ಕೋರ್ಟ್ ವಿಚಾರಣೆ ಮುಗಿಸಿ ಆಸ್ಪತ್ರೆಗೆ ಮರಳಿದ ದರ್ಶನ್; ಡಿಸ್ಚಾರ್ಜ್ ಯಾವಾಗ?
ನಟ ದರ್ಶನ್ ಅವರು ಕೋರ್ಟ್ ವಿಚಾರಣೆ ಮುಗಿಸಿ ಮನೆಗೆ ತೆರಳಬಹುದು ಎಂಬ ಕಾರಣದಿಂದ ಆರ್ಆರ್ ನಗರದ ನಿವಾಸದ ಎದುರು ಅಭಿಮಾನಿಗಳು ಜಮಾಯಿಸಿದ್ದರು. ಆದರೆ ದರ್ಶನ್ ಅವರು ನೇರವಾಗಿ ಬಿಜಿಎಸ್ ಆಸ್ಪತ್ರೆಗೆ ಮರಳಿದ್ದಾರೆ. ಬೆನ್ನು ನೋವಿನ ಕಾರಣದಿಂದ ಅವರಿಗೆ ಇನ್ನೂ ಚಿಕಿತ್ಸೆ ನೀಡಲಾಗುತ್ತಿದೆ. ಕೋರ್ಟ್‌ನಲ್ಲಿ ಕೂಡ ಅವರು ನಿಂತುಕೊಳ್ಳಲು ಕಷ್ಟಪಡುತ್ತಿದ್ದರು.
ನಟ ದರ್ಶನ್ ಅವರು ಇಂದು (ಡಿಸೆಂಬರ್ 16) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಅವರು ಕೆಂಗೇರಿಯ ಆಸ್ಪತ್ರೆಯಿಂದ ಹೊರಗೆ ಬಂದಾಗ ಮನೆಗೆ ತೆರಳಬಹುದು ಎಂದು ಊಹಿಸಲಾಗಿತ್ತು. ಆದರೆ ಹಾಗಾಗಲಿಲ್ಲ. ಆಸ್ಪತ್ರೆಯಿಂದ ನೇರವಾಗಿ ಸೆಷನ್ಸ್ ಕೋರ್ಟ್ಗೆ ತೆರಳಿದ ದರ್ಶನ್ ಅವರು ಜಡ್ಜ್ ಮುಂದೆ ಹಾಜರಾಗಿ ಸಹಿ ಮಾಡಿದರು. ಜಾಮೀನು ಮತ್ತು ಶ್ಯೂರಿಟಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಮುಗಿಸಿ ಅವರು ಮತ್ತೆ ಬಿಜಿಎಸ್ ಆಸ್ಪತ್ರೆಗೆ ವಾಪಸ್ಸಾಗಿದ್ದಾರೆ. ಇನ್ನೂ ಅವರಿಗೆ ಶಸ್ತ್ರ ಚಿಕಿತ್ಸೆ ಆಗಿಲ್ಲ. ಡಿಸೆಂಬರ್ 18 ಅಥವಾ 19ರಂದು ಅವರು ಡಿಸ್ಚಾರ್ಜ್ ಆಗಿ ಮನೆಗೆ ಮರಳುವ ಸಾಧ್ಯತೆ ಇದೆ.
ಸೆಷನ್ಸ್ ಕೋರ್ಟ್‌ನಲ್ಲಿ 1 ಲಕ್ಷ ರೂಪಾಯಿ ಜಾಮೀನು ಬಾಂಡ್ಗೆ ದರ್ಶನ್ ಸಹಿ ಮಾಡಿದ್ದಾರೆ. ಬೆನ್ನು ನೋವು ಇರುವ ಕಾರಣ ಕುಂಟುತ್ತಲೇ ಜಡ್ಜ್ಗೆ ಕೈಮುಗಿದು ದರ್ಶನ್ ತೆರಳಿದ್ದಾರೆ. ದರ್ಶನ್ ಅವರನ್ನು ನೋಡಲು ಕೋರ್ಟ್ ಗೇಟ್ ಬಳಿ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಬಳಿ ಪೊಲೀಸ್ ಬಂದೋಬಸ್ತ್ ಮಾಡಿದ್ದರು.
