Kantara: ಕಾಂತಾರ ಚಿತ್ರತಂಡಕ್ಕೆ ಶಾಕ್ ನೀಡಿದ ಕೋರ್ಟ್, ವರಾಹ ರೂಪಂ ಹಾಡು ಬಳಕೆಗೆ ತಡೆ
Kantara: ವರಾಹ ರೂಪಂ ಹಾಡನ್ನು ಬಳಸದಂತೆ ಕೇರಳ ಜಿಲ್ಲಾ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದೆ.
ಕಾಂತಾರ (Kantara) ಸಿನಿಮಾಕ್ಕೆ ಕೇರಳ ಜಿಲ್ಲಾ ನ್ಯಾಯಾಲಯ (District Court) ಶಾಕ್ ನೀಡಿದ್ದು, ವರಾಹ ರೂಪಂ (Varaha Roopam) ಹಾಡನ್ನು ಚಿತ್ರಮಂದಿರದಲ್ಲಾಗಲಿ, ಡಿಜಿಟಲ್ ಅಥವಾ ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಾಗಲಿ ಬಳಸುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡಿದೆ. ವರಾಹ ರೂಪಂ ಹಾಡು ಹಕ್ಕುಸ್ವಾಮ್ಯ ಕಾಯ್ದೆಯ ಉಲ್ಲಂಘನೆಯಂತೆ ತೋರುತ್ತಿದೆ ಎಂದು ನ್ಯಾಯಾಲಯ ಭಾವಿಸಿದ್ದು ಅದೇ ಕಾರಣ ಮಧ್ಯಂತರ ತಡೆಯಾಜ್ಞೆ ನೀಡಿದೆ. ವರಾಹ ರೂಪಂ ಹಾಡು ತಮ್ಮ ನವರಸಂ ಹಾಡಿನ ನಕಲು ಎಂದು ಥೈಕ್ಕುಡ್ಡಂ ಬ್ರಿಡ್ಜ್ ಹೆಸರಿನ ಸಂಗೀತ ತಂಡವೊಂದು ಪ್ರಕರಣ ದಾಖಲಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಕೆಇ ಸಾಹಿಲ್, ಥೈಕ್ಕುಡ್ಡಂ ಬ್ರಿಡ್ಜ್ ಹಾಗೂ ಹಾಡಿನ ಮೂಲ ಹಕ್ಕು ಹೊಂದಿರುವ ಮಾತ್ರಭೂಮಿ ಪ್ರಿಂಟಿಗ್ ಆಂಡ್ ಪಬ್ಲಿಕೇಶನ್ ಕಂಪೆನಿಯ ಹೆಸರು ಉಲ್ಲೇಖವಾಗಬೇಕು ಅಥವಾ ಅವರಿಗೆ ಸಲ್ಲಬೇಕಾದುದನ್ನು ಸಲ್ಲಿಸಬೇಕು ಎಂದಿರುವ ಜೊತೆಗೆ, ಕಾಂತಾರ ಸಿನಿಮಾದ ನಿರ್ದೇಶಕ ಅಜನೀಶ್ ಲೋಕನಾಥ್, ಸ್ವತಃ ಒಪ್ಪಿಕೊಂಡಿದ್ದಾರೆ ತಾವು ನವರಸಂ ಹಾಡಿನಿಂದ ಪ್ರೇರಣೆ ಪಡೆದಿರುವುದಾಗಿ ಎಂದಿದ್ದಾರೆ.
ಕಳೆದ ವಾರ ಕೋಳಿಕ್ಕೋಡ್ ನ್ಯಾಯಾಲಯದ ನ್ಯಾಯಾಧೀಶ ಎಸ್ ಸೂರಜ್, ಹಕ್ಕುಸ್ವಾಮ್ಯ ಕಾಯ್ದೆಯಡಿ ವರಾಹ ರೂಪಂ ಹಾಡಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸೀಜ್ ಮಾಡುವಂತೆ ಪೊಲೀಸರಿಗೆ ಸೂಚಿಸಿದ್ದರು. ಅಲ್ಲದೆ ಡಿಜಿಟಲ್ ಹಕ್ಕುಗಳು, ಹಾಡಿನ ಕಂಪೋಸ್ಗೆ ಬಳಸಿದ ನೋಟ್ಗಳನ್ನು ಸಂಗ್ರಹಿಸುವಂತೆ ಹೇಳಿದ್ದರು. ಮೇ 4 ರ ಒಳಗಾಗಿ ತನಿಖೆಯ ಕುರಿತು ವರದಿಗಳನ್ನು ಸಲ್ಲಿಸುವಂತೆ ಸಹ ಸೂಚಿಸಿದ್ದರು. ಫೆಬ್ರವರಿ 8 ರಂದು ಕೇರಳ ಹೈಕೋರ್ಟ್ ಸಹ ವರಾಹ ರೂಪಂ ಹಾಡು ನವರಸಂ ಹಾಡಿನ ಕೃತಿಚೌರ್ಯ ಎಂದಿತ್ತು.
