ದರ್ಶನ್ ಸಿನಿಮಾ ಬಗ್ಗೆ ವಿಜಯಲಕ್ಷ್ಮಿ ಪೋಸ್ಟ್, ಬಿಡುಗಡೆಯ ಸೂಚನೆಯಾ?
ದರ್ಶನ್ ತೂಗುದೀಪ ನಟನೆಯ ಹಳೆಯ ಸಿನಿಮಾದ ಮರು ಬಿಡುಗಡೆ ಬಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪೋಸ್ಟ್ ಹಂಚಿಕೊಂಡಿದ್ದಾರೆ. ಪೋಸ್ಟ್ ಜೊತೆಗೆ ಹಂಚಿಕೊಂಡಿರುವ ಸಂದೇಶ, ಅಭಿಮಾನಿಗಳಿಗೆ ದರ್ಶನ್ ಬಿಡುಗಡೆ ಬಗ್ಗೆ ಕೊಟ್ಟಿರುವ ಸೂಚನೆಯಾ? ಎಂಬ ಅನುಮಾನ ಮೂಡಿದೆ.
![ದರ್ಶನ್ ಸಿನಿಮಾ ಬಗ್ಗೆ ವಿಜಯಲಕ್ಷ್ಮಿ ಪೋಸ್ಟ್, ಬಿಡುಗಡೆಯ ಸೂಚನೆಯಾ?](https://images.tv9kannada.com/wp-content/uploads/2024/10/navagraha.jpg?w=1280)
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿ ಇಂದಿಗೆ ಸರಿಯಾಗಿ ನಾಲ್ಕು ತಿಂಗಳಾಗಿದೆ. ಜೂನ್ 11 ರಂದು ದರ್ಶನ್ ಬಂಧನವಾಗಿತ್ತು. ದರ್ಶನ್ ಜಾಮೀನಿಗೆ ಅರ್ಜಿ ಹಾಕಲಾಗಿದ್ದು, ವಿಚಾರಣೆ ಮುಗಿದಿದ್ದು, ಸೋಮವಾರಕ್ಕೆ ಆದೇಶ ಕಾಯ್ದಿರಿಸಲಾಗಿದೆ. ಸೋಮವಾರ ದರ್ಶನ್ ಗೆ ಜಾಮೀನು ದೊರಕುವ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು. ಇದರ ನಡುವೆ ದರ್ಶನ್ ಪತ್ನಿ ವಿಜಯಲಕ್ಷ್ಮಿ, ದರ್ಶನ್ರ ಹಳೆಯ ಸಿನಿಮಾ ಒಂದರ ಪೋಸ್ಟ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಇದು ದರ್ಶನ್ ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಕೊಟ್ಟಿರುವ ಸೂಚನೆ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಬಿಂಬಿತವಾಗುತ್ತಿದೆ.
‘ನವಗ್ರಹ’ ಸಿನಿಮಾ ದರ್ಶನ್ ವೃತ್ತಿ ಜೀವನದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು. ಈ ಸಿನಿಮಾದ ಪೋಸ್ಟರ್ ಅನ್ನು ವಿಜಯಲಕ್ಷ್ಮಿ ಹಂಚಿಕೊಂಡಿದ್ದಾರೆ. ದಸರಾ ಸಂದರ್ಭದಲ್ಲಿ ನಡೆವ ಘಟನೆಯೊಂದರ ಕತೆ ಹೊಂದಿರುವ ಈ ಸಿನಿಮಾ ಆದಷ್ಟು ಶೀಘ್ರದಲ್ಲಿ ಮರು ಬಿಡುಗಡೆ ಆಗಲಿದೆ. ಇದೇ ವಿಷಯವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ವಿಜಯಲಕ್ಷ್ಮಿ. ‘ನವಗ್ರಹ’ ಸಿನಿಮಾದ ಪೋಸ್ಟರ್ ಹಂಚಿಕೊಂಡಿರುವ ವಿಜಯಲಕ್ಷ್ಮಿ, ಆದಷ್ಟು ಬೇಗ ಈ ಸಿನಿಮಾ ಮರು ಬಿಡುಗಡೆ ಆಗಲಿದೆ ಎಂದಿರುವ ಜೊತೆಗೆ, ‘ಪ್ರೀತಿಯ ದರ್ಶನ್ರ ಸೆಲೆಬ್ರಿಟಿಗಳೆ, ಎಲ್ಲರ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ‘ನವಗ್ರಹ’ ಸಿನಿಮಾ ಆದಷ್ಟು ಬೇಗ ಮರು ಬಿಡುಗಡೆ ಆಗಲಿದೆ. ಈ ಬಾರಿ ಸಿನಿಮಾ ನೋಡುವ ಅನುಭವ ಇನ್ನಷ್ಟು ಭಿನ್ನವಾಗಿರಲಿದೆ. ‘ನವಗ್ರಹ’ ಸಿನಿಮಾವನ್ನು ನಿಮ್ಮ ಸನಿಹದ ಚಿತ್ರಮಂದಿರದಲ್ಲಿ ವೀಕ್ಷಿಸಲು ಸಜ್ಜಾಗಿ’ ಎಂದಿದ್ದಾರೆ.
