AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುರುಪ್ರಸಾದ್ ಬಗ್ಗೆ ಹೇಳಿಕೆ: ನಿಂದಿಸಿದವರಿಗೆ ಪ್ರತ್ಯುತ್ತರ ಕೊಟ್ಟ ನಟ ಜಗ್ಗೇಶ್

ನಿರ್ದೇಶಕ ಗುರುಪ್ರಸಾದ್ ಅವರ ನಿಧನದ ಬಳಿಕ, ನಟ ಜಗ್ಗೇಶ್ ಅವರ ಹೇಳಿಕೆಗಳಿಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಕೆಲವರು ಅವರನ್ನು ನಿಂದಿಸಿದ್ದಾರೆ. ಆದರೆ, ಜಗ್ಗೇಶ್ ಅವರು "ಆನೆ ನಡೆಯುವಾಗ ನಾಯಿಗಳು ಬೊಗಳುತ್ತವೆ" ಎಂಬ ಮಾತಿನ ಮೂಲಕ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ.

ಗುರುಪ್ರಸಾದ್ ಬಗ್ಗೆ ಹೇಳಿಕೆ: ನಿಂದಿಸಿದವರಿಗೆ ಪ್ರತ್ಯುತ್ತರ ಕೊಟ್ಟ ನಟ ಜಗ್ಗೇಶ್
ಮಂಜುನಾಥ ಸಿ.
|

Updated on: Nov 06, 2024 | 5:44 PM

Share

‘ಮಠ, ‘ಎದ್ದೇಳು ಮಂಜುನಾಥ’ ಇನ್ನೂ ಕೆಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಗುರುಪ್ರಸಾದ್ ನಿಧನದ ಬಳಿಕ ನಟ, ಬಿಜೆಪಿ ಮುಖಂಡ ಜಗ್ಗೇಶ್ ಆಡಿದ ಮಾತುಗಳ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಕೆಲವರು ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಸಹ ಮಾಡಿದ್ದರು. ಆದರೆ ಅಂಥಹವರಿಗೆಲ್ಲ ದಿಟ್ಟ ಪ್ರತ್ಯುತ್ತರವನ್ನು ನಟ ಜಗ್ಗೇಶ್ ಸಾಮಾಜಿಕ ಜಾಲತಾಣದ ಮೂಲಕವೇ ನೀಡಿದ್ದಾರೆ. ನಿಂದಕರನ್ನು ಪರೋಕ್ಷವಾಗಿ ನಾಯಿಗೆ ಹೋಲಿಸಿರುವ ಜಗ್ಗೇಶ್, ‘ಆನೆ ನಡೆಯುವಾಗ ನಾಯಿಗಳು ಬೊಗಳುತ್ತವೆ, ಅದಕ್ಕೆಲ್ಲ ಚಿಂತಿಸಬಾರದು’ ಎಂದಿದ್ದಾರೆ.

ಗುರುಪ್ರಸಾದ್ ನಿಧನದ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದ ಜಗ್ಗೇಶ್, ಗುರುಪ್ರಸಾದ್ ವ್ಯಕ್ತಿತ್ವ ಹಾಗೂ ಅವರಿಗೆ ಇದ್ದ ಅಶಿಸ್ತಿನ ಬಗ್ಗೆ ಅಸಮಾಧಾನವನ್ನು ಮಾಧ್ಯಮಗಳ ಮುಂದೆ ವ್ಯಕ್ತಪಡಿಸಿದ್ದರು. ಗುರುಪ್ರಸಾದ್​ಗೆ ಮದ್ಯದ ಚಟ, ಇತರರ ಸಲಹೆ ಸ್ವೀಕರಿಸದೆ ತೋರಿತ್ತಿದ್ದ ಅಹಂ ಇನ್ನಿತರೆಗಳ ಬಗ್ಗೆ ಜಗ್ಗೇಶ್ ಮಾತನಾಡಿದ್ದರು. ಗುರುಪ್ರಸಾದ್, ತಮ್ಮೊಂದಿಗೆ ಹಾಗೂ ಇನ್ನು ಕೆಲವು ಚಿತ್ರರಂಗದ ನಟರೊಂದಿಗೆ ನಡೆದುಕೊಂಡಿದ್ದ ರೀತಿಯ ಬಗ್ಗೆ ಜಗ್ಗೇಶ್ ಸನ್ನಿವೇಶ ಸಮೇತ ವಿವರಿಸಿದ್ದರು. ಆದರೆ ಇದಕ್ಕೆ ಕೆಲ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಬಿಗ್​ಬಾಸ್​ನಿಂದ ಜನಪ್ರಿಯತೆ ಗಳಿಸಿರುವ ಲಾಯರ್ ಜಗದೀಶ್, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ಹರಿಬಿಟ್ಟು, ಜಗ್ಗೇಶ್ ಅವರು ಗುರುಪ್ರಸಾದ್ ಬಗ್ಗೆ ಆಡಿರುವ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದರು, ತಮ್ಮದೇ ಶೈಲಿನಲ್ಲಿ ಅವರು ಜಗ್ಗೇಶ್​ಗೆ ‘ಬುದ್ಧಿವಾದ’ ಹೇಳುವ ಯತ್ನ ಮಾಡಿದ್ದರು. ಹುಚ್ಚ ವೆಂಕಟ್ ಸಹ ವಿಡಿಯೋನಲ್ಲಿ ಇದೇ ವಿಷಯವಾಗಿ ಹಿರಿಯ ನಟ ಜಗ್ಗೇಶ್​ ಬಗ್ಗೆ ಮಾತನಾಡಿದ್ದರು.

