ಬಂತು ‘ಹುಲಿಬೀರ’ ಚಿತ್ರದ ಹೊಸ ಹಾಡು; ಇದು ಉತ್ತರ ಕರ್ನಾಟಕ ಮಂದಿಯ ಸಿನಿಮಾ
ವಿ. ಮನೋಹರ್ ಹಾಗೂ ಗುರುರಾಜ್ ಅವರು ‘ಹುಲಿಬೀರ’ ಚಿತ್ರದ ‘ಬಂದಾನ ನೋಡ’ ಹಾಡನ್ನು ಬಿಡುಗಡೆ ಮಾಡಿದರು. ‘ಈ ಹಾಡನ್ನು ವೀರ್ ಸಮರ್ಥ್ ಅವರು ಸಮರ್ಥವಾಗಿ ಕಂಪೋಸ್ ಮಾಡಿದ್ದಾರೆ. ಹಾಡಿನ ಸಾಹಿತ್ಯವನ್ನು ನಿರ್ದೇಶಕರು ಅರ್ಥಗರ್ಭಿತವಾಗಿ ಬರೆದಿದ್ದಾರೆ. ಪ್ರಜ್ಞಾ ಆಕರ್ಷಕವಾಗಿ ಹಾಡಿದ್ದಾರೆ. ಚಿತ್ರಕ್ಕೆ ಒಳ್ಳೆಯದಾಗಲಿ’ ಎಂದು ವಿ. ಮನೋಹರ್ ಹಾರೈಸಿದರು.

ಉತ್ತರ ಕರ್ನಾಟಕ ಭಾಗದ ಕಥೆ ಹೇಳುವ ಸಿನಿಮಾಗಳು ಅಪರೂಪ ಎಂಬಂತಾಗಿವೆ. ಆ ಸಾಲಿಗೆ ‘ಹುಲಿಬೀರ’ ಸಿನಿಮಾ ಸೇರ್ಪಡೆ ಆಗುತ್ತಿದೆ. ಈ ಹಿಂದೆ ‘ಮದರಂಗಿ’, ‘ರಂಗ್ ಬಿರಂಗಿ’ ಸಿನಿಮಾಗಳನ್ನು ನಿರ್ದೇಶಿಸಿದ್ದ ಮದರಂಗಿ ಮಲ್ಲಿಕಾರ್ಜುನ ಅವರು ಈಗ ‘ಹುಲಿಬೀರ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಬಹುತೇಕ ಉತ್ತರ ಕರ್ನಾಟಕದವರೇ ಸೇರಿಕೊಂಡು ಮಾಡಿರುವ ಈ ಸಿನಿಮಾದಲ್ಲಿ ಆ ಭಾಗದ ಸೊಗಡು ಇದೆ. ಈಗಾಗಲೇ 2 ಹಾಡುಗಳನ್ನು ಬಿಡುಗಡೆ ಮಾಡಿದ್ದ ಚಿತ್ರತಂಡ ಈಗ ಮೂರನೇ ಹಾಡನ್ನು ರಿಲೀಸ್ ಮಾಡಿದೆ.
‘ಯರ್ರಾಬಿರ್ರಿ’ ಖ್ಯಾತಿಯ ನಟ ಅಂಜನ್ ಅವರು ‘ಹುಲಿಬೀರ’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ಚೈತ್ರಾ ತೋಟದ, ವನು ಪಾಟೀಲ್ ಮತ್ತು ಅಂಜಲಿ ಅವರು ಈ ಚಿತ್ರದಲ್ಲಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ‘ಸಾಯಿಸ್ಟಾರ್ ಸಿನಿಮಾಸ್’ ಮೂಲಕ ದಾವಲ ಸಾಹೇಬ ಹುಣಶೀಮರದ, ಅಶೋಕ್ ಎನ್ (ತುರುವೇಕೆರೆ) ಮತ್ತು ಸುಜಾತ ಗಿರೀಶ್ ಅವರು ‘ಹುಲಿಬೀರ’ ಸಿನಿಮಾವನ್ನು ನಿರ್ಮಿಸಿದ್ದಾರೆ.
