ದರ್ಶನ್ಗೆ ಬೇಡಿಕೆಗೆ ಅಸ್ತು ಎಂದ ಕೋರ್ಟ್, ಆದರೆ ಷರತ್ತುಗಳು ಅನ್ವಯ
ದರ್ಶನ್ ತಮಗೆ ಮತ್ತೆ ಬೆನ್ನು ನೋವು ಶುರುವಾಗಿದ್ದು ಅಗತ್ಯ ಚಿಕಿತ್ಸೆ ಪಡೆಯಲು ಅವಕಾಶ ಮಾಡಿಕೊಡಬೇಕೆಂದು ನ್ಯಾಯಾಲಯದ ಬಳಿ ಮನವಿ ಸಲ್ಲಿಸಿದ್ದರು. ಕಳೆದ ಮೂರು ದಿನಗಳಿಂದಲೂ 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಈ ಬಗ್ಗೆ ವಿಚಾರಣೆ ನಡೆದಿದ್ದು, ಇಂದು (ನವೆಂಬರ್ 07) ಅರ್ಜಿಯ ಕುರಿತು ಆದೇಶ ಹೊರಡಿಸಿದ್ದು, ದರ್ಶನ್ಗೆ ಜೈಲಿನಲ್ಲೇ ಫಿಸಿಯೋಥೆರಪಿ ಚಿಕಿತ್ಸೆ ಪಡೆಯಲು ಕೆಲ ಷರತ್ತುಗಳ ಅನ್ವಯ ಅವಕಾಶ ಮಾಡಿಕೊಡಲಾಗಿದೆ.

ಮುಖ್ಯಾಂಶಗಳು
- ದರ್ಶನ್ ಬೆನ್ನು ನೋವಿಗೆ ಚಿಕಿತ್ಸೆಗೆ ಒಪ್ಪಿಗೆ
- ಜೈಲಿನಲ್ಲೇ ಪಡೆಯಬೇಕು ಫಿಸಿಯೋಥೆರಪಿ ಚಿಕಿತ್ಸೆ
- 59ನೇ ಸಿಸಿಎಚ್ ನ್ಯಾಯಾಲಯ ಆದೇಶ
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ 15 ತಿಂಗಳಿಗೂ ಹೆಚ್ಚು ಸಮಯದಿಂದ ಜೈಲಿನಲ್ಲಿರುವ ನಟ ದರ್ಶನ್ ತಮಗೆ ಮತ್ತೆ ಬೆನ್ನು ನೋವು ಶುರುವಾಗಿದ್ದು ಅಗತ್ಯ ಚಿಕಿತ್ಸೆ ಪಡೆಯಲು ಅವಕಾಶ ಮಾಡಿಕೊಡಬೇಕೆಂದು ನ್ಯಾಯಾಲಯದ ಬಳಿ ಮನವಿ ಸಲ್ಲಿಸಿದ್ದರು. ಕಳೆದ ಮೂರು ದಿನಗಳಿಂದಲೂ 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಈ ಬಗ್ಗೆ ವಿಚಾರಣೆ ನಡೆದಿದ್ದು, ಇಂದು (ನವೆಂಬರ್ 07) ಅರ್ಜಿಯ ಕುರಿತು ಆದೇಶ ಹೊರಡಿಸಿದ್ದು, ದರ್ಶನ್ಗೆ ಜೈಲಿನಲ್ಲೇ ಫಿಸಿಯೋಥೆರಪಿ ಚಿಕಿತ್ಸೆ ಪಡೆಯಲು ಕೆಲ ಷರತ್ತುಗಳ ಅನ್ವಯ ಅವಕಾಶ ಮಾಡಿಕೊಡಲಾಗಿದೆ.
ದರ್ಶನ್ ಅವರು ಫಿಸಿಯೋಥೆರಪಿಗಾಗಿ ಹೊರಗಿನ ಆಸ್ಪತ್ರೆ ಮೂಲಕ ಅಲ್ಲದೆ ಜೈಲಿನಲ್ಲೇ ಫಿಸಿಯೋಥೆರಪಿ ಚಿಕಿತ್ಸೆ ಪಡೆಯಲು ಅನುಮತಿಯನ್ನು ನೀಡಲಾಗಿದೆ. ಫಿಸಿಯೋಥೆರಪಿ ಹಾಗೂ ಬೆನ್ನು ನೋವಿಗೆ ಸಂಬಂಧಿಸಿದ ಇತರೆ ಚಿಕಿತ್ಸೆಗಳನ್ನು ಸಹ ದರ್ಶನ್ ಅವರು ಜೈಲಿನ ಆವರಣದಲ್ಲಿಯೇ ಪಡೆಯಬಹುದಾಗಿದೆ. ಇದಕ್ಕೆ ಸೂಕ್ತ ವ್ಯವಸ್ಥೆ ಮಾಡುವಂತೆ ನ್ಯಾಯಾಲಯವು ಜೈಲಧಿಕಾರಿಗಳಿಗೆ ಸೂಚನೆ ನೀಡಿದೆ.
