ಕರ್ನಾಟಕ ಬಂದ್: ಕನ್ನಡ ಚಿತ್ರರಂಗದ ನೈತಿಕ ಬೆಂಬಲ, ನಿಲ್ಲಲ್ಲ ಚಿತ್ರೀಕರಣ
Karnataka Bandh: ಮಾರ್ಚ್ 22 ರಂದು ಕನ್ನಡಪರ ಸಂಘಟನೆಗಳು ಅಖಂಡ ಕರ್ನಾಟಕ ಬಂದ್ಗೆ ಕರೆ ನೀಡಿವೆ. ಹಲವು ಸಂಘಟನೆಗಳು ಬಂದ್ಗೆ ಬೆಂಬಲ ವ್ಯಕ್ತಪಡಿಸಿವೆ. ಫಿಲಂ ಚೇಂಬರ್ನಲ್ಲಿ ನಡೆದ ಇಂದಿನ ಸಂಭೆಯಲ್ಲಿ, ಚಿತ್ರರಂಗದವೂ ಸಹ ಬಂದ್ಗೆ ಬೆಂಬಲ ನೀಡುವ ಬಗ್ಗೆ ಘೋಸಿಲಾಗಿದೆ. ಆದರೆ ಯಾವುದೇ ಸಿನಿಮಾದ ಚಿತ್ರೀಕರಣ ಬಂದ್ ಮಾಡಲಾಗುತ್ತಿಲ್ಲ.

ಕರ್ನಾಟಕ ರಾಜ್ಯ ಬಂದ್ (Karnataka Bandh) ಮಾರ್ಚ್ 22 ರಂದು ನಡೆಯಲಿದೆ. ಬಂದ್ಗೆ ಈಗಾಗಲೇ ಹಲವಾರು ಸಂಘಟನೆಗಳು ಪ್ರತ್ಯಕ್ಷ, ಪರೋಕ್ಷ ಬೆಂಬಲ ನೀಡಿವೆ. ಚಿತ್ರರಂಗದವರು ಬಂದ್ ಕುರಿತಾಗಿ ಇಂದು (ಮಾರ್ಚ್ 20) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಸಿದ್ದು, ಬಂದ್ಗೆ ನೈತಿಕ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಬಂದ್ಗೆ ಬೆಂಬಲ ಇರಲಿದೆಯಾದರೂ ಸಿನಿಮಾ ಚಿತ್ರೀಕರಣಗಳನ್ನು ನಿಲ್ಲಿಸಲಾಗುತ್ತಿಲ್ಲ. ಚಿತ್ರ ಪ್ರದರ್ಶಕರು ಸಹ ಬಂದ್ಗೆ ಬೆಂಬಲ ನೀಡಿದ್ದು, ಮಾರ್ಚ್ 22 ರಂದು ಬೆಳಿಗಿನ ಆಟವನ್ನು ಪ್ರದರ್ಶಿಸುತ್ತಿಲ್ಲ ಬದಲಿಗೆ ಮಧ್ಯಾಹ್ನದ ಬಳಿಕ ಸಿನಿಮಾ ಪ್ರದರ್ಶನಗಳು ಎಂದಿನಂತೆ ನಡೆಯಲಿವೆ.
ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ನಿರ್ಮಾಪಕರ ಸಂಘ, ಪ್ರದರ್ಶಕರ ಸಂಘ, ವಿತರಕರ ಸಂಘ, ಕಾರ್ಮಿಕರ ಒಕ್ಕೂಟ, ನಿರ್ದೇಶಕರ ಸಂಘ, ಸಂಕಲನ ಕರಾರ ಸಂಘ, ಛಾಯಾಗ್ರಾಹಕರ ಸಂಘ ಭಾಗಿ ಆಗಿದ್ದವು. ಸಭೆಯ ಬಳಿಕ ಮಾತನಾಡಿದ ಅಧ್ಯಕ್ಷ ನರಸಿಂಹಲು, ‘ರಾಜಣ್ಣ ಅವರ ಕಾಲದಿಂದ ನೆಲ ಜಲ ಭಾಷೆಗೆ ಚಿತ್ರರಂಗದವರು ಬೆಂಬಲ ಕೊಡುತ್ತಾ ಬಂದಿದ್ದೇವೆ. ಈಗ ರಾಜ್ಯದ ಹಿತದೃಷ್ಟಿಯಿಂದ ಮಾಡುತ್ತಿರುವ ಬಂದ್ಗೆ ಬೆಂಬಲ ಇದೆ. ಆದರೆ ಚಿತ್ರೀಕರಣ ನಿಲ್ಲಿಸಲು ಸಾಧ್ಯವಿಲ್ಲ. ಈಗಾಗಲೇ ಮುಂಚಿತವಾಗಿ ಯೋಜನೆ ಹಾಕಿಕೊಂಡು ಚಿತ್ರೀಕರಣ ಮಾಡುತ್ತಿರುತ್ತಾರೆ ಹಾಗಾಗಿ ಚಿತ್ರೀಕರಣ ನಿಲ್ಲಿಸುವುದಿಲ್ಲ’ ಎಂದಿದ್ದಾರೆ.
