‘ಕೊಟ್ಟ ಮಾತನ್ನು ಉಳಿಸಿಕೊಂಡ್ರಿ’; ನಮ್ರತಾಗೆ ಕಿಚ್ಚನ ಚಪ್ಪಾಳೆ ಕೊಟ್ಟು ಪ್ರತಾಪ್ನ ಕಾಲೆಳೆದ ಸುದೀಪ್
ನಮ್ರತಾಗೆ ಕಿಚ್ಚನ ಚಪ್ಪಾಳೆ ಕೊಡಿಸುವುದಾಗಿ ಡ್ರೋನ್ ಪ್ರತಾಪ್ ಹೇಳಿದ್ದರು. ಆ ಮಾತನ್ನು ಅವರು ಉಳಿಸಿಕೊಂಡಿದ್ದಾರೆ! ಅಲ್ಲಿ ಡ್ರೋನ್ ಪ್ರತಾಪ್ ಅವರ ಕೊಡುಗೆ ಇದೆ ಎಂದು ಹೇಳಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಕಿಚ್ಚ ಕಾಲೆಳೆದಿದ್ದಾರೆ.
ಡ್ರೋನ್ ಪ್ರತಾಪ್ (Drone Prathap) ಅವರ ಆಟದ ಲೆಕ್ಕಾಚಾರವನ್ನು ಯಾರೂ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಅವರು ಆಡುತ್ತಿರುವ ರೀತಿ ಬೇರೆಯದೇ ರೀತಿಯಲ್ಲಿ ಇದೆ. ಅವರು ಯಾರ ತಂಡವನ್ನೂ ಸೇರುವುದಿಲ್ಲ. ತಮ್ಮ ತಂಡಕ್ಕೆ ಸೇರಿಕೊಂಡವರು ಹೆಚ್ಚು ಕೂಗಾಡಬಾರದು, ಜಗಳಕ್ಕೆ ಹೋಗಬಾರದು ಎಂದು ನಿರೀಕ್ಷಿಸುತ್ತಾರೆ. ಈ ಮೊದಲು ನಮ್ರತಾಗೆ (Namratha Gowda) ಉತ್ತಮ ಹಾಗೂ ಕಿಚ್ಚನ ಚಪ್ಪಾಳೆ (Kicchana Chappale) ಕೊಡಿಸುವುದಾಗಿ ಪ್ರತಾಪ್ ಹೇಳಿದ್ದರು. ಈ ಮಾತನ್ನು ಅವರು ಉಳಿಸಿಕೊಂಡಿದ್ದಾರೆ! ಇದೆಂಥ ಕಾಕತಾಳೀಯ ಎಂದು ಜನರು ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.
ನಮ್ರತಾ ಗೌಡ ಅವರು ತಮ್ಮನ್ನು ತಾವು ಸೀಮೀತ ಮಾಡಿಕೊಂಡಿದ್ದರು. ಸ್ನೇಹಿತ್ ಗೌಡ ಹಾಗೂ ವಿನಯ್ ಗೌಡ ಜೊತೆ ಉತ್ತಮ ಸ್ನೇಹಿತ ಬೆಳೆಸಿಕೊಂಡು ಅವರ ಜೊತೆ ಮಾತ್ರ ಹೆಚ್ಚು ಕಾಣಿಸಿಕೊಳ್ಳುತ್ತಿದ್ದರು. ಚೌಕಟ್ಟು ದಾಟಿ ಹೊರಗೆ ಬಂದಿರಲಿಲ್ಲ. ಈ ವಾರ ಕಂಫರ್ಟ್ ಜೋನ್ನ ಬಿಟ್ಟು ಹೊರಗೆ ಬರುವ ನಿರ್ಧಾರವನ್ನು ಈ ವಾರ ಮಾಡಿದ್ದರು. ಈ ವಾರ ನಮ್ರತಾ ಅಚ್ಚರಿ ಎಂಬಂತೆ ಡ್ರೋನ್ ಪ್ರತಾಪ್ ಗ್ಯಾಂಗ್ ಸೇರಿದ್ದರು. ‘ಅವರು ಹೊಸ ನಮ್ರತಾನ ಹೊರ ಜಗತ್ತಿಗೆ ತೋರಿಸುತ್ತೇನೆ ಎಂದು ಮಾತು ಕೊಟ್ಟಿದ್ದಾರೆ. ಹೀಗಾಗಿ, ನಾನು ಈ ತಂಡಕ್ಕೆ ಸೇರುತ್ತಿದ್ದೇನೆ’ ಎಂದಿದ್ದರು ನಮ್ರತಾ.
