ಆಸ್ಕರ್ ವಿಜೇತ ನಿರ್ಮಾಣ ಸಂಸ್ಥೆ ‘ಕಿಲ್ಜಾಯ್ ಫಿಲ್ಮ್ಸ್’ ಜತೆ ಕೈ ಜೋಡಿಸಿದ ಕನ್ನಡದ ‘ಕೆಂಡ’ ಸಿನಿಮಾ
ಕನ್ನಡ ಸಿನಿಮಾಗಳು ರಾಜ್ಯ, ದೇಶಗಳ ಗಡಿ ದಾಟಿ ಬೆಳೆಯುತ್ತಿವೆ. ಈ ಸಂದರ್ಭದಲ್ಲಿ ‘ಕೆಂಡ’ ಚಿತ್ರವು ‘ಕಿಲ್ಜಾಯ್ ಫಿಲ್ಮ್ಸ್’ ಸಂಸ್ಥೆ ಜೊತೆ ಕೈ ಜೋಡಿಸಿರುವುದು ವಿಶೇಷ. ಈ ಸಂಸ್ಥೆಯ ವ್ಯಾವಹಾರಿಕ ಮಾನದಂಡಗಳು ಕಟ್ಟುನಿಟ್ಟಾಗಿವೆ. ಆ ಮಾನದಂಡಗಳಲ್ಲಿ ನಿರ್ದೇಶಕ ಸಹದೇವ್ ಕೆಲವಡಿ ಅವರು ಪಾಸ್ ಆಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ರೂಪಾ ರಾವ್ (Roopa Rao) ಅವರು ಭರವಸೆಯ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದಾರೆ. ಈಗ ಅವರು ‘ಕೆಂಡ’ ಸಿನಿಮಾ (Kenda Movie) ಮೂಲಕ ನಿರ್ಮಾಪಕಿಯೂ ಆಗಿರುವುದು ತಿಳಿದಿದೆ. ಸಿನಿಮಾಟೋಗ್ರಾಫರ್ ಸಹದೇವ್ ಕೆಲವಡಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರತಂಡದಿಂದ ಒಂದೊಂದೇ ವಿಶೇಷ ಸುದ್ದಿಗಳು ಹೊರಬರುತ್ತಿವೆ. ಪೋಸ್ಟರ್ಗಳ ಮೂಲಕ ಗಮನ ಸೆಳೆದ ‘ಕೆಂಡ’ ಸಿನಿಮಾದ ಜೊತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿದ ‘ಕಿಲ್ಜಾಯ್ ಫಿಲ್ಮ್ಸ್’ ನಿರ್ಮಾಣ ಸಂಸ್ಥೆಯು ಕೈ ಜೋಡಿಸುತ್ತಿದೆ. ಇದರಿಂದಾಗಿ ‘ಕೆಂಡ’ ಸಿನಿಮಾದ ಬಲ ಹೆಚ್ಚಿದಂತಾಗಿದೆ.
‘ಕಿಲ್ಜಾಯ್ ಫಿಲ್ಮ್ಸ್’ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಹೊಂದಿದೆ. ನ್ಯೂಯಾರ್ಕ್ ಮತ್ತು ಬರ್ಲಿನ್ ಮೂಲದ ಈ ಸಂಸ್ಥೆಯು ಆಸ್ಕರ್ ನಂತಹ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಈ ಸಂಸ್ಥೆಯಿಂದ ಅನೇಕ ಪ್ರತಿಭಾನ್ವಿತ ನಿರ್ದೇಶಕರು ಪರಿಚಯಗೊಂಡಿದ್ದಾರೆ. ಈಗ ಈ ಸಂಸ್ಥೆಯು ಕನ್ನಡದ ‘ಕೆಂಡ’ ಸಿನಿಮಾ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ. ಆ ವಿಷಯವನ್ನು ಹೆಮ್ಮೆಯಿಂದ ಘೋಷಿಸಿದೆ.
ಕನ್ನಡ ಸಿನಿಮಾಗಳು ಭಾಷೆ, ರಾಜ್ಯ, ದೇಶಗಳ ಗಡಿ ದಾಟಿ ಬೆಳೆಯುತ್ತಿವೆ. ಈ ಸಂದರ್ಭದಲ್ಲಿ ‘ಕೆಂಡ’ ಚಿತ್ರವು ‘ಕಿಲ್ಜಾಯ್ ಫಿಲ್ಮ್ಸ್’ ಸಂಸ್ಥೆ ಜೊತೆ ಕೈ ಜೋಡಿಸಿರುವುದು ವಿಶೇಷ. ಈ ಸಂಸ್ಥೆಯ ವ್ಯಾವಹಾರಿಕ ಮಾನದಂಡಗಳು ಕಟ್ಟುನಿಟ್ಟಾಗಿವೆ. ಆ ಮಾನದಂಡಗಳಲ್ಲಿ ನಿರ್ದೇಶಕ ಸಹದೇವ್ ಕೆಲವಡಿ ಅವರು ಪಾಸ್ ಆಗಿದ್ದಾರೆ. ಅವರು ಈ ಸಿನಿಮಾವನ್ನು ಕಟ್ಟಿಕೊಟ್ಟಿರುವ ರೀತಿಯು ‘ಕಿಲ್ಜಾಯ್ ಫಿಲ್ಮ್ಸ್’ ಸಂಸ್ಥೆಯವರಿಗೆ ಇಷ್ಟ ಆಗಿದೆ. ಹಾಗಾಗಿ ಚಿತ್ರತಂಡದ ಜೊತೆ ಕೈ ಜೋಡಿಸಿದ್ದಾರೆ.
ಇದನ್ನೂ ಓದಿ: ಗ್ಯಾಂಗ್ಸ್ಟರ್ ಕಥೆಯ ‘ಕೆಂಡ’ ಚಿತ್ರಕ್ಕೆ ಬಂಡವಾಳ ಹೂಡಿದ ‘ಗಂಟುಮೂಟೆ’ ನಿರ್ದೇಶಕಿ ರೂಪಾ ರಾವ್
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಕ್ರಿಯವಾಗಿರುವ ಸಂಸ್ಥೆಯ ಸಹಯೋಗದಿಂದ ‘ಕೆಂಡ’ ಸಿನಿಮಾದ ಹುರುಪು ಹೆಚ್ಚಾಗಿದೆ. ‘ಕಿಲ್ಜಾಯ್ ಫಿಲ್ಮ್ಸ್’ ಸಂಸ್ಥೆಯಿಂದಾಗಿ ಈ ಚಿತ್ರವು ವಿಶ್ವ ಮಟ್ಟದಲ್ಲಿ ಪ್ರೇಕ್ಷಕರ ಗಮನ ಸೆಳೆಯಲು ಸಹಕಾರಿ ಆಗಲಿದೆ. ರೂಪಾ ರಾವ್ ಮತ್ತು ಸಹದೇವ್ ಕೆಲವಡಿ ಅವರು ‘ಅಮೇಯುಕ್ತಿ ಸ್ಟುಡಿಯೋಸ್’ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪ್ರತಿಭಾನ್ವಿತ ಕಲಾವಿದರ ಬಳಗ ಈ ಚಿತ್ರದಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:21 pm, Sun, 7 January 24