Shriya Saran: ಚೆನ್ನೈನಲ್ಲೂ ಧೂಳೆಬ್ಬಿಸಲಿದೆ ಕನ್ನಡದ ‘ಕಬ್ಜ’; ಹೊಸ ಹಾಡು ಬಿಡುಗಡೆಗೆ ಸಜ್ಜಾದ ಆರ್. ಚಂದ್ರು
Kabzaa Movie Songs | R Chandru: ಫೆಬ್ರವರಿ 16ರಂದು ‘ಕಬ್ಜ’ ಚಿತ್ರತಂಡ ಚೆನ್ನೈಗೆ ತೆರಳಲಿದೆ. ಅಂದು ಸಂಜೆ ಗ್ರ್ಯಾಂಡ್ ಇವೆಂಟ್ ಮೂಲಕ ಎರಡನೇ ಹಾಡು ರಿಲೀಸ್ ಆಗಲಿದೆ.
ನಿರ್ದೇಶಕ ಆರ್. ಚಂದ್ರು (R Chandru) ಅವರು ‘ಕಬ್ಜ’ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ತೆರೆಕಾಣಿಸಲು ಸಕಲ ತಯಾರಿ ಮಾಡಿಕೊಂಡಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆದ್ದರಿಂದ ದೇಶಾದ್ಯಂತ ಭರ್ಜರಿಯಾಗಿ ಪ್ರಚಾರ ಮಾಡಲಾಗುತ್ತಿದೆ. ಉಪೇಂದ್ರ (Upendra), ಕಿಚ್ಚ ಸುದೀಪ್, ಶ್ರೀಯಾ ಶರಣ್ ಮುಖ್ಯ ಭೂಮಿಕೆ ನಿಭಾಯಿಸಿರುವ ಈ ಚಿತ್ರದ ಬಗ್ಗೆ ಸಿನಿಪ್ರಿಯರಿಗೆ ನಿರೀಕ್ಷೆ ಇದೆ. ದೇಶದ ಪ್ರಮುಖ ನಗರಗಳಲ್ಲಿ ‘ಕಬ್ಜ’ (Kabzaa Movie) ಹಾಡುಗಳನ್ನು ರಿಲೀಸ್ ಮಾಡಲಾಗುತ್ತಿದೆ. ಹೈದರಾಬಾದ್ನಲ್ಲಿ ಟೈಟಲ್ ಟ್ರ್ಯಾಕ್ ಬಿಡುಗಡೆ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈಗ ಚೆನ್ನೈನಲ್ಲೂ ಅದೇ ರೀತಿ ದೊಡ್ಡ ಇವೆಂಟ್ ಮಾಡಿ, ಹೊಸ ಹಾಡು ರಿಲೀಸ್ ಮಾಡಲು ಆರ್. ಚಂದ್ರು ಸಜ್ಜಾಗಿದ್ದಾರೆ.
ಫೆಬ್ರವರಿ 16ರಂದು ಇಡೀ ‘ಕಬ್ಜ’ ತಂಡ ಚೆನ್ನೈಗೆ ತೆರಳಲಿದೆ. ಅಂದು ಸಂಜೆ ಗ್ರ್ಯಾಂಡ್ ಇವೆಂಟ್ ಮೂಲಕ ಎರಡನೇ ಹಾಡು ರಿಲೀಸ್ ಆಗಲಿದೆ. ತಮಿಳು ಚಿತ್ರರಂಗದ ಖ್ಯಾತ ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಹಾಜರಿ ಹಾಕುವ ನಿರೀಕ್ಷೆ ಇದೆ. ಚಿತ್ರದ ನಾಯಕಿ ಶ್ರೀಯಾ ಶರಣ್ ಅವರ ಪಾತ್ರ ಮೇಲೆ ಚಿತ್ರಿತವಾಗಿರುವ ಈ ಹಾಡು ಹೇಗಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಇದನ್ನೂ ಓದಿ: ‘ಕಬ್ಜ’ ಬೆಡಗಿ ಶ್ರೀಯಾ ಶರಣ್ ಸುಂದರ ಫೋಟೋಸ್
ರವಿ ಬಸ್ರೂರು ಅವರು ‘ಕಬ್ಜ’ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಇದು ಈ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ‘ಕೆಜಿಎಫ್: ಚಾಪ್ಟರ್ 2’ ಬಳಿಕ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಬಂತು. ಬಾಲಿವುಡ್ ಸಿನಿಮಾಗಳಿಗೂ ಅವರು ಕೆಲಸ ಮಾಡುತ್ತಿದ್ದಾರೆ. ‘ಕಬ್ಜ’ ಸಿನಿಮಾದ ಶೀರ್ಷಿಕೆ ಗೀತೆ ಈಗಾಗಲೇ ಸೌಂಡು ಮಾಡಿದೆ. ಟೀಸರ್ನಲ್ಲಿನ ಹಿನ್ನೆಲೆ ಸಂಗೀತ ಕೂಡ ಗಮನ ಸೆಳೆದಿದೆ.
#2Days to go for #NamamiVideoSong from #Feb16th on @aanandaaudio YouTube Channel & A Grand event at Chennai at 07:00PM. #Kabzaa #upendra #sudeep @rchandru_movies @anandpandit63 @apmpictures @Alankar_Pandian @RaviBasrur @shivakumarart @RangarajanAish #KabzaaFromMarch17 pic.twitter.com/6AwakHQbvA
— R.Chandru (@rchandru_movies) February 14, 2023
ಶಿಡ್ಲಘಟ್ಟದಲ್ಲಿ ಫೆಬ್ರವರಿ 26ರಂದು ‘ಕಬ್ಜ’ ಆಡಿಯೋ ರಿಲೀಸ್:
ಪುನೀತ್ ರಾಜ್ಕುಮಾರ್ ಜನ್ಮದಿನವಾದ ಮಾರ್ಚ್ 17ರಂದು ವಿಶ್ವಾದ್ಯಂತ ‘ಕಬ್ಜ’ ತೆರೆಕಾಣಲಿದೆ. ಬಿಡುಗಡೆಗೆ ಇನ್ನು ಒಂದು ತಿಂಗಳು ಬಾಕಿ ಇದ್ದು, ಪೂರ್ಣ ಪ್ರಮಾಣದಲ್ಲಿ ಪ್ರಚಾರ ಕಾರ್ಯಗಳು ನಡೆಯುತ್ತಿವೆ. ಫೆಬ್ರವರಿ 26ರಂದು ಶಿಡ್ಲಘಟ್ಟದಲ್ಲಿ ‘ಕಬ್ಜ’ ಆಡಿಯೋ ರಿಲೀಸ್ ಆಗಲಿದೆ. ಅಂದು ಸಂಜೆ 6 ಗಂಟೆಗೆ ಆರಂಭ ಆಗುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾರತೀಯ ಚಿತ್ರರಂಗದ ಹಲವು ದಿಗ್ಗಜ ನಟರಿಗೆ ಆಹ್ವಾನ ನೀಡಲಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿ ಆಗಲಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.