SIIMA: ಮಧ್ಯರಾತ್ರಿ 3 ಗಂಟೆವರೆಗೆ ‘ಸೈಮಾ’ ಪಾರ್ಟಿ ಮಾಡಿದ ಸೆಲೆಬ್ರಿಟಿಗಳು; ಎಫ್ಐಆರ್ ದಾಖಲು
SIIMA Awards | FIR: ರಾತ್ರಿ ಒಂದು ಗಂಟೆಗೆ ಪಾರ್ಟಿ ಮುಗಿಸುವಂತೆ ಆಯೋಜಕರಿಗೆ ಪೊಲೀಸರು ಸೂಚನೆ ನೀಡಿದರು. ಆದರೆ ಅದನ್ನು ಪಾಲಿಸದೇ 3.30ರವರೆಗೂ ‘ಸೈಮಾ’ ಪಾರ್ಟಿ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕೆಲವೇ ದಿನಗಳ ಹಿಂದೆ ಬೆಂಗಳೂರಿನಲ್ಲಿ ‘ಸೈಮಾ’ ಅವಾರ್ಡ್ಸ್ (SIIMA Awards 2022) ಕಾರ್ಯಕ್ರಮ ನಡೆಯಿತು. 10ನೇ ವರ್ಷದ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ‘ಸೈಮಾ’ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜನೆಗೊಂಡಿದ್ದು ವಿಶೇಷ. ಆದರೆ ಈ ಕಾರ್ಯಕ್ರಮದ ಬಳಿಕ ಪ್ರತಿಷ್ಠಿತ ಸ್ಟಾರ್ ಹೋಟೆಲ್ನಲ್ಲಿ ಪಾರ್ಟಿ (SIIMA Awards Party) ಮಾಡಿದ ಅನೇಕ ಸೆಲೆಬ್ರಿಟಿಗಳಿಗೆ ಈಗ ಕಾನೂನಿನ ಸಂಕಷ್ಟ ಎದುರಾಗಿದೆ. ಸೂಕ್ತ ನಿಯಮಗಳನ್ನು ಪಾಲಿಸದೇ ಪಾರ್ಟಿ ನಡೆದಿದೆ ಎಂಬ ಆರೋಪ ಎದುರಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ (Cubbon Park Police Station) ಕೇಸ್ ದಾಖಲಾಗಿದೆ. ಪಾರ್ಟಿ ಆಯೋಜಕರು ಮತ್ತು ಹೋಟೆಲ್ ಮ್ಯಾನೇಜರ್ಗೆ ನೋಟಿಸ್ ನೀಡಲಾಗಿದೆ. ಆ ಮೂಲಕ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ.
ಚಿತ್ರರಂಗದ ಎಂದರೆ ಬಣ್ಣದ ಲೋಕ. ಅಲ್ಲಿ, ಪಾರ್ಟಿಗಳು ಸಹಜ. ಝಗಮಗಿಸುವ ವೇದಿಕೆ ಕಾರ್ಯಕ್ರಮ ಮುಗಿದ ಬಳಿಕ ಔತಣ ಕೂಟಗಳು ನಡೆಯುತ್ತವೆ. ‘ಸೈಮಾ’ ಸಮಾರಂಭ ಮುಗಿದ ನಂತರವೂ ಈ ರೀತಿ ಪಾರ್ಟಿ ಆಯೋಜನೆಗೊಂಡಿತ್ತು. ಅದರಲ್ಲಿ ಕನ್ನಡ ಚಿತ್ರರಂಗದ ಅನೇಕ ನಟ-ನಟಿಯರು, ತಂತ್ರಜ್ಞರು ಮಾತ್ರವಲ್ಲದೇ ಹಿಂದಿ ಮತ್ತು ತೆಲುಗು ಚಿತ್ರರಂಗದ ಸೆಲೆಬ್ರಿಟಿಗಳು ಕೂಡ ಭಾಗಿ ಆಗಿದ್ದರು.
ನಸುಕಿನವರೆಗೂ ನಡೆದಿತ್ತು ‘ಸೈಮಾ’ ಪಾರ್ಟಿ:
ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯಲ್ಲಿ ಇರುವ ಐಷಾರಾಮಿ ಹೋಟೆಲ್ನಲ್ಲಿ ಸೆಪ್ಟೆಂಬರ್ 12ರಂದು ‘ಸೈಮಾ’ ಪಾರ್ಟಿ ನಡೆಯುತ್ತಿತ್ತು. ಈ ವೇಳೆ ಕಾನೂನು ಪಾಲನೆಯ ಪರಿಶೀಲನೆಗಾಗಿ ಪೊಲೀಸರು ರಾತ್ರಿ 12 ಗಂಟೆ ಸಮಯದಲ್ಲಿ ಹೋಟೆಲ್ಗೆ ಭೇಟಿ ನೀಡಿದ್ದರು. ಒಂದು ಗಂಟೆಗೆ ಪಾರ್ಟಿ ಮುಗಿಸುವಂತೆ ಆಯೋಜಕರಿಗೆ ಪೊಲೀಸರು ಸೂಚನೆ ನೀಡಿದರು. ಆದರೆ ಅದನ್ನು ಪಾಲಿಸದೇ ನಸುಕಿನ 3.30ರವರೆಗೂ ಪಾರ್ಟಿ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅದ್ದೂರಿ ಸೈಮಾ ಸಮಾರಂಭ:
ಚಿತ್ರರಂಗದಲ್ಲಿ ಸೈಮಾ ಅವಾರ್ಡ್ಸ್ಗೆ ಮನ್ನಣೆ ಇದೆ. ಕಳೆದ 10 ವರ್ಷಗಳಿಂದ ಬಹಳ ಅದ್ದೂರಿಯಾಗಿ ಈ ಕಾರ್ಯಕ್ರಮವನ್ನು ಮಾಡಿಕೊಂಡು ಬರಲಾಗುತ್ತಿದೆ. ಇದರಲ್ಲಿ ದಕ್ಷಿಣ ಭಾರತದ ಸಿನಿಮಾಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಇಷ್ಟು ವರ್ಷ ಹೊರರಾಜ್ಯದಲ್ಲಿ ಹಾಗೂ ವಿದೇಶದಲ್ಲಿ ಈ ಸಮಾರಂಭ ಮಾಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸೈಮಾ ಕಾರ್ಯಕ್ರಮ ನಡೆಯಿತು. ಆದರೆ ಕಾರ್ಯಕ್ರಮದ ನಂತರ ಜರುಗಿದ ಪಾರ್ಟಿಯಲ್ಲಿ ನಿಯಮ ಪಾಲನೆ ಮಾಡಿಲ್ಲ ಎಂಬ ಕಾರಣಕ್ಕೆ ಕಾನೂನಿನ ಸಂಕಷ್ಟ ಎದುರಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:14 am, Wed, 21 September 22