‘ಸಿನಿಮಾ ಶೂಟಿಂಗ್ಗೆ ಯಾವುದೇ ಕಡಿವಾಣ ಇರುವುದಿಲ್ಲ. ಆದರೆ ಯಾವುದೇ ಸಿನಿಮಾ ತಂಡಗಳು ಅಥವಾ ನಿರ್ಮಾಪಕರು ಸ್ವಯಂ ಪ್ರೇರಿತವಾಗಿ ಚಿತ್ರೀಕರಣ ಬಂದ್ ಮಾಡಿದರೆ ಅದಕ್ಕೆ ಸ್ವಾಗತ ಇದೆ. ಕಲಾವಿದರ ಸಂಘದವರು ಸಭೆಯಲ್ಲಿ ಭಾಗಿ ಆಗಲು ಆಗಿಲ್ಲ. ಆದರೆ ನಮ್ಮ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ. ನಿರ್ಮಾಪಕರ ಸಂಘ ಸಹ ನೈತಿಕ ಬೆಂಬಲವನ್ನು ನೀಡಿದೆ’ ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ: ಮಾರ್ಚ್ 22ಕ್ಕೆ ಕರ್ನಾಟಕ ಬಂದ್, ಈ ಕೆಲಸ ಮೊದಲೇ ಮುಗಿಸಿಕೊಳ್ಳಿ
ಪ್ರದರ್ಶಕ ಸಂಘದ ಕಾರ್ಯದರ್ಶಿ ಕುಶಾಲ್ ಚಂದ್ರಶೇಖರ್ ಮಾತನಾಡಿ, ‘ಬೆಳಗಿನ ಶೋವನ್ನ ಬಂದ್ ಮಾಡಿ ಮಧ್ಯಾಹ್ನದಿಂದ ಎಂದಿನಂತೆ ಶೋ ನಡೆಯುತ್ತೆ, ಏಕಾಏಕಿ ಇಡೀ ದಿನ ಪ್ರದರ್ಶನ ನಿಲ್ಲಿಸಿದ್ರೆ ನಿರ್ಮಾಪಕರಿಗೆ ಹೊಡೆತ ಬಿಳುತ್ತೆ, ಹೀಗಾಗಿ ಒಂದು ಶೋ ಬಂದ್ ಮಾಡುವ ಮೂಲಕ ಕರ್ನಾಟಕ ಬಂದ್ ಗೆ ಪ್ರದರ್ಶಕರ ವಲಯದಿಂದ ಬೆಂಬಲ ಸೂಚಿಸುತ್ತೇವೆ. ಮಧ್ಯಾಹ್ನದ ಬಳಿಕ ಎಂದಿನಂತೆ ಸಿನಿಮಾ ಶೋಗಳನ್ನು ಪ್ರದರ್ಶನ ಮಾಡಲಾಗುತ್ತದೆ’ ಎಂದಿದ್ದಾರೆ.
ಮಾರ್ಚ್ 22 ರಂದು ಅಖಂಡ ಕರ್ನಾಟಕ ಬಂದ್ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿವೆ. ಹಲವಾರು ಸಂಘ-ಸಂಸ್ಥೆಗಳು ಈ ಬಂದ್ಗೆ ಬೆಂಬಲ ನೀಡಿವೆ. ಇತ್ತೀಚೆಗೆ ಬೆಳಗಾವಿಯಲ್ಲಿ ಕೆಎಸ್ಆರ್ಟಿಸಿ ನೌಕರನ ಮೇಲೆ ಮಾಡಲಾದ ಮರಾಠಿ ಪುಂಢರು ಮಾಡಿದ ಹಲ್ಲೆ ವಿರೋಧಿಸಿ, ರಾಜ್ಯದ ಹಿತರಕ್ಷಣೆಗೆ ಒತ್ತಾಯಿಸಿ ಈ ಬಂದ್ಗೆ ಕರೆ ನೀಡಲಾಗಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ ನೌಕರರ ಸಂಘ, ಓಲಾ, ಊಬರ್, ಆಟೋ ಚಾಲಕರ ಸಂಘ, ಸೇರಿದಂತೆ ಇನ್ನೂ ಕೆಲವು ಸಂಘಟನೆಗಳು ಈ ಬಂದ್ಗೆ ಬೆಂಬಲ ನೀಡುತ್ತಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:26 pm, Thu, 20 March 25