ಇದನ್ನೂ ಓದಿ: 3ನೇ ಸ್ಥಾನಕ್ಕೆ ಕುಸಿದ ಡ್ರೋನ್ ಪ್ರತಾಪ್; ನಂಬರ್ ಒನ್ ಯಾರು?
ಆದರೆ, ಅಲ್ಲಾಗಿದ್ದೇ ಬೇರೆ. ಡ್ರೋನ್ ಪ್ರತಾಪ್ ಮಾಡಿದ ತಪ್ಪು ಲೆಕ್ಕಾಚಾರದಿಂದ ತಂಡ ಸೋತಿತು. ಹೀಗಾಗಿ ಒಬ್ಬರನ್ನು ಕ್ಯಾಪ್ಟನ್ಸಿ ಓಟದಿಂದ ಹೊರಗೆ ಇಡಬೇಕಾದ ಪರಿಸ್ಥಿತಿ ಬಂದೊದಗಿತು. ಆಗ ಮೊದಲ ಆಯ್ಕೆ ಅವರು ಮಾಡಿದ್ದು ನಮ್ರತಾ ಅವರನ್ನು. ಇದು ನಮ್ರತಾಗೆ ತೀವ್ರ ಬೇಸರ ತರಿಸಿತು. ಅಷ್ಟೇ ಅಲ್ಲ, ಬೆಡ್ರೂಂಗೆ ಹೋಗಿ ಗಳಗಳನೆ ಅವರು ಅತ್ತರು. ‘ಉತ್ತಮ ಕೊಡಿಸುತ್ತೀನಿ, ಕಿಚ್ಚನ ಚಪ್ಪಾಳೆ ಕೊಡಿಸುತ್ತೇನೆ ಎಂದು ಹೇಳಿದ್ನಲ್ಲ ಅವನು. ಇದೇನಾ ಕೊಡಿಸೋದು’ ಎಂದು ಅವರು ಕಣ್ಣೀರು ಹಾಕಿದ್ದರು.
ಆ ಬಳಿಕ ಎದುರಾಳಿ ತಂಡದ ತನಿಷಾ ಗಾಯಗೊಂಡಿದ್ದರಿಂದ ಅವರ ಪರವಾಗಿ ಒಬ್ಬರು ಕ್ಯಾಪ್ಟನ್ಸಿ ಆಟ ಆಡಬೇಕಾಯಿತು. ಆಗ ನಮ್ರತಾ ಅವರು ತಾವು ಆಡುವುದಾಗಿ ಹೇಳಿದರು. ಅಷ್ಟೇ ಅಲ್ಲ ಕೊನೆಯವರಿಗೆ ಆಟ ಆಡಿದರು. ಆದರೆ, ಕ್ಯಾಪ್ಟನ್ಸಿ ಗೆಲ್ಲೋಕೆ ಸಾಧ್ಯವಾಗಿಲ್ಲ. ಈ ಮೂಲಕ ಅವರು ಎಲ್ಲರಿಂದ ಭೇಷ್ ಎನಿಸಿಕೊಂಡರು. ‘ಬೇರೆಯವರ ಪರವಾಗಿ ಇಷ್ಟು ಕಷ್ಟಪಟ್ಟು ಆಡುವುದು ಇದೆಯಲ್ಲ, ಅದು ಗ್ರೇಟ್’ ಎಂದು ಮನೆಯವರು ಕೊಂಡಾಡಿದರು.