ಕಾಂತಾರ ಸಿನಿಮಾದ ವರಾಹ ರೂಪಂ ಹಾಡು ಬಹಳ ಜನಪ್ರಿಯವಾಗಿದೆ. ಆದರೆ ಇದು ಥೈಕ್ಕುಡ್ಡಂ ಬ್ರಿಡ್ಜ್ ತಂಡ ಮಾಡಿರುವ ನವರಸಂ ಆಲ್ಬಂನ ಹಾಡಿನ ನಕಲು ಎಂದು ಆ ತಂಡದವರು ದಾವೆ ಹೂಡಿದ್ದರು. ಆಗ ಹಾಡಿನ ಬಳಕೆಗೆ ತಡೆಯಾಜ್ಞೆ ನೀಡಲಾಗಿತ್ತು. ಅದರ ಬಳಿಕ ನಡೆದ ವಿಚಾರಣೆಯಲ್ಲಿ ಕಾಂತಾರ ಸಿನಿಮಾಕ್ಕೆ ಹಾಡು ಬಳಕೆಗೆ ಅವಕಾಶ ದೊರಕಿತ್ತಾದರೂ ಪಟ್ಟು ಬಿಡದ ಥೈಕ್ಕುಡ್ಡಂ ಬ್ರಿಡ್ಜ್ ಹಾಗೂ ಹಾಡಿನ ಹಕ್ಕು ಹೊಂದಿರುವ ಮಾತ್ರಭೂಮಿ ಪ್ರಿಂಟಿಗ್ ಆಂಡ್ ಪಬ್ಲಿಕೇಶನ್ ಕಂಪೆನಿಯು ಇದೀಗ ಮತ್ತೊಮ್ಮೆ ಮಧ್ಯಂತರ ತಡೆ ತರಲು ಯಶಸ್ವಿಯಾಗಿದೆ.
ವರಾಹ ರೂಪಂ ಹಾಡಿನ ಬಳಕೆಗೆ ತಡೆ ಬಂದಾಗಲೇ ಅಜನೀಶ್ ಲೋಕನಾಥ್ ಅವರು ಹೊಸದೊಂದು ಹಾಡನ್ನು ಸಂಯೋಜಿಸಿ ಅದನ್ನು ಒಟಿಟಿಗಳಲ್ಲಿ ಪ್ರಸಾರ ಮಾಡಲಾಗಿತ್ತು. ಆದರೆ ಅದು ಪ್ರೇಕ್ಷಕರಿಗೆ ಇಷ್ಟವಾಗಿರಲಿಲ್ಲ. ಆ ಬಳಿಕ ತಡೆಯಾಜ್ಞೆ ತೆರವಾದ ಮೇಲೆ ಮತ್ತೆ ಮೂಲ ಹಾಡು ಹಾಗೂ ಸಂಗೀತವನ್ನೇ ಬಳಸಲಾಗಿತ್ತು. ಇದೀಗ ಮತ್ತೆ ತಡೆಯಾಜ್ಞೆ ಬಂದಿದೆ.
ಕಾಂತಾರ ಸಿನಿಮಾವು 2022 ರ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಆಗಿ ದೊಡ್ಡ ಹಿಟ್ ಆಯಿತು. ಸಿನಿಮಾವನ್ನು ರಿಷಬ್ ಶೆಟ್ಟಿ ನಿರ್ದೇಶನ ಮಾಡಿ ನಟಿಸಿದ್ದಾರೆ ಸಹ. ಹೊಂಬಾಳೆ ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ಸಪ್ತಮಿ ಗೌಡ ನಾಯಕಿ. 16 ಕೋಟಿ ಬಜೆಟ್ನಲ್ಲಿ ನಿರ್ಮಾಣವಾದ ಈ ಸಿನಿಮಾ ಸುಮಾರು 500 ಕೋಟಿ ಕಲೆಕ್ಷನ್ ಮಾಡಿದೆ. ಇದೀಗ ಸಿನಿಮಾದ ಎರಡನೇ ಭಾಗ ಬರುತ್ತಿದ್ದು, ರಿಷಬ್ ಶೆಟ್ಟಿ ಸಿನಿಮಾದ ಕತೆ ರಚಿಸುವಲ್ಲಿ ತೊಡಗಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