Rapido: ರ‍್ಯಾಪಿಡೋ ಚಾಲಕನ ವಿರುದ್ಧ ಸುಳ್ಳು ಲೈಂಗಿಕ ಕಿರುಕುಳ ಕೇಸ್ ಹಾಕಿದ ನಟಿ; ತನಿಖೆಯಿಂದ ಸತ್ಯ ಬಯಲು
Bengaluru Crime: ರ‍್ಯಾಪಿಡೋ ಚಾಲಕನಿಂದ ಲೈಂಗಿಕ ದೌರ್ಜನ್ಯ ಆಗಿದೆ ಎಂದು ಯುವತಿ ದೂರು ನೀಡಿದ್ದರು. ದೇಹದ ಅಂಗಾಂಗಗಳನ್ನು ಮುಟ್ಟಿ, ಅಸಭ್ಯವಾಗಿ ನಡೆದುಕೊಂಡ ಎಂದು ಅವರು ಆರೋಪಿಸಿದ್ದರು.
ನಟಿ, ಮಾಡೆಲ್ ಹಾಗೂ ಡಬ್ಬಿಂಗ್ ಆರ್ಟಿಸ್ಟ್ (Dubbing Artist) ಆಗಿ ಕೆಲಸ ಮಾಡುತ್ತಿರುವ ಯುವತಿಯೊಬ್ಬರು ಲೈಂಗಿಕ ದೌರ್ಜನ್ಯದ ಸುಳ್ಳು ದೂರು ನೀಡಿ ಸಿಕ್ಕಿ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾತ್ರಿ ಸಮಯದಲ್ಲಿ ಓಡಾಡಲು ಜನರು ಭಯಪಡುವಂತಹ ವಾತಾವರಣ ಇದೆ. ಅದರ ನಡುವೆಯೂ ಸಾವಿರಾರು ಕ್ಯಾಬ್, ಟ್ಯಾಕ್ಸಿ ಚಾಲಕರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ರ‍್ಯಾಪಿಡೋ ಬೈಕ್ ಚಾಲಕನ (Rapido Driver) ಮೇಲೆ ಸುಳ್ಳು ಲೈಂಗಿಕ ದೌರ್ಜನ್ಯದ (Molestation) ಕೇಸ್ ದಾಖಲಿಸಿರುವುದು ತಿಳಿದುಬಂದಿದೆ. ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಯುವತಿ ಸುಳ್ಳು ದೂರು ನೀಡಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಏನಿದು ಘಟನೆ?
ಅಕ್ಟೋಬರ್ 30ರ ರಾತ್ರಿ 10.30ರ ಸುಮಾರಿಗೆ ತಮ್ಮ ಮೇಲೆ ರ‍್ಯಾಪಿಡೋ ಚಾಲಕನಿಂದ ಲೈಂಗಿಕ ದೌರ್ಜನ್ಯ ಆಗಿದೆ ಎಂದು ಯುವತಿಯು ದೂರು ನೀಡಿದ್ದರು. ರ‍್ಯಾಪಿಡೋ ಬುಕ್ ಮಾಡಿಕೊಂಡು ಬರುವಾಗ ಚಾಲಕನು ತನ್ನ ದೇಹದ ಅಂಗಾಂಗಗಳನ್ನು ಮುಟ್ಟಿ, ಅಸಭ್ಯವಾಗಿ ನಡೆದುಕೊಂಡ ಎಂದು ಆ ದೂರಿನಲ್ಲಿ ಯುವತಿ ತಿಳಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದಾಗ ಬೇರೊಂದು ಕಹಾನಿ ತೆರೆದುಕೊಂಡಿದೆ.
ಅಸಲಿಗೆ ಅಲ್ಲಿ ನಡೆದಿದ್ದು ಏನು?
ಯುವತಿ ನೀಡಿರುವುದು ಸುಳ್ಳು ದೂರು ಎಂದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ. ದೂರಿನಲ್ಲಿ ಯುವತಿ ಹೇಳಿದ ರೀತಿ ಆ ದಿನ ಏನೂ ನಡೆದಿರಲಿಲ್ಲ. ಅವರು ರ‍್ಯಾಪಿಡೋ ಬೈಕ್ ಬುಕ್ ಮಾಡಿದ್ದು ನಿಜ. ಆದರೆ ಕೆಲವೇ ಹೊತ್ತಿನಲ್ಲಿ ಯುವತಿಯೇ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಕ್ಯಾನ್ಸಲ್ ಆಗಿದ್ದರಿಂದ ರ‍್ಯಾಪಿಡೋ ಚಾಲಕ ಆ ಚಾಗಕ್ಕೆ ಬರಲೇ ಇಲ್ಲ ಎಂಬುದು ಪೊಲೀಸರಿಗೆ ಗೊತ್ತಾಗಿದೆ. ಹಾಗಾಗಿ ಚಾಲಕನನ್ನು ಬಂಧಿಸಲಿಲ್ಲ.
ಪೊಲೀಸರು ಹೇಳೋದೇನು?
ಈ ಘಟನೆಗೆ ಸಂಬಂಧಿಸಿದಂತೆ ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಅವರು ಹೇಳಿಕೆ ನೀಡಿದ್ದಾರೆ. ‘ಮಹಿಳೆ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದಾರೆ. ಆ ವ್ಯಕ್ತಿ ಅಲ್ಲಿಗೆ ಬಂದಿದ್ದಕ್ಕೆ ಯಾವುದೇ ಪುರಾವೆ ಇಲ್ಲ. ಹಾಗಾಗಿ ಇದು ಸುಳ್ಳು ಕೇಸ್ ಅನ್ನೋದು ಗೊತ್ತಾಗಿದೆ. ಅವರು ಯಾವ ಕಾರಣಕ್ಕೆ ಸುಳ್ಳು ದೂರು ದಾಖಲಿಸಿದ್ರೋ ಗೊತ್ತಿಲ್ಲ’ ಎಂದು ಅವರು ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.