ಪಾಸ್ ಪೋರ್ಟ್ ಹಿಂಪಡೆಯುವ ಅರ್ಜಿಗೂ ದರ್ಶನ್ ಅವರು ಸಹಿ ಹಾಕಿದ್ದಾರೆ. ಮಧ್ಯಂತರ ಜಾಮೀನು ವೇಳೆ ಪಾಸ್ ಪೋರ್ಟ್ ಸರಂಡರ್ ಮಾಡುವಂತೆ ಷರತ್ತು ಇತ್ತು. ಆದರೆ ರೆಗ್ಯುಲರ್ ಜಾಮೀನು ವೇಳೆ ಈ ಷರತ್ತು ಇಲ್ಲ. ಹೀಗಾಗಿ ಪಾಸ್ ಪೋರ್ಟ್ ಹಿಂತಿರುಗಿಸಲು ಕೋರ್ಟ್ ಸಮ್ಮತಿ ನೀಡಿದೆ.
ಪೊಲೀಸರ ಮುಂದಿನ ಕ್ರಮ: ದರ್ಶನ್ ಸೇರಿ ಇತರೆ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ. ಆದರೆ ಈ ಜಾಮೀನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲು ಪೊಲೀಸರು ತೀರ್ಮಾನಿಸಿದ್ದಾರೆ. ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲು ಬೆಂಗಳೂರು ಪೊಲೀಸರ ನಿರ್ಧರಿಸಿದ್ದಾರೆ. ಕಾನೂನು ಸಲಹೆ ಪಡೆದು ಗೃಹ ಇಲಾಖೆಗೆ ಪೊಲೀಸರಿಂದ ಪತ್ರ ಬರೆಯಲಾಗಿದೆ. ಮೇಲ್ಮನವಿ ಅರ್ಜಿ ಸಲ್ಲಿಸಲು ಅನುಮತಿಗಾಗಿ ಗೃಹ ಇಲಾಖೆಗೆ ಪತ್ರ ಬರೆದಿದ್ದು, ದರ್ಶನ್ ಸೇರಿ ಇತರೆ ಆರೋಪಿಗಳ ವಿರುದ್ಧ ಅರ್ಜಿ ಸಲ್ಲಿಸಲು ಸಿದ್ಧತೆ ನಡೆದಿದೆ.
ಇದನ್ನೂ ಓದಿ: ಶ್ಯೂರಿಟಿಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆ ಪೂರ್ತಿಗೊಳಿಸಲು ದರ್ಶನ್ ಕೋರ್ಟ್ ಬಂದಿದ್ದರು: ದರ್ಶನ್ ವಕೀಲ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆಗಿರುವ ಪವಿತ್ರಾ ಗೌಡಗೆ ಮನೀಶ್ ಎಂಬುವವರಿಂದ ಶ್ಯೂರಿಟಿ ಕೊಡಿಸಲಾಗಿದೆ. ಚಾಮರಾಜಪೇಟೆಯ ಆಸ್ತಿ ಪತ್ರದೊಂದಿಗೆ ಪರಿಚಯಸ್ಥ ಮನೀಶ್ ಅವರು ಶ್ಯೂರಿಟಿ ನೀಡಿದ್ದಾರೆ. ಮತ್ತೊಬ್ಬ ಮಹಿಳೆಯಿಂದಲೂ ಪವಿತ್ರಾ ಗೌಡಗೆ ಶ್ಯೂರಿಟಿ ನೀಡಿಲಾಗಿದೆ. ಆರೋಪಿ ಪ್ರದೋಶ್‌ಗೆ ಪತ್ನಿಯಿಂದ ಶ್ಯೂರಿಟಿ ಸಲ್ಲಿಕೆ ಆಗಿದೆ. ಆರೋಪಿಗಳಾದ ಜಗದೀಶ್ ಹಾಗೂ ಅನುಕುಮಾರ್ ಇನ್ನೂ ಶ್ಯೂರಿಟಿಗಳು ಸಿಗದೇ ಪರದಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.