ಇದನ್ನೂ ಓದಿ: ‘ಕಂಡವರ ಮಕ್ಕಳ ಬಾವಿಗೆ ತಳ್ಳಿ ಆಟ ನೋಡಬೇಡಿ’; ಟ್ರೋಲ್ ಮಾಡಿದವರಿಗೆ ಪ್ರತಾಪ್ ಎಚ್ಚರಿಕೆ
ಈ ವಾರದ ಆಟ ನೋಡಿ ನಮ್ರತಾಗೆ ಮನೆಯ ಬಹುತೇಕರು ಉತ್ತಮ ನೀಡಿದರು. ಹೀಗಾಗಿ, ಅವರಿಗೆ ಮೆಡಲ್ ಸಿಕ್ಕಿತು. ವೀಕೆಂಡ್ನಲ್ಲಿ ಕಿಚ್ಚನ ಚಪ್ಪಾಳೆ ಕೂಡ ಸಿಕ್ಕಿತು. ‘ನಮ್ರತಾ ಅವರೇ ನೀವು ಈ ಬಾರಿ ಕಂಫರ್ಟ್ ಜೋನ್ನಿಂದ ಹೊರಗೆ ಬಂದು ಆಡಿದ್ದೀರಿ. ಈ ರೀತಿಯ ಆಟವನ್ನು ವೀಕ್ಷಕರು ನಿಮ್ಮಿಂದ ನಿರೀಕ್ಷಿಸುತ್ತಿರುವುದು. ಈ ವಾರದ ಕಿಚ್ಚನ ಚಪ್ಪಾಳೆ ನಿಮಗೆ. ಈ ರೀತಿಯ ಎಷ್ಟೋ ವಾರಗಳು ಸುಮ್ಮನೆ ಕಳೆದು ಹೋಗಿವೆ. ಈ ಆಟವನ್ನು ಮುಂದುವರಿಸಿಕೊಂಡು ಹೋಗಿ’ ಎಂದರು ಸುದೀಪ್. ಇದಕ್ಕೆ ನಮ್ರತಾ ಧನ್ಯವಾದ ಅರ್ಪಿಸಿದರು.
ಡ್ರೋನ್ ಪ್ರತಾಪ್ ಜೊತೆ ಮಾತನಾಡುವಾಗ ಸುದೀಪ್ ಅವರು , ‘ನಮ್ರತಾಗೆ ಕಿಚ್ಚನ ಚಪ್ಪಾಳೆ ಕೊಡಿಸ್ತೀನಿ ಎಂದಿದ್ರಲ್ಲ ಅದು ಎಲ್ಲಿ ಸಿಗುತ್ತೆ ಹೇಳಿ’ ಎಂದರು. ‘ಅವರನ್ನು ಪ್ರೂವ್ ಮಾಡಿಕೊಳ್ಳೋಕೆ ಅವಕಾಶ ಕೊಡ್ತೀನಿ ಎಂದಿದ್ದು ಸರ್’ ಎಂದು ಸ್ಪಷ್ಟನೆ ನೀಡಿದರು ಡ್ರೋನ್ ಪ್ರತಾಪ್. ‘ನಿಮ್ಮ ಮಾತನ್ನು ನೀವು ಉಳಿಸಿಕೊಂಡ್ರಲ್ಲ’ ಎಂದು ಸುದೀಪ್ ನಕ್ಕರು. ಈ ಮಾತಿಗೆ ಡ್ರೋನ್ ಪ್ರತಾಪ್ ಕೂಡ ಮನಸಾರೆ ನಕ್ಕರು. ವೀಕೆಂಡ್ ಎಪಿಸೋಡ್ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಾಣುತ್ತಿದೆ. ವಾರದ ಎಪಿಸೋಡ್ಗಳು ರಾತ್ರಿ 9:30ಕ್ಕೆ ಪ್ರಸಾರ ಕಾಣುತ್ತವೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವೀಕ್ಷಿಸಬಹುದು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.