವೇ ಇಲ್ಲದ ಪ್ರಕರಣದಲ್ಲಿ ಹೆಸರನ್ನು ಪ್ರಸ್ತಾಪಿಸಿ, ಮಾಧ್ಯಮಗಳಲ್ಲಿ ಮಾನಹಾನಿ ಆಗುವಂತಹ ಹೇಳಿಕೆಗಳನ್ನು ರಘು ನೀಡಿದ್ದಾರೆ ಎಂದಿರುವ ಜಗ್ಗೇಶ್ ಈಗ ಕಾನೂನು ಕ್ರಮಕ್ಕೆ ಮುಂದಾಗಿದ್ದರು. ಈ ಕುರಿತು ಅವರು ಟ್ವಿಟರ್ನಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ.
ಜಗ್ಗೇಶ್ ಸಹೋದರ ಕೋಮಲ್ ಕುಮಾರ್ ಅವರು ಬಿಬಿಎಂಪಿಯಿಂದ ಟೆಂಡರ್ ಪಡೆದು ಅಕ್ರಮ ಎಸಗಿದ್ದಾರೆ ಎಂಬ ಆರೋಪ ಇತ್ತೀಚೆಗೆ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಜಗ್ಗೇಶ್ ಅವರ ಹೆಸರನ್ನೂ ಎಳೆದುತಂದಿರುವುದು ಜಗ್ಗೇಶ್ ಕೋಪಕ್ಕೆ ಕಾರಣ ಆಗಿದೆ. ‘ಮಾನ್ಯ ಡಿಎಸ್ಎಸ್ ರಘು ಅವರಿಗೆ.. ಮಾನ್ಯರೇ ತಾವು ಹಾಗೂ ತಮ್ಮ ವಿಳಾಸ ನನಗೆ ತಿಳಿಯದ ಕಾರಣ ಸಾಮಾಜಿಕ ಜಾಲತಾಣವಾದ ಟ್ವಿಟರ್ನಲ್ಲಿ ತಮಗೆ ತಿಳಿಸುತ್ತಿರುವೆ. ನನ್ನ ಬಗ್ಗೆ ಸತ್ಯಾಸತ್ಯತೆ ಅರಿಯದೆ, ಮಾಧ್ಯಮದ ಮುಂದೆ ನನ್ನ ತೇಜೋವಧೆ ಮಾಡಿದ್ದೀರಿ. ನಾನು ತಪ್ಪು ಮಾಡಿಲ್ಲ. ಮಾಡುವುದೂ ಇಲ್ಲ. ಹಾಗಾಗಿ ನಿಮ್ಮ ಮೇಲೆ ಕಾನೂನು ಪ್ರಕ್ರಿಯೆ. ಉತ್ತರಿಸಿ!’ ಎಂದು ಜಗ್ಗೇಶ್ ಬರೆದುಕೊಂಡಿದ್ದರು.
ನಾನು ಉತ್ತಮ ಎಂದು ಅಧಮರಿಗೆ ಎದೆಬಗೆದು ವ್ಯೆರ್ಥ ತೋರಿಕೆ ಏಕೆಬೇಕು! ಆನೆ ರಾಜಮಾರ್ಗದಲ್ಲಿ ಆಗಲಿ ಗಲ್ಲಿಯಲ್ಲಾಗಲಿ ನಡೆವಾಗ ನಾಯಿ ಬೊಗಳುವುದು ಸಹಜ! ನಮ್ಮಗುಣ ಆನೆಯಂತೆ ಇದ್ದಾಗ ಬೊಗಳುವ ನಾಯಿಗಳ ಸಮಕ್ಕೆ ನಾವು ಇಳಿಯಬಾರದು! ಆಕಸ್ಮಿಕ ಸಿಟ್ಟಿಗೆ ಇಳಿದರೆ ನಮ್ಮ ಆನೆಯ ಸ್ಥಾನ ನಾಯಿಗೆ ಸಮ ಆಗುತ್ತದೆ! ನಾನು ಕಲಿತ ನೀತಿಪಾಠ ಇಂದಿನ ಸಮಾಜದ ನಡೆಗೆ! pic.twitter.com/xbYsrp0dhv
— ನವರಸನಾಯಕ ಜಗ್ಗೇಶ್ (@Jaggesh2) August 25, 2021
ಜಗ್ಗೇಶ್ ಮಾಡಿರುವ ಈ ಮೇಲಿನ ಟ್ವೀಟ್ ಈಗ ಆರೋಪಕ್ಕೆ ಕಾರಣವಾಗಿದೆ. ಈ ಬಗ್ಗೆ ಮುಂದೆ ಏನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಾದುನೋಡಬೇಕಿದೆ.
ಆ ಬಳಿಕ, ‘ಯಾರೋ, ಎಲ್ಲೋ ಮಾಡಿದ ವಿಷಯಕ್ಕೆ ನನ್ನ ಹೆಸರು ಏಕೆ ತಂದಿರಿ? ನೀವು ನ್ಯಾಯಪರ ಹೋರಾಟ ಮಾಡಿ. ನನ್ನ ಬೆಂಬಲವು ಇರುತ್ತದೆ. ಆದರೆ ನನಗೂ ಇದಕ್ಕೂ ಯಾವ ಸಂಬಂಧವಿಲ್ಲ. ಆದರೂ ನನ್ನ ಹೆಸರು ಏಕೆ ತಂದಿರಿ? ಯಾವ ಪುರುಷಾರ್ಥಕ್ಕೆ? ನಾನು ತಪ್ಪು ಮಾಡಲ್ಲ. ತಲೆಯೂ ಬಾಗಿಸುವುದಿಲ್ಲ. ನನ್ನ ಕೋಟ್ಯಾಂತರ ಅಭಿಮಾನಿಗಳಿಗೆ ತಪ್ಪು ಸಂದೇಶ ರವಾನಿಸುವ ಕಾರ್ಯ ಮಾಡಿದ್ದೀರಿ. ಕ್ಷಮೆಯಿಲ್ಲ’ ಎಂದೂ ಜಗ್ಗೇಶ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ನ ಜೊತೆಯಲ್ಲಿ ಅವರು ನೋಟಿಸ್ ಶೇರ್ ಮಾಡಿಕೊಂಡಿದ್ದರು.
ಇದನ್ನೂ ಓದಿ: ಸಹೋದರ ಕೋಮಲ್ ವಿರುದ್ಧ ಕೇಳಿ ಬಂದ ಗಂಭೀರ ಆರೋಪಕ್ಕೆ ಪರೋಕ್ಷವಾಗಿ ಉತ್ತರ ನೀಡಿದರಾ ಜಗ್ಗೇಶ್?