ಮದರಂಗಿ ಮಲ್ಲಿಕಾರ್ಜುನ ಅವರ ನಿರ್ದೇಶನದಲ್ಲಿ ಬರುತ್ತಿರುವ 5ನೇ ಸಿನಿಮಾ ಇದು. ‘ಹುಲಿಬೀರ ನಾಯಕನ ನಿಕ್‌ನೇಮ್. ಹಳ್ಳಿಗಳಲ್ಲಿ ಧೈರ್ಯವಂತ ಯುವಕರನ್ನು ಈ ರೀತಿ ಕರೆಯುತ್ತಾರೆ. ಈಗಾಗಲೇ ರಿಲೀಸಾಗಿರುವ ಎರಡು ಹಾಡುಗಳನ್ನು ಎಲ್ಲರೂ ಮೆಚ್ಚಿದ್ದಾರೆ. 15 ದಿನಗಳಲ್ಲಿ ಟ್ರೇಲರ್ ಲಾಂಚ್ ಮಾಡಿ ಅಕ್ಟೋಬರ್ 2ರಂದು ಸಿನಿಮಾವನ್ನು ತೆರೆಗೆ ತರುತ್ತಿದ್ದೇವೆ. ಕಾಮಿಡಿ, ಸೆಂಟಿಮೆಂಟ್, ಮನರಂಜನೆಯ ಜತೆಗೆ ಉತ್ತಮ ಸಂದೇಶವೂ ಚಿತ್ರದಲ್ಲಿದೆ’ ಎಂದು ಅವರು ಹೇಳಿದ್ದಾರೆ.
ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವುದಕ್ಕೆ ನಟ ಅಂಜನ್ ಅವರಿಗೆ ಖುಷಿ ಇದೆ. ‘ಜಿಗರಿ ದೋಸ್ತ ಹಾಡಿಗೆ ಉತ್ತಮ ಪ್ರತಿಕ್ರಿಯೆ ಬಂತು. ಹುಟ್ಟಿಬಂದೆ ಹಾಡನ್ನು ಹಿರಿಯರೆಲ್ಲ ಇಷ್ಟಪಟ್ಟರು. ಈಗ ಮತ್ತೊಂದು ಸಾಂಗ್ ರಿಲೀಸ್ ಮಾಡಿದ್ದೇವೆ. ಸದ್ಯದಲ್ಲೇ ಟ್ರೇಲರ್ ಕೂಡ ಹೊರಬರಲಿದೆ. ಯುವಕರೆಲ್ಲ ನಗರಗಳಿಗೆ ಹೋದಾಗ ವಯಸ್ಸಾದವರು, ಬಡವರಷ್ಟೇ ಹಳ್ಳಿಗಳಲ್ಲಿ ಉಳಿಯುತ್ತಾರೆ. ಆಗ ನಮ್ಮ ಹಳ್ಳಿಗಳು ಉಳಿಯುವುದು ಹೇಗೆ? ಮೊದಲು ನಮ್ಮ ಊರು, ಹಳ್ಳಿಗಳನ್ನು ಕಾಪಾಡಬೇಕು ಎಂಬ ಸಂದೇಶ ಈ ಚಿತ್ರದಲ್ಲಿದೆ’ ಎಂದು ಅಂಜನ್ ಹೇಳಿದ್ದಾರೆ.
ಇದನ್ನೂ ಓದಿ: ಒಟಿಟಿ ಸಂಸ್ಥೆಯಿಂದ ರಿಜೆಕ್ಟ್ ಆಗಿತ್ತು ‘ಹನುಮಾನ್ ಅಂಶ್’ ಸಿನಿಮಾ: ಕಹಿ ಅನುಭವ ತೆರೆದಿಟ್ಟ ನಿರ್ದೇಶಕ
ಸಂಗೀತ ನಿರ್ದೇಶಕ ವೀರ್ ಸಮರ್ಥ್ ಅವರಿಗೆ ಈ ಸಿನಿಮಾ ಮೇಲೆ ಸಖತ್ ಭರವಸೆ ಇದೆ. ನಿರ್ದೇಶಕರ ಜೊತೆ, ಶಿವು ಬೆರ್ಗಿ, ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ ಬರೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕರಾದ ದಾವಲ್ ಸಾಹೇಬ ಹುಣಶೀಮರದ, ಎ. ಅಶೋಕ್ ಹಾಗೂ ಸುಜಾತ ಗಿರೀಶ್ ಅವರು ಮಾತನಾಡಿ ‘ನಮ್ಮ ಸಿನಿಮಾಗೆ ಎಲ್ಲರ ಬೆಂಬಲ ಬೇಕು. ಗಾಂಧಿ ಜಯಂತಿಗೆ ಸಿನಿಮಾ ಬಿಡುಗಡೆ ಮಾಡುತ್ತೇವೆ’ ಎಂದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