ಇದನ್ನೂ ಓದಿ:ದರ್ಶನ್ ಪರ ವಕೀಲರ ವಾದಕ್ಕೆ, ಎಸ್ಪಿಪಿ ಪ್ರಸನ್ನ ಪ್ರತಿವಾದ ಹೀಗಿತ್ತು
ಮುಂದುವರೆದು, ‘ಏನೇ ಆಗಲಿ ಕೊನೆಯಲ್ಲಿ ಕೆಟ್ಟದ್ದು ಅಳಿದು ಹೋಗುತ್ತದೆ, ಒಳ್ಳೆತನಕ್ಕೆ ಜಯವಾಗುತ್ತದೆ ಎಂಬುದನ್ನು ತೋರಿಸಿಕೊಟ್ಟ ದಿನವಿದು (ದಸರಾ) ಸದಾ ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳೋಣ, ಆ ಚಾಮುಂಡೇಶ್ವರಿ ದೇವಿ ಎಲ್ಲರಿಗೂ ಆಶೀರ್ವಾದ ನೀಡಲಿ’ ಎಂದಿದ್ದಾರೆ ವಿಜಯಲಕ್ಷ್ಮಿ. ದರ್ಶನ್ಗೆ ಸೋಮವಾರ ಜಾಮೀನು ಸಿಗಲಿದೆ, ದರ್ಶನ್ ಜೈಲಿನಿಂದ ಹೊರಗೆ ಬರಲಿದ್ದಾರೆ ಎಂಬುದನ್ನು ಹೀಗೆ ಸೂಚ್ಯವಾಗಿ ವಿಜಯಲಕ್ಷ್ಮಿ ಹೇಳಿದ್ದಾರೆಂದು ದರ್ಶನ್ ಅಭಿಮಾನಿಗಳು ಅರ್ಥ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುತ್ತಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಎರಡನೇ ಆರೋಪಿಯಾಗಿದ್ದು, ಪ್ರಸ್ತುತ ಬಳ್ಳಾರಿ ಜೈಲಿನಲ್ಲಿ ಸಮಯ ದೂಡುತ್ತಿದ್ದಾರೆ. ಜೈಲಿನಲ್ಲಿ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಜಾಮೀನಿಗೆ ಅರ್ಜಿ ಹಾಕಿದ್ದು, ಅರ್ಜಿಯ ವಿಚಾರಣೆ ಗುರುವಾರವಷ್ಟೆ ಅಂತ್ಯಗೊಂಡಿದೆ. ದರ್ಶನ್ ಪರವಾಗಿ ರಾಜ್ಯದ ಜನಪ್ರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದ್ದಾರೆ. ವಾದ, ಪ್ರತಿವಾದ ಆಲಿಸಿರುವ ನ್ಯಾಯಾಧೀಶರು ಅರ್ಜಿಯ ತೀರ್ಪನ್ನು ಸೋಮವಾರ ಪ್ರಕಟಿಸಲಿದ್ದಾರೆ. ಅಂದು ದರ್ಶನ್ಗೆ ಜಾಮೀನು ಸಿಗಲಿದೆಯೇ? ಅಥವಾ ಅರ್ಜಿ ನಿರಾಕರಣೆ ಆಗಲಿದೆಯೇ ಎಂದು ತಿಳಿಯಲಿದೆ. ಒಂದೊಮ್ಮೆ ಜಾಮೀನು ನಿರಾಕರಣೆ ಆದರೆ ದರ್ಶನ್ ಪರ ವಕೀಲರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