‘ಜಸ್ಟ್ ಪಾಸ್’ ಹುಡುಗರು ಬಹು ನಿರೀಕ್ಷಿತ ಈ ಚಿತ್ರ ಫೆಬ್ರವರಿ 9 ರಂದು ಬಿಡುಗಡೆ
Just Pass: ಕಾಲೇಜು ಹುಡುಗರ ಹುಡುಗಾಟ, ತರ್ಲೆಗಳು, ಪ್ರೀತಿ-ಪ್ರೇಮ, ಸ್ನೇಹ ಇದೆಲ್ಲದರ ನಡುವೆ ನಡೆವ ದುರ್ಘಟನೆ ಅದರಿಂದ ಆಗುವ ಪರಿಣಾಮಗಳು ಇಂಥಹಾ ಕತೆಯನ್ನಿಟ್ಟುಕೊಂಡು ಬರುತ್ತಿದೆ ‘ಜಸ್ಟ್ ಪಾಸ್’ ಸಿನಿಮಾ.
ಜಸ್ಟ್ ಪಾಸ್ (Just Pass) ಆದವರಿಗೆಂದೇ ಒಂದು ಕಾಲೇಜು, ದೇವರಂಥಹಾ ಪ್ರಿನ್ಸಿಪಲ್, ಒಬ್ಬ ಸುಂದರಿ ಲೆಕ್ಚರರ್, ಒಬ್ಬ ಜೊಳ್ಳು ಮೇಷ್ಟ್ರು ಕೆಲವು ಶಿಸ್ತಿನ ಮೇಷ್ಟ್ರುಗಳು ಅಪ್ಪಟ ತರ್ಲೆ ವಿದ್ಯಾರ್ಥಿಗಳು ಹೇಗೋ ಎಲ್ಲವೂ ನಡೆದುಕೊಂಡು ಹೋಗುವಾಗ ನಡೆಯುವ ಒಂದು ದುರ್ಘಟನೆ. ಆ ದುರ್ಘಟನೆ ಆ ಕಾಲೇಜಿನಲ್ಲಿರುವ ಎಲ್ಲರ ಮೇಲೂ ಹೇಗೆ ಪರಿಣಾಮ ಬೀರುತ್ತದೆ. ತರ್ಲೆ ಹುಡುಗರನ್ನು ಹೇಗೆ ಸರಿ ದಾರಿಗೆ ತರುತ್ತದೆ ಎಂಬ ಕತೆಯನ್ನಿಟ್ಟುಕೊಂಡು ಬರುತ್ತಿದೆ ‘ಜಸ್ಟ್ ಪಾಸ್’ ಸಿನಿಮಾ.
ರಾಯ್ಸ್ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ಕೆ.ವಿ.ಶಶಿಧರ್ ನಿರ್ಮಿಸಿರುವ, ಕೆ.ಎಂ.ರಘು ನಿರ್ದೇಶನದಲ್ಲಿ ಶ್ರೀ ಹಾಗೂ ಪ್ರಣತಿ ನಾಯಕ- ನಾಯಕಿಯಾಗಿ ನಟಿಸಿರುವ ‘ಜಸ್ಟ್ ಪಾಸ್’ ಚಿತ್ರ ಆರಂಭದಿಂದಲೂ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಚಿತ್ರದ ಟೀಸರ್, ಟ್ರೇಲರ್ ಹಾಗೂ ಹಾಡುಗಳು ಈಗಾಗಲೇ ಜನಪ್ರಿಯವಾಗಿದೆ. ಬಹು ನಿರೀಕ್ಷಿತ ಈ ಚಿತ್ರ ಫೆಬ್ರವರಿ 9 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಇದನ್ನೂ ಓದಿ:ಬಿಗ್ಬಾಸ್ ಮನೆಯಲ್ಲಿ ಪಾಸ್ ಯಾರು? ಫೇಲ್ ಯಾರು? ಜಸ್ಟ್ ಪಾಸ್ ಆದವರ್ಯಾರು?
ಸಾಮಾನ್ಯವಾಗಿ ಹೆಚ್ಚು ಅಂಕಗಳನ್ನು ತೆಗೆದುಕೊಂಡವರಿಗೆ ಸಾಕಷ್ಟು ಕಾಲೇಜುಗಳಿರುತ್ತದೆ. ವಿಶೇಷವೆಂದರೆ ಈ ಚಿತ್ರದಲ್ಲಿ “ಜಸ್ಟ್ ಪಾಸ್” ಆದವರಿಗೆ ಅಂತಲೇ ಒಂದು ಕಾಲೇಜು ಇದೆ. ಆ ಕಾಲೇಜಿನ ವಿದ್ಯಾರ್ಥಿಗಳ ತರಲೆ, ತಮಾಷೆಗಳನ್ನು ನಿರ್ದೇಶಕ ರಘು ಈ ಚಿತ್ರದಲ್ಲಿ ತೋರಿಸಿದ್ದಾರೆ. ವಿದ್ಯಾರ್ಥಿಗಳಿಗಂತೂ ಅಪ್ಪಟ್ಟ ಮನೋರಂಜನೆಯ ರಸದೌತಣ ಸಿಗುವುದಂತು ಖಚಿತ. ಬರೀ ಇಷ್ಟೇ ಅಲ್ಲ. ಉತ್ತಮ ಸಂದೇಶ ಸಹ ಈ ಚಿತ್ರದಲ್ಲಿದೆ ಎನ್ನುತ್ತಾರೆ ನಿರ್ದೇಶಕರು.
ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನ, ಸುಜಯ್ ಕುಮಾರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಕಲೈ, ಭೂಷಣ್ ನೃತ್ಯ ನಿರ್ದೇಶನ ಹಾಗೂ ಅರ್ಜುನ್ ಅವರ ಸಾಹಸ ನಿರ್ದೇಶನವಿರುವ “ಜಸ್ಟ್ ಪಾಸ್” ಚಿತ್ರಕ್ಕೆ ಕೆ.ಎಂ.ರಘು ಹಾಗೂ ರಘು ನಿಡವಳ್ಳಿ ಸಂಭಾಷಣೆ ಬರೆದಿದ್ದಾರೆ. ಶ್ರೀ, ಪ್ರಣತಿ, ರಂಗಾಯಣರಘು ಸಾಧುಕೋಕಿಲ ಸುಚೇಂದ್ರ ಪ್ರಸಾದ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ, ಗೋವಿಂದೇಗೌಡ, ದಾನಪ್ಪ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