2024ರಲ್ಲಿ ಮೊದಲ ಬಾರಿ ದರ್ಶನ್ ಬಂಧನವಾದ ಕೆಲ ತಿಂಗಳುಗಳ ಬಳಿಕ ದರ್ಶನ್, ತಮಗೆ ಬೆನ್ನು ನೋವಿದ್ದು, ಅಗತ್ಯ ಚಿಕಿತ್ಸೆಯ ಅಗತ್ಯವಿದೆ ಎಂದು ಮನವಿ ಮಾಡಿದ್ದರು. ಆಗ ವೈದ್ಯರು ನೀಡಿದ್ದ ವರದಿಯ ಪ್ರಕಾರ, ದರ್ಶನ್ ಅವರ ಎಲ್4 ಮತ್ತು ಎಲ್5ನಲ್ಲಿ ಸಮಸ್ಯೆ ಇದ್ದು, ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಅವರ ಕಾಲು ಬಲಹೀನಗೊಳ್ಳಲಿದೆ ಎಂದಿದ್ದರು. ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಸಹ ಆಗ ದರ್ಶನ್ ಪರ ವಕೀಲರು ವಾದಿಸಿದ್ದರು. ಬಳಿಕ ದರ್ಶನ್ ಅವರಿಗೆ ಜಾಮೀನು ದೊರಕಿತು.
ಇದನ್ನೂ ಓದಿ:ರೇಣುಕಾ ಸ್ವಾಮಿ ತಾಯಿ ಪ್ರತಿಕೂಲ ಸಾಕ್ಷಿ? ಕೋರ್ಟ್ನಲ್ಲಿ ನಡೆದಿದ್ದೇನು?
ಈಗಲೂ ಸಹ ಕೆಲ ದಿನಗಳ ಹಿಂದೆ ದರ್ಶನ್ ಅವರು ತಮಗೆ ಬೆನ್ನು ನೋವು ಮರುಕಳಿಸಿದ್ದು, ಚಿಕಿತ್ಸೆಯ ಅಗತ್ಯವಿದೆ ಎಂದಿದ್ದರು. ದರ್ಶನ್ ಪರ ವಾದ ಮಂಡಿಸಿದ್ದ ವಕೀಲ ಹಷ್ಮತ್ ಪಾಷಾ, ‘ದರ್ಶನ್ ಕಳೆದ 15 ತಿಂಗಳುಗಳಿಂದ ಜೈಲಿನಲ್ಲಿದ್ದು, ನೆಲದ ಮೇಲೆ ಹಾಸಿಗೆಯಲ್ಲಿ ಮಲಗುತ್ತಿರುವ ಕಾರಣ ಹಾಗೂ ಚಳಿಗಾಲದ ಕಾರಣದಿಂದಾಗಿ ಅವರಿಗೆ ಬೆನ್ನು ನೋವು ಪುನರಾವರ್ತಿಸಿದೆ. ಅವರಿಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ನೀಡಬೇಕು’ ಎಂದು ವಾದಿಸಿದ್ದರು.
ಆದರೆ ಎಸ್ಪಿಪಿ ಅವರು, ದರ್ಶನ್ಗೆ ಕಳೆದ ಬಾರಿ ಬೆನ್ನು ನೋವು ಬಂದಾಗ ನಡೆದಿದ್ದನ್ನು ವಿವರಿಸಿ, ‘ಕಳೆದ ಬಾರಿ ಇವರು ಬೆನ್ನು ನೋವಿನ ಕಾರಣ ನೀಡಿ ಜಾಮೀನು ಪಡೆದಿದ್ದರು. ಆದರೆ ಆಗ ಚಿಕಿತ್ಸೆ ಪಡೆಯುವ ಬದಲಿಗೆ ಕಾರ್ಯಕ್ರಮಗಳಲ್ಲಿ ಭಾಗಿ ಆದರು, ಸಿನಿಮಾ ಚಿತ್ರೀಕರಣಗಳಲ್ಲಿ ಭಾಗಿ ಆದರು. ಅದನ್ನು ಗಮನದಲ್ಲಿಟ್ಟುಕೊಂಡು ಆದೇಶ ನೀಡಬೇಕು’ ಎಂದಿದ್ದರು. ಅದರಂತೆ ಈಗ ದರ್ಶನ್ ಅವರಿಗೆ ಜೈಲಿನಲ್ಲೇ ಚಿಕಿತ್ಸೆ ನೀಡುವಂತೆ ನ್ಯಾಯಾಲಯದ ಆದೇಶಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