ಇದನ್ನೂ ಓದಿ:‘ಆನ್​ಲೈನ್ ಗೇಮ್​ನಲ್ಲಿ ಗುರುಪ್ರಸಾದ್ 70 ಲಕ್ಷ ರೂಪಾಯಿ ಕಳೆದುಕೊಂಡಿದ್ದ’: ಜಗ್ಗೇಶ್

ಇದೀಗ ಈ ಬಗ್ಗೆ ಪರೋಕ್ಷ ಪ್ರತಿಕ್ರಿಯೆ ನೀಡಿರುವ ನಟ ಜಗ್ಗೇಶ್, ‘ಆನೆ ನಡೆಯೋವಾಗ ಶ್ವಾನಗಳು ಉಸಿರು ಹೋಗುವಂತೆ ಅರಚುತ್ತದೆ, ಅದಕ್ಕೆ ವೈಜ್ಞಾನಿಕ ಕಾರಣ “ಭಯ”. ಎರಡನೆಯದು ಏನು ನಾವು ನೆಲದಷ್ಟೆ ಹೀಗಿದ್ದೇವೆ ಆನೆ ಮಾತ್ರ, ಮುಗಿಲೆತ್ತರ ಬೆಳದಿದೆ ಎಂಬ ಸಂಕಟ. ತಾತ್ಪಾರ್ಯ: ನಿನ್ನ ಕೆಲಸ ನೀನು ಗಾಂಭೀರ್ಯದಿಂದ ಮಾಡುತ್ತಿರು. ಶ್ವಾನವು ಅವುಗಳ ಕೆಲಸ ಮಾಡದೆ ಬೇರೆ ವಿಧಿಯಿಲ್ಲಾ ಬೊಗಳುತ್ತದೆ. ಆನೆಯಾಗಲು ಯೋಗ ಬೇಕು’ ಎಂದು ಟ್ವೀಟ್ ಮಾಡಿದ್ದಾರೆ.

ನಿರ್ದೇಶಕ ಗುರುಪ್ರಸಾದ್ ಕೆಲ ದಿನಗಳ ಹಿಂದೆ ತಮ್ಮ ಅಪಾರ್ಟ್​ಮೆಂಟ್​ನಲ್ಲಿ ನೇಣು ಬಿಗಿದು ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರು ಸಾಲದ ಬಾಧೆಯಿಂದಾಗಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಪ್ರಾರಂಭಿಸಿದ್ದಾರೆ. ಜಗ್ಗೇಶ್ ನಟನೆಯ ‘ಮಠ’ ಹಾಗೂ ‘ಎದ್ದೇಳು ಮಂಜುನಾಥ’ ಸಿನಿಮಾಗಳನ್ನು ಗುರುಪ್ರಸಾದ್ ನಿರ್ದೇಶಿಸಿದ್ದರು. ಆ ನಂತರ ಇಬ್ಬರೂ ನಡುವೆ ವೈಮನಸ್ಯ ಉಂಟಾಗಿ ದೂರಾಗಿದ್ದರು. ಬಳಿಕ ಇತ್ತೀಚೆಗಷ್ಟೆ ಮತ್ತೆ ಒಟ್ಟಾಗಿ ‘ರಂಗನಾಯಕ’ ಸಿನಿಮಾಕ್ಕೆ ಕೆಲಸ ಮಾಡಿದರು. ಆದರೆ ಆ ಸಿನಿಮಾ ನಿರೀಕ್ಷಿತ ಫಲಿತಾಂಶ ನೀಡಲಿಲ್ಲ. ಬಳಿಕ ಸಿನಿಮಾದಲ್ಲಿ ನಟಿಸಿದ್ದಕ್ಕೆ ಜಗ್ಗೇಶ್ ಕ್ಷಮೆಯನ್ನು ಸಹ ಕೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